Tuesday, May 14, 2019

Must read incident..


Are we understanding our children needs?

Are we more concerned about what others speak on our children than what our Children really wants?
Is suicide a timid decision?
How difficult the life would have been for someone to choose death as the option..?
Have we ever thought on these questions..?
Read and think..





ಹನಿ ಹನಿಯಾಗಿ ತೊನೆದು ತೂಗಿದ ಪ್ರೀತಿ
ಹರಿದು ಚೂರಾಯಿತೆ ಎದೆಯ ಒಲವಿನಾ ಬೀಡು
ರೆಕ್ಕೆ ಬಡಿದೊತ್ತಿಎತ್ತಿಕೊಳ್ಳುವ ಹಕ್ಕಿ
ಹಾಡಿನ ಜಾಡು ಹಿಡಿಯುತ್ತ ನನ್ನ ಪಾಡು..
ತಪ್ಪಿ ಹೋಯಿತಲ್ಲೆ ಚುಕ್ಕಿ ಬೆಳಕಿನ ಜಾಡು
ಇನ್ನಿಲ್ಲವಾಯಿತೆ ಆ ಹಕ್ಕಿ ಹಾಡು...
ಈ ಹಾಡಿನ ಸಾಲುಗಳ ಅರ್ಥವನ್ನರಿಯದ ನಾನು ನನ್ನ ಮುದ್ದು ಕಂದಮ್ಮನನ್ನು ತೊಟ್ಟಿಲಿಗೆ ಹಾಕಿ ಮಲಗಿಸುತಿದ್ದದ್ದೇ ಈ ಹಾಡಿನ ಸಾಲುಗಳನ್ನು ಹಾಡಿ..ಈ ಹಾಡನ್ನು ಕೇಳಿ ಬೆಳೆದ ನನ್ನ ಮಗಳು, ನನ್ನ ಗೂಡಿಂದ ಮರೆಯಾದಗಲೇ ಈ ಸಾಲುಗಳ ಅರ್ಥ ನನಗಾಗಿದ್ದು. ಈ ತಾಯಿಯ ಆರ್ಥನಾದ ಕೇಳಿ
ನಮ್ಮದು ವಿದ್ಯಾವಂತರ ಕುಟುಂಬ, ಅಮ್ಮ ಅಪ್ಪ ಅಕ್ಕ ಅಣ್ಣ ಎಲ್ಲರೂ ವಿದ್ಯಾವಂತರೂ ಹಾಗೆ ಒಳ್ಳೊಳ್ಳೆ ಹುದ್ದೆಗಳಲ್ಲಿದ್ದರು. ನಾನು ವಿದ್ಯಾವಂತಳೇ ಅತಿ ಚಿಕ್ಕ ವಯಸ್ಸಿಗೆ ನನಗೆ ನನ್ನ ಕೌಶಲ್ಯತೆಗೆ ಒಳ್ಳೆ ಕೆಲಸ, ಹಣ ಕೀರ್ತಿ ಎಲ್ಲವೂ ನನ್ನರಿಸಿ ಬಂದವು. ನಂತರಾ ಒಳ್ಳೇ ಕಡೇ ಮದುವೆಯು ಆಯಿತು. ನನ್ನನ್ನು ನನ್ನ ಗಂಡ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಇಬ್ಬರು ಚೆನ್ನಾಗಿ ದುಡಿತಿದ್ದೆವು. ನೆಮ್ಮದಿ ನಮ್ಮ ಮನೆಯಲ್ಲಿ ತುಂಬು ತುಳುಕುತಿತ್ತು. ಎಲ್ಲವೂ ಸರಿಯಿರುವುದಕ್ಕೆ ಎಲ್ಲಿ ಸಾಧ್ಯ? ನಾನು ನಮ್ಮ ಎಜಮಾನರು ಇಬ್ಬರು ಮಕ್ಕಳಿಗಾಗಿ ಬಹಳ ಹಪಹಪಿಸುತಿದ್ದವು, ಆದರೆ 4 ವರ್ಷಗಳಾದರು ಮಕ್ಕಳಾಗಲಿಲ್ಲ, ಇಬ್ಬರಿಗು ದೈಹಿಕವಾಗಿ ಯಾವುದೇ ಸಮಸ್ಯೆಯಿರಲಿಲ್ಲ, ವೈದ್ಯರುಗಳ ಬಳಿ ಸುತ್ತಾಡಿದೆವು, ಕಂಡ ಕಂಡ ದೇವರುಗಳಿಗೆಲ್ಲ ಕೈ ಮುಗಿದೆವು. ಒಬ್ಬರು ಮಾತ್ರ ನಿಮ್ಮ ಒತ್ತಡ ಕಡಿಮೆ ಮಾಡಿಕೊಳ್ಳಿ ಸಂತಸವಾಗಿರಿ ಮಕ್ಕಳು ಖಂಡಿತ ಆಗುತ್ತದೆ ಎಂದರು.
ಆ ಒಂದು ಭರವಸೆಯ ಮಾತು ಸಾಕಿತ್ತು ನನಗೆ, ನಾನು ನನಗೆ ಮಕ್ಕಳಾಗುತ್ತೆ ಎಂದು ನಂಬತೊಡಗಿದೆ. ಸುಮ್ಮನೆ ಮಾನಸಿಕ ಒತ್ತಡ ಹಾಕಿಕೊಳ್ಳುವುದಕ್ಕಿಂತ ಆಶಾವಾದಿಯಾಗಿ ಇರುವುದು ಒಳ್ಳೆಯದು, ನಮಗೇನು ದೊರಕ ಬೇಕೋ ಅದು ಖಂಡಿತ ದೊರೆಯುತ್ತದೆ ಎಂದುಕೊಂಡೆ. ಅಂತೆಯೇ ನನ್ನ ಜೀವನಶೈಲಿಯಲ್ಲಿ ಒಂದಷ್ಟು ಲವಲವಿಕೆಯ ಬದಲಾವಣೆ ತಂದುಕೊಂಡೆ, ಮಾನಸಿಕ, ಶಾರೀರಿಕ ಆರೋಗ್ಯದ ಕಡೆ ಹೆಚ್ಚು ಗಮನ ಕೊಟ್ಟೆ , ಕೊರಗುವುದನ್ನು ಕಡಿಮೆ ಮಾಡಿದೆ, ಕೆಲವೇ ತಿಂಗಳಲ್ಲಿ ನಾನು ಹಪಹಪಿಸುತಿದ್ದದ್ದು ನನಗೆ ಲಭಿಸಿತು, ನಾನು ಗರ್ಭಿಣಿಯಾಗಿದ್ದೆ. ನನಗೂ ನಮ್ಮ ಮನೆಯವರಿಗು ಆನಂದಕ್ಕೆ ಪಾರವೇ ಇರಲಿಲ್ಲ, ಮರುಭೂಮಿಯಲ್ಲಿ ವರ್ಷಧಾರೆಯಾದಂತಹ ಅನುಭವ, ಸ್ವರ್ಗಕ್ಕೆ ಮೂರೇ ಗೇಣು ಎಂಬಷ್ಟು ಸಂತೋಷ, ಜೀವನದಲ್ಲಿ ಎಲ್ಲವು ದೊರೆತ ಭಾಗ್ಯಶಾಲಿಗಳು ಎಂದು ಕೃತಜ್ಞಳಾಗಿದ್ದೆ. ಆದರೆ ಅದು ಹೆಚ್ಚು ದಿನ ಉಳಿಯಲಿಲ್ಲ.
ನಾನು ಮುದ್ದಾದ ಹೆಣ್ಣುಮಗುವಿಗೆ ಜನುಮ ನೀಡಿದೆ, ನಾನು, ನನ್ನ ಗಂಡ, ಮಗಳು ಎಂದು ಜೀವನ ನೆಮ್ಮದಿಯಾಗಿ ಸಾಗಿತ್ತು. ಅವಳಿಗೆ ಯಾವುದಕ್ಕು ಕೊರತೆ ಹಾಗದಾಗೆ ಬೆಳೆಸಿದೆವು. ನನ್ನ ಮಗಳು ಎಲ್ಲಾದರಲ್ಲು ಮುಂದಿದ್ದಳು. ಅವಳನ್ನು ಓದಿಗೆ ಸೀಮಿತ ಮಾಡದೆ ಸಂಗೀತ, ನೃತ್ಯ ತರಗತಿಗಳಿಗು ಕಳುಹಿಸಿದೆವು. ಅವಳು ಅವೆಲ್ಲವನ್ನು ಅಷ್ಟೇ ಅಚ್ಚುಕಟ್ಟಾಗಿ ಆಸಕ್ತಿಯಿಂದ ಕಲೆತಳು, ಎಲ್ಲಾವಿಷಯದಲ್ಲೂ ಕುತೂಹಲ, ಎಲ್ಲಾದರಲ್ಲೂ ಗೆಲುವು. ಅವಳದ್ದು ಬಹುಮಾನಗಳ ಹಿಂಡೇ ಇದೆ. ನನ್ನ ಮಗಳನ್ನು ಕಂಡರೇ ನಮಗೇ ಬಹಳ ಹೆಮ್ಮೆ ಹಾಗೆ ಅವಳ ಗುಣ, ಲವಲವಿಕೆ, ಚುರುಕನ್ನು ಕಂಡು ಎಷ್ಟೋ ಜನ ಅವಳನ್ನು ನಾವು ಸಾಕಿಕೊಳ್ಳುತ್ತೇವೆ ದತ್ತು ಕೊಡುವಿರಾ ಎಂದದ್ದು ಇದೆ. ನಮ್ಮ ಮಗಳೇ ನಮ್ಮ ಜೀವನದ ಉದ್ದೇಶ, ನಮ್ಮ ಮಗಳೇ ನಮ್ಮ ಕಣ್ಣಾಗಿದ್ದಳು.
ನನ್ನ ಮಗಳು ಶಾಲೆ ಮೆಟ್ಟಿಲೇರಿದ ನಂತರ ನಾನು ಮತ್ತೆ ಕೆಲಸಕ್ಕೆ ಹೋಗಲು ಶುರುಮಾಡಿದೆ. ಸಂಜೆ ಮನೆಗೆ ಬಂದಾಗ ನನ್ನ ಮಗಳು ಕಾಫಿ ಬೆರೆಸಿ ನನಗೆ ಕೊಟ್ಟು ಶಾಲೆಯಲ್ಲಿ ನಡೆದ ಘಟನಾವಳಿಗಳನ್ನ ವಿವರಿಸುತ್ತಿದ್ದಳು. ನನ್ನ ಆಫೀಸಿನಲ್ಲಿ ದಿನ ಹೇಗಿತ್ತು ಎಂದು ವಿಚಾರಿಸುತ್ತಿದ್ದಳು. ಅಷ್ಟು ಜಾಣೆ ನನ್ನ ಮಗಳು. ನನಗೆ ತಾಯಿ ಆಗಿದ್ದಳು. ನನ್ನ ನೋವುಗಳನ್ನು ಆಲಿಸಿ, ನನ್ನ ಕಣ್ಣೀರು ಒರೆಸಿ, ಯಾವುದಕ್ಕು ಚಿಂತಿಸಬೇಡ ಅಮ್ಮ ನಾನಿರುವೆ ಎನ್ನುತ್ತಿದ್ದಳು, ಆ ನನ್ನ ದೇವತೆ. ನಾನು ನಮ್ಮವರು ಏನಾದರು ಕಿತ್ತಾಡಿಕೊಂಡರೇ, ಯಾರ ಪರನು ವಹಿಸದೆ ಜಾಣ್ಮೆಯಿಂದ ನಗಿಸುಬಿಡುತ್ತಿದ್ದಳು, ಚತುರೆ ನನ್ನ ಮಗಳು.
ನನ್ನ ಮಗಳ ಆಟ ಪಾಠ ಬೆಳವಣಿಗೆಗಳ ನಡುವೆ ಸಮಯ ಹೋಗಿದ್ದೆ ಗೊತ್ತಾಗ್ಲಿಲ್ಲ, ಅವಳು ಬೆಳೆದದ್ದೆ ಗೊತ್ತಾಗ್ಲಿಲ್ಲ, ಹತ್ತನೆ ತರಗತಿಯಲ್ಲಿ ಶಾಲೆಗೆ ಮೊದಲು ಬಂದು, ತನಗಿಷ್ಟ ಬಂದ ಕಾಲೇಜಿನಲ್ಲಿ, ತನಗಿಷ್ಟ ಬಂದ ವಿಷಯವನ್ನ ಆಯ್ದು ಓದುತ್ತಿದ್ದಳು, ಹೀಗೆ ಮೊದಲನೇ ಪಿಯುಸಿ ಪರೀಕ್ಷೆಗಳು ಮುಗಿದು , ಸೆಕೆಂಡ್ ಪಿಯುಸಿ ವಿಶೇಷ ತರಗತಿಗಳಿಗೆಂದು ಕಾಲೇಜಿಗೆ ಹೋಗಿದ್ದಳು. ನಾನು ಎಂದಿನಂತೆ ಆಫೀಸಿಗೆ ಹೋದೆ. ಅಂದು ಮನಸ್ಸಲ್ಲಿ ಹೇಳಲಾಗದ ಸಂಕಟ, ಏನೋ ಹಿಂಸೆ, ಕರುಳೆಲ್ಲ ಒಂದು ತರಹ ನೋವು ಯಾಕೋ ಒಂದು ರೀತಿ ವಾಂತಿ ಬಂದಹಾಗೆ ಏನೋ ಹಿಂಸೆ, ನಾನು ನನಗೆ ಗ್ಯಾಸ್ಟ್ರಿಕ್ ಹೆಚ್ಚಾಯಿತೆಂದು ಲೀವ್ ಹಾಕಿ ಮನೆಗೆ ಮರಳಿದೆ.
ಅಲ್ಲೀ, ಬಾಗಿಲು ತೆರೆದರೇ, ನನ್ನಕಣ್ಣೇ ನಾ ನಂಬದಾದೆ, ಕಣ್ಣಿಗೆ ಕತ್ತಲು ಆವರಿಸಿ ಕೆಳಗೆ ಬಿದ್ದೆ. ಎಚ್ಚರವಾದಾಗ ನನ್ನವರು ನನ್ನಕೈ ಹಿಡಿದು ಬಿಕ್ಕಿಸುತ್ತಿದ್ದರು. ನನಗಾಗ ಎಲ್ಲಾ ನೆನಪಾಯಿತು, ನಾನು ಮನೆಗೆ ಬಂದು ಬಾಗಿಲು ತೆರೆದಾಗ ನನ್ನ ಕರುಳ ಬಳ್ಳಿ, ನನ್ನ ಕಣ್ಣು, ನನ್ನ ದೇವತೆ ಫ್ಯಾನಲ್ಲಿ ನೇತಾಡುತ್ತ ವಿಲವಿಲ ಒದ್ದಾಡುತ್ತಿದ್ದಳು, ಆ ದೃಶ್ಯ ಇನ್ನು ಕಣ್ಣಿಗೆ ಕಟ್ಟಿದ ಹಾಗೆ ಇದೆ. ‘ಅಯ್ಯೋ ಮಗುವೆ, ಯಾಕ್ಹೀಗೆ ಮಾಡಿದ್ಯಮ್ಮ? ಈ ಅಮ್ಮನ ಬಿಟ್ಟು ಯಾಕೆ ಹೀಗೆ ಮಾಡಿದೆ’. ನನಗಾಗ ಗಾಬರಿಯಾಗದೇ ಇದ್ದಿದ್ದರೇ ಮಗಳನ್ನು ಉಳಿಸುತ್ತಿದೆನೇನೋ, ಆ ಗಾಬರಿಯಿಂದ ಕೆಳಗೆ ಬಿದ್ದೆ, ನನ್ನ ಮಗಳ ಸಾವಿಗೆ ನಾನೆ ಕಾರಣವಾದೆ. ಇಲ್ಲಾ ಇನ್ನೊಂದು ಸ್ವಲ್ಪ ಹೊತ್ತು ಮೊದಲೇ ಬಂದಿದ್ದರೇ, ಅವಳು ಈ ಪ್ರಯತ್ನಕ್ಕೆ ಇಳಿಯುವುದಕ್ಕೆ ಅಡ್ಡಿಯಾಗುತ್ತಿದ್ದೆ, ನನ್ನ ಮನಸ್ಸು ಹೇಳಿತು ಸಂಕಟ ಪಡುತ್ತಾ ಹೇಳಿತು, ಹೋಗು ಮನೆಗೆಂದು, ನಾನೆ ತಡವಾಗಿ ಹೋದೆ, ಹೋಗುವಷ್ಟರಲ್ಲಿ ನನ್ನ ಕರುಳೆ ಇಲ್ಲವಾಯಿತೆ, ನಾನೆಂತ ಪಾಪಿ! ಮಗಳು ಒದ್ದಾಡುತ್ತ ನರಳಿ ನರಳಿ ಸಾಯುವುದನ್ನ ಕಣ್ಣಾರೆಕಂಡಿಯು ಏನು ಮಾಡಲಾಗದ ಅಸಹಾಯಕ ಪಾಪಿ ತಾಯಿ ನಾನು, 15 ವರ್ಷ ಕಣ್ಣಲ್ಲಿ ಕಣ್ಣಿಟ್ಟು , ಭವಿಷ್ಯವೇ ನೀನು ಮಗಳೇ ಎಂದು ಪ್ರೀತಿ ಎಲ್ಲಾ ಧಾರೆ ಎರೆದು ಬೆಳೆಸಿದ ನನ್ನ ಮಗು, ಬೇಡಿ ಬೇಡಿ ಪಡೆದ ವರ ಈಗ ? ನನ್ನನೋವನ್ನ ಹೇಗೆತೋಡಲಿ, ಯಾರಾದರು ನನ್ನನ್ನು ಕತ್ತರಿಸಿ ಬಿಸಾಡಬಾರದೆ ಆಗಲಾದರು ನೋವು ಕಡಿಮೆಯಾದೀತೇನೋ,
ಈ ಪಾಪಿ ಜನ್ಮ ಹೇಗೆ ಸಾಯುತ್ತೆ ಇಷ್ಟು ಬೇಗ, ಒಬ್ಬಳೇ ಒಬ್ಬಳು ಮಗಳು ಕಣ್ಮುಚ್ಚಿದಳು. ಪೊಲೀಸರು, ನೆಂಟರಿಶ್ಟರ ಕೊಂಕು ನೋಟಗಳು, ಪ್ರಶ್ನೆಗಳು, ನನಗೆ ಉಸಿರುಗಟ್ಟಿಸುತಿತ್ತು. ಬಂದವರೆಲ್ಲರು ‘ಸಮಾಧಾನ ಮಾಡಿಕೊಳ್ಳಿ, ಹೀಗಾಗ ಬಾರದಿತ್ತು, ಅಲ್ಲಾ ಈಗಿನ ಕಾಲದ ಮಕ್ಕಳಿಗೆ ಏನು ಅನ್ನೊಕ್ಕಾಗಲ್ಲ, ಹೇಡಿಗಳ ಹಾಗೆ ಪ್ರಾಣ ಕಳೆದುಕೊಳ್ಳುತ್ತಾರೆ, ಅಲ್ಲಾ ನೀವೇನಾದರು ಅಂದಿರಾ ಹೇಗೆ?’ ಕುತೂಹಲ, ಏನಾಯಿತೆಂದು ತಿಳಿಯದಿದ್ದರೆ ಬೇರೆಯವರ ಹತ್ತಿರ ಗಂಟೆಗಟ್ಟಲೆ ಚರ್ಚೆ ಮಾಡೋದಾದರು ಹೇಗೆ ಅಲ್ಲವೇ? ಇನ್ನು, ವಯಸ್ಸಿನ ಹೆಣ್ಣುಮಗಳು ಸತ್ತರೆ ಈ ಸಮಾಜದ ಆ ಅನುಮಾನದ ನೋಟ, ಅಸಹ್ಯ ಅರ್ಥ ಕಲ್ಪಿಸ ದುರ್ಭುದ್ದಿ, ಈ ನೋಟಗಳು ನನ್ನ ಮಗಳು ನೇಣು ಹಾಕಿ ಒದ್ದಾಡಿದ ದೃಶ್ಯಕ್ಕಿಂತ ಭಯಾನಕ, ಅಷ್ಟೇ ಹಿಂಸೆ ಕೊಡುತಿತ್ತು.
ಇವೆಲ್ಲದಕ್ಕಿಂತ ನನ್ನ ಕರುಳನ್ನು ನಾಟುವ ಮಾತುಗಳೆಂದರೇ, ನನ್ನ ಮಗಳನ್ನು ಹೇಡಿ, ಜೀವನ ಎದುರಿಸಲು ಆಗದೆ ಆತ್ಮಹತ್ಯೆ ಮಾಡಿಕೊಂಡಳು ಎಂಬ ನುಡಿಗಳು, ನನ್ನನ್ನು ಕಾಡುವ ಪ್ರಶ್ನೆಎಂದರೇ, ನಿಜಕ್ಕು ಒಬ್ಬ ವ್ಯಕ್ತಿ ಪ್ರಾಣ ಬಿಡುವುದು ಹೇಡಿ ಕಾರ್ಯವೇ, ನನ್ನ ಮಗಳು ನೇಣು ಹಾಕಿಕೊಂಡದನ್ನು ನೋಡೆ ಬಿದ್ದುಹೋದೆ ನಾನು, ನನಗಾಗಿ ನನ್ನ ಮಗಳಿಗಾಗಲಿ ರಕ್ತ ಎಂದರೇ ವಿಪರೀತ ಭಯ, ನನ್ನ ಮಗಳಿಗೆ ಒಂದು ಇಂಜೆಕ್ಷನ್ ಕೊಡಿಸುವುದಕ್ಕೆ, ನನ್ನ ಗಂಡ ಹರಸಾಹಸ ಪಡುತಿದ್ದರು, ಅವಳಿಗೆ ಒಂದು ಇಂಜೆಕ್ಷನ್ ಚುಚ್ಚಿಸಿಕೊಳ್ಳೋದಕ್ಕೆ ಭಯ, ಟೀವಿಯಲ್ಲಿ ಯಾರಾದರು ಸಾಯುವ ದೃಶ್ಯಕಂಡರೇ ನನ್ನ ಮಗಳು ಹೆದರಿ ನಡುಗುತಿದ್ದಳು, ಸಾವಿನ ಬಗೆಗೆ ಭಯ, ಹಾಗೆ ಬದುಕುವುದಕ್ಕೆ ಅಷ್ಟು ಆಸೆ ಇತ್ತು ನನ್ನ ಕಂದಮ್ಮನಿಗೆ. ಅಂತಹವಳು ಅಷ್ಟು ಭಯ ಇರುವವಳು ಹಗ್ಗಬಿಗಿದು ಕುತ್ತಿಗೆ ಕತ್ತರಿಸಿಕೊಳ್ಳುವ ನಿರ್ಧಾರ ತೆಗೆದುಕೊಂಡಳೆಂದರೇ, ಅವಳಿಗೆ ಅದೆಂತ ಧೈರ್ಯ ಬಂದಿರಬೇಕು, ನನ್ನ ಮಗಳನ್ನು ಕಳೆದುಕೊಂಡು ಕಂಗಾಲಾಗಿರುವ ನನಗೂ ಖಂಡಿತ ಜೀವ ತ್ಯಾಗ ಮಾಡುವ ಧೈರ್ಯ ಇಲ್ಲ. ಅದ್ಹೇಗೆ ಅವಳನ್ನು ಹೇಡಿ ಎನ್ನುತ್ತಾರೆ?
ನನ್ನ ಮಗಳು ಪ್ರಾಣತ್ಯಾಗ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದಳೆಂದರೇ, ಬದುಕುವುದು ಅದೆಷ್ಟು ನೋವಾಗಿತ್ತು ನನ್ನ ಕಂದಮ್ಮನಿಗೆ? ನೇಣು ಬಿಗಿದು ಒದ್ದಾಡಿ ಪ್ರಾಣವನ್ನಾದರು ಬಿಡುವೆ ಆದರೆ, ಬದುಕೋದು ಅಸಾಧ್ಯ ಎಂಬ ನಿರ್ಧಾರ ಬರುವ ಮುನ್ನ, ಅದೆಷ್ಟು ಅಸಹಾಯಕತೆ, ಅದೆಷ್ಟು ಹತಾಶೆ, ಜೀವನದಲ್ಲಿ ಜಿಗುಪ್ಸೆ ಬಂದಿರಬೇಡ? ಯಾಕೆ ಏನು ಎಂಬ ಪ್ರಶ್ನೆಗಳನ್ನು ಕೆದಕಿದಾಗ ಅವಳ ಸ್ನೇಹಿತರು, ಅವಳ ಶಿಕ್ಷಕರು ಎಲ್ಲರು ಒಂದೊಂದು ಬಗೆಯ ಉತ್ತರ ನೀಡಿದರು, ಕಾಲೇಜಿನಲ್ಲಿ ಅಂತದ್ದೇನು ನಡೆದಿರಲಿಲ್ಲ, ಆದರೆ ಇವಳಿಗು ಇವಳ ಸ್ನೇಹಿತೆಗು ಒಂದು ಜಗಳವಾಗಿದ್ದಾಗಿಯು, ಅದನ್ನು ಅವರಿಬ್ಬರು ಮಾತಾಡಿ ಬಗೆಹರಿಸಿಕೊಂಡಿದ್ದರು ಎಂದಿದ್ದು ತಿಳಿಯುತು. ಇನ್ನು ಡಾಕ್ಟರುಗಳು ಇದು ಮಾನಸಿಕ ಖಾಯಿಲೆಯು ಇರಬಹುದು, ಈ ವಯಸ್ಸಿನಲ್ಲಿ ಮಿದುಳಲ್ಲಿ ದೇಹದಲ್ಲಿ ನಾನ ಬದಲಾವಣೆಗಳಾಗುತ್ತಿರುತ್ತವೆ, ಅದರಿಂದ ಕೆಲವೊಮ್ಮೆ ಖಿನ್ನತೆಗೆ ಒಳಗಾಗಬಹುದು ಅದರಿಂದಲೂ ಹೀಗೆ ಮಾಡಿಕೊಳ್ಳಬಹುದು ಎಂದರು.
ಮಗಳನ್ನು ಕಳೆದುಕೊಂಡ ನಾನು ಅವಳ ಸಾವಿನ ಕಾರಣ ತಿಳಿದ ಮಾತ್ರಕ್ಕೆ ಮಗಳು ಮರಳುವುದಿಲ್ಲ, ನನಗೆ ತಿಳಿದಿರುವ ಕಾರಣ ಒಂದೇ, ನನ್ನ ಆ ಚಿಕ್ಕ ಮಗುವಿಗೆ, ಈ ಜಗತ್ತಿನಲ್ಲಿ ಇಷ್ಟು ಕೋಟಿಜನರಿರುವ ಈ ದೊಡ್ಡ ಪ್ರಪಂಚದಲ್ಲಿ ತಾನು ಅಸಹಾಯಕಳು, ತಾನು ಒಂಟಿ, ತನಗೆ ಸಾವು ಬಿಟ್ಟರೇ ಬದುಕಿನಲ್ಲಿ ಬೇರೆ ಎಲ್ಲಾ ದಾರಿಗಳು ಮುಚ್ಚಿಹೋಗಿವೆ ಎಂದೆನಿಸಿದೆ, ನನ್ನ ಮಗಳು ಹೇಡಿಯಲ್ಲ, ಅವಳದ್ದು ಹೇಡಿ ಕಾರ್ಯವು ಅಲ್ಲ, ಅದೊಂದು ದುಸ್ಸಾಹಸ, ನಾವು ಹೆತ್ತವರಾಗಿ ಅವಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸದರೇ, ನಮ್ಮ ಕರ್ತವ್ಯ ಮುಗಿತು ಎಂದುಕೊಳ್ಳುತ್ತೇವೆ, ಅದರೇ ಅವರ ಭಾವನೆಗಳು, ಅವರ ಯೋಚನೆಗಳು, ಅವರ ಮಾನಸಿಕ ಬೆಳವಣಿಗೆಗೆ ಬೇಕಾಗಿರುವ ಆ ವಾತಾವರಣವನ್ನ ಕಲ್ಪಿಸಿಕೊಡುತ್ತಿದ್ದೇವ ಎಂಬ ಪ್ರಶ್ನೆ ಬಂದರೇ ಅದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಅವರು ಓದಲ್ಲಿ ಮುಂದಿರಬೇಕು, ಅವರು ಎಲ್ಲಾ ತರಗತಿಯಲ್ಲೂ ಮುಂದಿರಬೇಕು, ಅವರನ್ನು ನಾಲ್ಕು ಜನರು ಮೆಚ್ಚಬೇಕು, ಆಗ ನಮಗೆ ಹೆಮ್ಮೆ, ಆಗ ನಮಗೆ ಒಳ್ಳೇ ಮಕ್ಕಳು ಹುಟ್ಟೀದ್ದಾರೆಂದು ಮೆರಿತೀವಿ, ಆದರೆ ನಮ್ಮ ಮಕ್ಕಳ ಮನಸ್ಸಲ್ಲಿ ಏನಿದೆ, ಅವರ ಅವಶ್ಯಕತೆ ಏನು, ಅವರಿಗೆ ನಿಜವಾದ ಖುಷಿ ಯಾವುದರಲ್ಲಿ ಇದೆ ಎಂದು ಅರಿಯುವ ಗೋಜಿಗೆ ಹೋಗುತ್ತೇವ? ನಮ್ಮ ಖುಷಿಯೆ ಅವರ ಖುಷಿ ಆಗುವುದೇ? ನಮ್ಮ ಖುಷಿ ಅವರು ನೆರವೇರಿಸಲಿ ಎಂಬ ನಮ್ಮ ನಿರೀಕ್ಷೆಗಳಿಗೆ ಅವರಿಗೆ ಎಲ್ಲಾ ಕೊಡಿಸಿ ನಂತರ ಇಷ್ಟೆಲ್ಲಾ ಮಾಡಿದರು ನಾವು ಅಂದುಕೊಂಡಂತೆ ಬೆಳೆಯುತ್ತಿಲ್ಲಾ ಎಂದು ಅವರನ್ನು ಟೀಕಿಸುತ್ತಿದ್ದೀವ? ಹೋಗಲಿ ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೀವ ಅಥವಾ ಅವರೇ ನಮ್ಮನ್ನು ಅರ್ಥ ಮಾಡಿಕೊಳ್ಳಲಿ ಎಂದು ಬಯಸುತ್ತಿದ್ದೀವ? ಎಲ್ಲಾ ಪ್ರಶ್ನೆಗಳೇ..
ಇದೀಗ ಟೀಕೆ, ಕೊಂಕು ನೋಟಗಳ ನಡುವೆ, ನನ್ನ ಮಗಳಿಗೆ ಒಳ್ಳೆ ತಾಯಿಯಾಗಲಿಲ್ಲವೇ ಎಂಬ ಪಾಪಪ್ರಜೆÐಯ ಪ್ರಶ್ನೆಯಷ್ಟೆ ನನ್ನ ಪಾಲಿಗೆ ಉಳಿದಿದೆ. ಬರುಡಾದ ಈ ಕರುಳಿಗೆ ನನ್ನ ಮಗಳ ನೆನೆಪು, ನನ್ನ ಮಗಳ ನಗುವಷ್ಟೇ ಆಸರೆ.

Wednesday, May 1, 2019

Have you ever said no..?

CAN   YOU  SAY  NO?



‘ಇಲ್ಲಾ’, ಎರಡಕ್ಷರದ ಈ ಪದ ನನ್ನ ಜೀವನದ ದಿಕ್ಕನ್ನೆ ಬದಲಿಸುತ್ತೆ ಎಂದು ನಾನು ಎಂದಿಗು ಎಣಿಸಿರಲಿಲ್ಲ. ಈ ಪದವನ್ನು ಬಳಸುವಷ್ಟರಲ್ಲಿ ಸಮಯ ಬಹಳ  ಮುಂದುವರೆದಿತ್ತು. ಈ ಪದವನ್ನ ಬಳಸೋದು ಎಷ್ಟು ಕಷ್ಟವಾಯ್ತು ಗೊತ್ತ?, ಇದೇನು ಇಲ್ಲಾ ಅನ್ನೋಕೆ ಅಷ್ಟು ಕಷ್ಟನಾ ಎಂದು ಆಶ್ಚರ್ಯವಾಗಬಹುದು, ಆದರೆ ಇಲ್ಲಾ ಎಂಬ ಈ ಪದ ನಾನು ಬಳಸಬಹುದು ಎಂದು ನಾ ಅರಿಯೋಕೆ ಸಾಕಷ್ಟು ವರ್ಷಗಳು ಹಿಡಿದವು. ಈ ನನ್ನ ಅಂತರಾಳವನ್ನ ಇಂದು ಬಿಚ್ಚಿಡುತ್ತಿದ್ದೇನೆ.

ಮಧ್ಯಮವರ್ಗದ ಕುಟುಂಬದ ಹೆಣ್ಣುಮಗಳು ನಾನು. ನಮ್ಮದು ಕೂಡು ಕುಟುಂಬ. ಅಪ್ಪ, ಅಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಅಜ್ಜಿ, ತಾತ, ಚಿಕ್ಕಪ್ಪನ ಮಕ್ಕಳು ಎಲ್ಲರು ಒಟ್ಟಿಗೆ ಇದ್ದೆವು. ನಮ್ಮ ಮನೆಯ ಪೂರ್ತಿ ನಿರ್ಧಾರಗಳನ್ನ ನನ್ನ ಅಪ್ಪನೇ ತೆಗೆದುಕೊಳ್ಳುತಿದ್ದರು. ಅವರ ವಿರುದ್ಧ ಯಾರು ಚಕಾರ ಎತ್ತುತಿರಲಿಲ್ಲ. ಎಲ್ಲರು ಅವರು ಹೇಳಿದಂತೆಯೆ ನಡೆದು ಕೊಳ್ಳುತ್ತಿದ್ದರು. ನನಗಾಗ 7 ವರ್ಷ, ನಾನು ನಮ್ಮ ಮನೆಯವರೆಲ್ಲರು ಯುಗಾದಿ ಹಬ್ಬಕ್ಕಾಗಿ ಬಟ್ಟೆಕೊಳ್ಳಲು ಹೋಗಿದ್ದೆವು. ನನಗೆ ಮತ್ತು ನನ್ನ ಚಿಕ್ಕಪ್ಪನ ಮಗಳಿಗೆ ಬಟ್ಟೆ ಆರಿಸುತಿದ್ದಾಗ, ನಾನು ಒಂದು ಕಂದು ಬಣ್ಣದ ನಿಕ್ಕರ್ ಮತ್ತೆ ಚರ್ಮದ ಬಣ್ಣದ ಒಂದು ಶರ್ಟ್‍ನ್ನು ಆಯ್ದು ಇದೇ ಬೇಕು ಎಂದು ಅಮ್ಮನ ಬಳಿ ಕೊಂಡೊಯ್ಯುವಾಗ ನನ್ನ ಚಿಕ್ಕಪ್ಪನ ಮಗಳು ಅದನ್ನು ಕಂಡು ನಕ್ಕು, ನನ್ನ ಕೈಯಿಂದ ಕಸಿದು ಎಲ್ಲರ ಬಳಿ ಹೋಗಿ, ‘ನೋಡಿ ಅಕ್ಕ ಎಂತ ಬಟ್ಟೆ ಆರಿಸಿದ್ದಾ¼’É ಎಂದು ತೋರಿಸಿ ನನ್ನ ಮೇಲೆ ಹಾಸ್ಯ ಮಾಡಿದಳು. ಹಬ್ಬಕ್ಕೆ ಯಾರಾದರು ಈತರಹ ಬಟ್ಟೆ ಹಾಕ್ತಾರ? ಎಂದು ಹುಚ್ಚಾಪಟ್ಟೆ ನಕ್ಕಿದಲ್ಲದೆ ನನಗೆ ಒಳ್ಳೆ ಟೇಸ್ಟ್ ಇಲ್ಲ ಎಂದು ಛೇಡಿಸಿದಳು. ಅವಳೊಡನೆ ಅಮ್ಮ, ಚಿಕ್ಕಮ್ಮ ಎಲ್ಲರು ನಕ್ಕು, ಸಾಲದಕ್ಕೆ ಅಪ್ಪ, ‘ನಾವು ದೊಡ್ಡವರು ಏನಕ್ಕೆ ಇರುವುದು ನಮಗೆ ಗೊತ್ತು ನಿಮಗ್ಯಾವುದು ಇಷ್ಟ ಯಾವುದು ಇಷ್ಟವಿಲ್ಲ’ ಎಂದು ಹೇಳಿ ನಾನು ಹಾಕಬೇಕೆಂದಿರುವ ಬಟ್ಟೆಯನ್ನ ಅವರೇ ಆಯ್ದರು. ಅವರು ಆಯ್ದ ಫ್ರಾಕ್ ನನಗೆ ಸ್ವಲ್ಪವು ಹಿಡಿಸಿರಲಿಲ್ಲ. ಆದರೆ ನನಗೆ ಟೇಸ್ಟ್ ಇಲ್ಲದ ಕಾರಣ ಅವರ ಆಯ್ಕೆಯೆ ನನಗೆ ಸರಿ ಎಂದು ನಂಬಿದೆ. ಅವರು ಆಯ್ದ ಬಟ್ಟೆಯೆ ನನಗೆ ಇಷ್ಟವೇನೊ ಎಂದು ನಂಬಿದೆ. ಆದರು ಮನಸ್ಸಲ್ಲಿ ಏನೊ ಒಂದು ರೀತಿಯ ಹಿಂಸೆ. ಹಾ! ನಾನು ನಿಕ್ಕರ್ ಆಯ್ಧ ಹಾಸ್ಯ ಅಲ್ಲಿಯೇ ನಿಲ್ಲಲಿಲ್ಲ, ಮನೆಗೆ ಬಂದು ಗೆಳೆಯರ ಬಳಿ ತಾತನ ಬಳಿ ಎಲ್ಲಾ ಹೇಳಿ, ಸಾಲದಕ್ಕೆ ನಮ್ಮ ಅಮ್ಮ, ಚಿಕ್ಕಮ್ಮ ನನಗೆ ಇನ್ನು ಬುದ್ದಿ ಸಾಲದು, ನನ್ನ ತಂಗಿಗೆ ಇರುವ ಟೇಸ್ಟ್ ನನಗಿಲ್ಲವೆಂದು ಮಾತಾಡಿಕೊಂಡದ್ದು ಆಯ್ತು. ಅಲ್ಲಿಗೆ ನಾನು ನನ್ನ ಆಯ್ಕೆಗಳು ಟೇಸ್ಟ್‍ಲೆಸ್ ಇರಬಹುದು ಎಂದು ನಂಬಲು ಶುರುಮಾಡಿದೆ. ಹಾಗೆ ಸದ್ದಿಲ್ಲದೆ ನನ್ನ ಇಷ್ಟಗಳನ್ನು ಬಹಿರಂಗ ಪಡಿಸಲು ಒಂದು ತೆರನಾದ ಭಯ ನನ್ನನ್ನು ಆವರಿಸಿತು. ಮನೆಯಲ್ಲಿ ಎಲ್ಲರು ಸರಿ ಎಂದಿದಕ್ಕೆ ಇಷ್ಟವೋ ಕಷ್ಟವೋ ತಲೆತೂಗಿಸುತಿದ್ದೆ.

ಹೀಗೊಮ್ಮೆ ಮನೆಯಲ್ಲಿ ನೆಂಟರಿಷ್ಟರು ಯಾರೊ ಬಂದಿದ್ದರು, ಅವರು ನನಗು ನನ್ನ ಚಿಕ್ಕಪ್ಪನ ಮಗಳಿಗು ದೊಡ್ಡವರಾದ ಮೇಲೆ ಏನಾಗಬೇಕೆಂದು ಯೋಚಿಸಿದ್ದೀರಿ ಎಂದರು, ನನ್ನ ತಂಗಿ ನಾನು ಡಾಕ್ಟರ್ ಆಗಬೇಕೆಂದಿರುವೆ ಎಂದು ಚುಟುಕಾಗಿ ಹೇಳಿ ಎಲ್ಲರ ಮೆಚ್ಚುಗೆಗೆ ಪಾತ್ರಳಾದಳು. ನನಗೋ ಗಾಬರಿ ನಾನೇನಾದರು ಎಲ್ಲರಿಗು ಹಿಡಿಸದಿದ್ದನ್ನು ಉತ್ತರಿಸಿ ಬಿಟ್ಟರೇ ಎಂಬ ಭಯ, ನಕ್ಕು ಬಿಟ್ಟರೆ ಎಂಬ ಅಳುಕು. ನಾನೇಗಾಬೇಕೆಂದಿರುವೆ ಎಂದು ಆಲೋಚಿಸುವುದಕ್ಕಿಂತ ಇವರೆಲ್ಲರು ಮೆಚ್ಚುವುದೇನು ಎಂದು ಯೋಚಿಸಿ ಪ್ರತಿದಿನ ಅಪ್ಪ, ಚಿಕ್ಕಪ್ಪ ಎಲ್ಲರು ನೋಡುವ ಕೃಷಿ ಕಾರ್ಯಕ್ರಮ ತಲೆಗೆ ಬಂತು ಪಟ್ಟಂತ ನಾನು ರೈತ ಆಗುತ್ತೇನೆ ಎಂದೆ. ಎಲ್ಲರು ಜೋರಾಗಿ ನಗಲು ಆರಂಭಿಸಿಬಿಟ್ಟರು. ನನ್ನ ಅಪ್ಪ ಕಣ್ಣು ಕೆಂಪಾಗಿಸಿ, ‘ನನ್ನ ಮಗಳಿಗೆ ಇನ್ನೂ ಏನು ತಿಳಿಯದು ಅವಳನ್ನ ಇಂಜಿನಿಯರೆ ಮಾಡೋದು ಎಂದು ನಿರ್ಧರಿಸಿಬಿಟ್ಟರು’. ನಾನೊಂತು ನಾನೇನೊ ಮಾಡಬಾರದ್ದು ಮಾಡಿಬಿಟ್ಟೆ ನನಗ್ಯಾಕೆ ಸರಿಯಾಗಿ ಮಾತಾಡೋಕೆ ಬರಲ್ಲ ಎಂದು ನನ್ನನ್ನೆ ಶಪಿಸಲಾರಂಭಿಸಿದೆ. ನನ್ನ ತಂಗಿಯಂತು ಇದನ್ನೇ ಹಿಡಿದು ಒಂದು ವಾರ ನನ್ನನ್ನು ಛೇಡಿಸಿದಳು. ಯಾಕೆ ಹೀಗೆ ನಾನೇನು ತಪ್ಪು ಹೇಳಿದೆ ಅರ್ಥವೇ ಆಗಲಿಲ್ಲ. ಅವತ್ತು ರಾತ್ರಿ ಅಪ್ಪ, ಅಮ್ಮನ ಬಳಿ ಬಂದು ‘ನಿನ್ನ ಮಗಳಿಗೆ ಮಾತಾಡದಿದ್ದರು ಪರ್ವಾಗಿಲ್ಲಾ, ಎಲ್ಲರ ಮುಂದೆ ನನ್ನ ಮಾನ ಕಳೀಬೇಡ ಅಂತ ಬುದ್ದಿ ಹೇಳು’ ಎಂದು ಸಿಡುಕಿದರು. ಅಮ್ಮ ಮಾರನೆ ದಿನ ನನ್ನ ಬಳಿ ಬಂದು ‘ಅಪ್ಪ ಮೆಚ್ಚುವ ಹಾಗೆ ನಡೆದು ಕೊಳ್ಳಬೇಕು, ಅವರು ನಮಗಾಗಿ ದುಡೀತಿದ್ದಾರೆ, ಅವರಿಗೆ ಖುಷಿ ಪಡಿಸಬೇಕು, ಅವರೇನೆ ಮಾಡಿದರು ನಮ್ಮ ಒಳ್ಳೇದಕ್ಕೆ, ಮಗಳಾಗಿ ಅವರು ಹೇಳಿದಂತೆ ನಡೆದುಕೊಳ್ಳುವುದು ನಿನ್ನ ಕರ್ತವ್ಯ, ನಿನಗೇನು ಸರಿ ನಿನಗೇನು ಇಷ್ಟ ಹೆತ್ತವರಾದ ನಮಗೆ ಚೆನ್ನಾಗಿ ಗೊತ್ತು’ ಎಂದು ಮಾರುದ್ದ ಭಾಷಣ ಮಾಡಿದರು. ಆ ಭಾಷಣ ಆ ವಯಸ್ಸಿಗೆ ನನಗೆ ಅಚ್ಚಾಗಿ ಉಳಿಯಿತು. ಅಲ್ಲಿಂದ ನಾನು ಮತ್ತು ನನ್ನ ನಿರ್ಧಾರಗಳು ಎರಡರ ನಡುವೆ ಪೈಪೋಟಿ ನಡೆಯುತ್ತಲೆ ಹೋದವು.

ಮನೆಯಲ್ಲಿ ನಮಗೆ ಯಾವುದಾದರು ಪಠ್ಯೇತರ ತರಗತಿಗಳಿಗೆ ಸೇರಿಸುವುದರ ಬಗ್ಗೆ ಚರ್ಚೆ ನಡೆಯುತಿತ್ತು. ನಾನು ನೃತ್ಯ ತರಗತಿಗಳಿಗೆ ಸೇರುವ ಬಗ್ಗೆ ಯೋಚನೆ ಮಾಡಿದೆ, ಅಪ್ಪ ಯಾವತರಗತಿಗಳಿಗೆ ಸೇರುವಿರಿ ಎಂದು ಕೇಳಿದ ತಕ್ಷಣ ನೃತ್ಯ ತರಗತಿಗಳಿಗೆ ಸೇರಿಸಿ ಎಂದು ಹೇಳಿಬಿಡೋಣ ಎಂದು ಅವರ ಹಾದಿಯನ್ನೆ ಕಾದು ಕುಳಿತಿದ್ದೆ ಆದರೆ ಅದಾಗಲೇ ಅಪ್ಪ ವೀಣೆತರಗತಿಗಳಿಗೆ ನಮ್ಮನ್ನು ಸೇರಿಸಿ ಬಂದಿದ್ದರು. ನನಗೆ ನಿರಾಸೆ ಆಯ್ತು, ಹಾಗೆ ಸಿಟ್ಟು ಬಂದಿತ್ತು. ‘ಇಲ’್ಲ ನನ್ನ ಇಷ್ಟ ಬೇರೆ ಇದೆ ಎಂದು ಹೇಳಲಾಗಲಿಲ್ಲ, ಹಾಗಂತ ಒಲ್ಲದ ಮನಸ್ಸಲ್ಲಿ ಆ ತರಗತಿಗಳನ್ನ ಏಕಗ್ರತೆಯಿಂದ ಕಲಿಯಲು ಸಾಧ್ಯವಾಗುತ್ತಿರಲಿಲ್ಲ. ಪ್ರತಿ ಭಾರಿ ತರಗತಿಗಳಿಗೆ ತೆರಳುವಾಗ ಮನಸ್ಸಲ್ಲಿ ತೀವ್ರ ಪೈಪೋಟಿ ಶುರುವಾಗುತಿತ್ತು. ಒಂದು ಕಡೆ ನನ್ನ ಮನಸ್ಸು ಇದು ನಿನಗಿಷ್ಟವಿಲ್ಲವೆಂದರೇ, ಮತ್ತೊಂದು ಮನಸ್ಸು ಅಪ್ಪ ಎಲ್ಲಾ ಮಾಡೋದು ನಿನ್ನ ಒಳ್ಳೇದಕ್ಕೆ ಎಂದು ಹೇಳುತಿತ್ತು. ಒಂದು ಕಡೆ ಅಪ್ಪನ ಮೇಲೆ ಸಿಟ್ಟು ಬರುತಿತ್ತು. ಮತ್ತೊಂದು ಕಡೆ ಅಪ್ಪನ ಮೇಲೆ ಕೋಪ ಮಾಡುಕೊಳ್ಳುತಿದ್ದೇನೆ ಎಂದು ನನ್ನ ಮೇಲೆ ಸಿಟ್ಟು ಹಾಗು ಗಿಲ್ಟ್ ಕಾಡುತಿತ್ತು. ಇಷ್ಟಾಗಿ ನನ್ನ ವೀಣೆ ತರಗತಿಗಳಲ್ಲಿ ನನ್ನ ಗಮನ ಬೇರೆ ಎಲ್ಲೋ ಇರುತ್ತೆ ಎಂದು ಬೈಗುಳಗಳನ್ನು ತಿನ್ನುತ್ತಿದ್ದೆ. ಅದು ಅಪ್ಪನ ಕಿವಿ ವರೆಗು ಬಂದು ತಲುಪಲು ಹೆಚ್ಚು ಸಮಯ ಹಿಡಿಯಲಿಲ್ಲ. ‘ಈಗಿನ ಕಾಲದ ಮಕ್ಕಳಿಗೆ ಅದೇನು ಬಂದಿದೆಯೋ, ನಾವು ಸಾಲ ಸೂಲ ಮಾಡಿ ಹೊಟ್ಟೆ ಬಟ್ಟೆ ಕಟ್ಟಿ ಇವರಿಗೆ ಏನೇನೊ ಮಾಡುತ್ತೇವೆ ಆದ್ರೆ ಇವರಿಗೆ ಕಲಿಯೋಕೆ ಮಾತ್ರ ಸೋಮಾರಿತನ’ ಎಂದು ನನ್ನ ಗುಣಗಾನ ಮಾಡಿದರು. ಮನಸ್ಸಲ್ಲೇ ಅಪ್ಪನಿಗೆ ಎಷ್ಟೊಂದು ನೋವು ಕೊಡುತ್ತಿದ್ದೇನೆ ಎಂದು ಕೊರಗಲಾರಂಭಿಸಿದೆ. ನಾನು ಸೋಮಾರಿ ಎಂದು ನಂಬಿದೆ, ಅದಕ್ಕೆ ಅಪ್ಪನನ್ನು ಖುಷಿಪಡಿಸಲು ಹೆಚ್ಚೆಚ್ಚು ಪರಿಶ್ರಮ ಹಾಕತೊಡಗಿದೆ, ಆದರು ನನಗೇನೊ ಹಿಂಸೆ, ನನ್ನನ್ನು ತುಂಬ ಬಲವಂತಪಡಿಸುತ್ತಿರುವ ಅನುಭವ. ಅಪ್ಪನನ್ನು ಖುಷಿ ಪಡಿಸುವದು, ಎಲ್ಲರೂ ಒಪ್ಪುವುದನ್ನು ನಾನು ಸಮ್ಮತಿಸುವುದು, ಹಾಗೆ ಮನೆ ಮಗಳಾಗಿ ಹೀಗೆ ನಡೆದುಕೊಳ್ಳಬೇಕೆಂಬುದರ ಸಾಲು ಸಾಲು ಸವಾಲುಗಳ ನಡುವೆ ನಾನು ಯಾರು ನನ್ನ ವ್ಯಕ್ತಿತ್ವ ಏನು, ನನ್ನ ಆಲೋಚನೆಗಳ ಸ್ಪಷ್ಟತೆಗಳು ನನಗೆ ಸಿಗದಾದವು.

ಮುಂದೆ ನಾನು ಶಾಲೆ ಮುಗಿಸಿ ಕಾಲೇಜು ಮೆಟ್ಟಿಲೇರುವ ಸಮಯ ಬಂದಾಗ ಮನೆಯಲ್ಲಿ ನನಗೆ ಯಾವ ಕಾಲೇಜಿಗೆ ಸೇರಿಸಬೇಕು ಹಾಗೆ ಯಾವ ವಿಷಯ ಕೊಡಿಸಬೇಕು ಎನ್ನುವುದರ ಬಗ್ಗೆ ತೀವ್ರ ಚರ್ಚೆ ಏರ್ಪಾಟಾದವು. ನನ್ನ ಮನಸ್ಸು ಕಲಾ ವಿಷಯ ನನಗೆ ಇಷ್ಟ ಅದು ನನ್ನ ಸ್ಟ್ರೆಂತ್ ಎಂದು ಹೇಳುತಿತ್ತು. ಆದರೆ ಅಪ್ಪ ಬಹಳ ರಿಸರ್ಚ್ ಮಾಡಿ ನನಗೇ ಸೈನ್ಸ್ ವಿಷಯಕ್ಕೆ ಸೇರಿಸಿದರು. ಆದರೆ ಆಗಲು ಇಲ್ಲಾ ಇದು ನನಗಿಷ್ಟ ಇಲ್ಲಾ ಎಂದು ಹೇಳಲಾಗಲಿಲ್ಲ. ಅಪ್ಪ ಏನೆಂದುಕೊಳ್ಳುತ್ತಾರೋ ಎಂಬ ಅಳುಕೋ, ಅಥವಾ ನನ್ನ ಆಯ್ಕೆಗೆ ಎಲ್ಲರು ನಕ್ಕು ಬಿಟ್ಟರೇ ಎಂಬ ಭಯವೋ, ಇಲ್ಲಾ ಒಂದು ವೇಳೆ ನಾನು ಕಲಾ ವಿಷಯ ಆಯ್ದು ನಂತರ ಅದರಲ್ಲೇನಾದರು ಕೊಂಚ ಎಡವಿದರೇ ಆಗ ಇವರುಗಳು ನನ್ನನ್ನು ಸುಮ್ಮನೇ ಬಿಡುವರೋ ಎಂಬ ಆತಂಕವೋ ನಾ ಅರಿಯೇ, ಆದರೆ ಒಂದು ಮಾತ್ರ ಅರಿತಿದ್ದೆ ವಿಜ್ಞಾನ ವಿಷಯ ನನಗೆ ಸಂತಸ ಕೊಡುವುದಿಲ್ಲ ಎಂದು. ಮತ್ತದೆ ಬಲವಂತದ ಅನುಭವ, ಮನಸ್ಸಲ್ಲಿ ಗೊಂದಲಗಳು ಹೀಗೆ ಇಲ್ಲೂ ಪೂರ್ತಿ ಗಮನ ಕೊಡದೆ ಎಲ್ಲರಾ ಕೆಂಗಣ್ಣಿಗೆ ಗುರಿಯಾಗಿ ದಡ್ಡಿ, ಸೋಮಾರಿ ಬಿರುದಾಂಕಿತಗಳಿಂದ ಡಿಗ್ರಿ ಮುಗಿಸಿದೆ.

ನಂತರ ಒಂದು ಕೆಲಸಕ್ಕೆ ಸೇರಿದೆ, ಅಲ್ಲಿ ನಾನು ಎಲ್ಲರಿಗು ಪ್ರಿಯಳಾಗಿದ್ದೆ, ಆದರೆ ನನಗೆ ಮಾತ್ರ ಎಲ್ಲರ ಮೇಲು ದ್ವೇಷ, ಕಾರಣ ಇಷ್ಟೆ, ನಾನು ಎಲ್ಲಾದಕ್ಕು ಸುಮ್ಮನಿರುವ ಕಾರಣ ನಾನು ಎಲ್ಲಾದಕ್ಕು ಸಮ್ಮತಿಸುತ್ತೇನೆ ಎಂದುಕೊಂಡಿದ್ದರು. ಅಂದರೇ ನನಗೇ ಇಲ್ಲಾ ಎನ್ನುವುದು ಕಷ್ಟವಾದ ಕಾರಣ, ಯಾರಾದರು ಅವರ ಕೆಲಸ ನನಗೆ ಮಾಡಿ ಎಂದರೇ, ಬಾಸ್ ಬೇಡದಿರುವ ಹೊರೆ ನನಗೆ ಹಾಕಿದರೇ, ರಜಾ ಕೊಡಲ್ಲ ಎಂದರೆ, ನಾನು ಯಾವುದಕ್ಕು ಇಲ್ಲಾ ಎನ್ನಾಲಾಗುತ್ತಿರಲಿಲ್ಲಾ, ಇದನ್ನೇ ಬಂಡವಾಳ ಮಾಡಿಕೊಂಡು ಎಲ್ಲರೂ ನನಗೆ ಅಧಿಕಾ ಒತ್ತಡ ಕೊಡುತ್ತಿದ್ದರು. ಬರುಬರುತ್ತಾ ನನ್ನ ಬಗೆಗಿನ ನಿರ್ಧಾರಗಳನ್ನ ನನ್ನನ್ನು ಕೇಳದೆ ತೆಗೆದುಕೊಳ್ಳುತ್ತಿದ್ದರು. ನಾನು ಬೇರೆ ದಾರಿ ಕಾಣದೆ ನರಳುತ್ತಾ, ಕೊರಗುತ್ತಾ ಎಲ್ಲಾ ಮಾಡುತ್ತಿದ್ದೆ. ಹೀಗೆ ಸಾಗಿದ್ದ ನನ್ನ ಜೀವನದಲ್ಲಿ ಮದುವೆಯ ವಿಷಯ ಬರಸಿಡಿಲಿನಂತೆ ಎರಗಿತ್ತು.

ಮನೆಯಲ್ಲಿ ಒಂದು ದಿನ ಅಪ್ಪ, ಏಕಾಏಕಿ ಒಂದು ಹುಡುಗನ ಫೋಟೊ ಹಿಡಿದು, ಅವನು ರೂಪವಂತ, ಗುಣವಂತ, ಒಳ್ಳೆ ಕೆಲಸದಲ್ಲಿದ್ದಾನೆ ಎಂದೆಲ್ಲಾ ಹೇಳಿ ಇವನೇ ನಿನ್ನ ಗಂಡ ಎಂದು ನಾವು ಮನೆಯವರೆಲ್ಲಾ ನಿರ್ಧರಿಸಿ ಬಿಟ್ಟಿದ್ದೇವೆ ಎಂದಾಗ ನನಗೇ ನಂಬ¯ಸಾಧ್ಯವಾಯಿತು. ಹುಡುಗ ನಮ್ಮ ಮನೆತನಕ್ಕೆ ಹೇಳಿ ಮಾಡಿಸಿದವನು, ನೀನು ಒಪ್ಪಿ ಬಿಟ್ಟರೇ ನಾವು ಮನೆಯವರೆಲ್ಲರು ನಿಶ್ಛಿಂತೆಯಿಂದ ಇರುತ್ತೇವೆ ಎಂದರು. ಆದರೆ ಮನಸ್ಸು ಇನ್ನು ಮದುವೆಗೆ ತಯಾರಿರಲಿಲ್ಲ, ನನಗೆ ಹುಡುಗ ಇಷ್ಟ ಇರಲಿಲ್ಲ, ಮನಸ್ಸು ‘ಇಲ್ಲಾ’ ನನಗೆ ಯೋಚನೆ ಮಾಡಲು ಸಮಯ ಬೇಕು ಎಂದು ಕೇಳು ಎನ್ನುತ್ತಿದೆ, ಆದರೆ ಮತ್ತೊಂದು ಮನಸ್ಸು ಹೇಗೆ ಹೇಳಲಿ, ಏನಾದರು ಅಂದುಕೊಂಡರೇ ಎಂದು ಯೋಚಿಸುತ್ತಿರುವಾಗಲೇ, ನನ್ನ ಮೌನವನ್ನು ಸಮ್ಮತಿ ಎಂದು ಗ್ರಹಿಸಿ ಮುಂದಿನ ಮಾತುಕತೆ ನಡೆಸೇ ಬಿಟ್ಟರು. ಮದುವೆಯು ನಡೆದೇ ಹೋಯಿತು. ಅಸ್ಪಷ್ಟತೇ, ಗೊಂದಲಗಳ ನಡುವೆಯೇ ನನ್ನ ಜೀವನದ ದೊಡ್ಡ ಗಟ್ಟ ತಲುಪಿದ್ದೆ ನಾನು.

ಮದುವೆಯ ಕನಸು ಕಾಣದ ನಾನು, ಹೆಂಡತಿಯ ಬಗ್ಗೆ ಅತೀವ ಕಲ್ಪನೆಗಳನ್ನು ಕಂಡಿದ್ದವರ ಪತ್ನಿಯಾಗಿದ್ದೆ. ಈ ಗೊತ್ತಿಲ್ಲದಿರುವ ವ್ಯಕ್ತಿ ಮೇಲೆ ನನಗೆ ಅತೀವ ಸಿಟ್ಟು, ಅವರು ಏನು ಮಾಡಿದರು ಹಿಂಸೆ, ಹೀಗಿರುವಾಗ ನನ್ನ ಗಂಡ ನಮಗಾಗಿ ಹನಿಮೂನ್ ಪ್ಯಾಕೇಜ್ ಬುಕ್ ಮಾಡಿದ್ದರು. ಇನ್ನು ಮದುವೆಯನ್ನೇ ಒಪ್ಪದ ನಾನು ಪ್ರೀತಿ, ಪ್ರಣಯಗಳಿಗಂತೂ ನನ್ನ ದೇಹ ಮನಸ್ಸು ಎರಡು ಸಜ್ಜಾಗಿರಲಿಲ್ಲ. ಅವರು ಒಂದು ದಿನ ಬಂದು ನನ್ನನ್ನು ಅವರೆಡೆಗೆ ಬರೆಸೆಳೆದು, ಅಪ್ಪಿ ನಾವು ನಾಳೆ ಹನಿಮೂನ್‍ಗೆ ತೆರಳುತಿದ್ದೇವೆ ಎಂದು ಹೇಳಿ ನನ್ನ ಕೆನ್ನೆಗೆ ಮುತ್ತಿಡಲು ಮುಂದಾದಾಗ, ನನಗೇ ಗೊತ್ತಿಲ್ಲದ ಒಂದು ರೋಷ, ಆಕ್ರೋಷ, ಎಲ್ಲವನ್ನು ಮನಸ್ಸು ಸಹಿಸಿತ್ತು ಯಾರಿಗು ತಿಳಿಯುತ್ತಿರಲಿಲ್ಲ, ಆದರೆ ದೇಹ ಹಾಗಲ್ಲ ತನ್ನ ಅಸಹನೆಯನ್ನ ಹೊರಹಾಕೆಬಿಟ್ಟಿತು. ಅವರನ್ನು ಜೋರಾಗಿ ತಳ್ಳಿ, ಇಲ್ಲಾ ಇದು ನನಗೆ ಇಷ್ಟವಿಲ್ಲ, ನನ್ನನ್ನು ಮುಟ್ಟ ಬೇಡಿ ಎಂದು ಬಿಟ್ಟೆ. ಇದೇ ಮೊದಲ ಭಾರಿ ನನ್ನ ಅಭಿಪ್ರಾಯ ಮಾತಾಗಿ ಹೊರಬರುವ ಧೈರ್ಯ ಮಾಡಿದ್ದು. ಇದೇ ಮೊದಲ ಭಾರಿ ನಾನು ನನ್ನ ಇಷ್ಟ ಕಷ್ಟಗಳನ್ನ ಹೊರಹಾಕಿದ್ದು. ಆದರೇ ಪ್ರತಿ ಹೆಣ್ಣುಮಗಳು ಆನಂದಮಯವಾಗಿ ಅನುಭವಿಸಬೇಕಾದ ರಸಘಳಿಗೆಯಲ್ಲಿ ಇದು ಹೊರಗೆಬಂದಿದ್ದು ದುರಂತ. ಮರುಕ್ಷಣವೇ ಅಯ್ಯೋ ನಾನೇನು ಹೇಳಿಬಿಟ್ಟೆ, ಮುಂದೇನಾದೀತು ಎಂದು ಆತಂಕ ಕಾಡಿತು. ನಾನು ಹೇಳಿದ್ದು ಸರಿಯೋ, ಇಲ್ಲವೋ ಎಂದು ಕಾಡಿತು. ಆದರೆ ಅವರು ನಕ್ಕು, ‘ಅಂತು ಏನಾದರು ಮಾತಾಡಿದೆಯಲ್ಲಾ, ಹೌದು ನಿನ್ನ ಆಲೋಚನೆ ಸರಿಯಿದೆ, ನಾವು ಮದುವೆ ಮುಂಚೆಯು ಸರಿಯಾಗಿ ಮಾತಾಡಿಲ್ಲ, ಮೊದಲು ಅರ್ಥ ಮಾಡಿಕೊಳ್ಳೋಣ ಆಮೇಲೆ ಇವೆಲ್ಲಾ ಇದ್ದದ್ದೇ’ ಎಂದರು. ನನ್ನ ಆಲೋಚನೆ ಸರಿಯಿದೆ ಎಂದು ಮೊದಲು ಕೇಳಿದ್ದು ಅವರ ಬಾಯಲ್ಲೇ, ಒಂದು ತೆರನಾದ ಆನಂದ. ಜೊತೆಯಲ್ಲಿ ಹೌದಲ್ಲಾ, ಇಲ್ಲಾ ಅಂದರೇ ಮುಗಿಯಿತು ನಾನ್ಯಾಕೆ ಇಲ್ಲಾ ಅನ್ನದೇ ಹೆದರುತ್ತೇನೆ ಎಂಬ ಆಲೋಚನೆ ಶುರುವಾಯ್ತು. ನನ್ನ ಮಾತಿಗೆ ಸಿಕ್ಕ ಸಣ್ಣ ಬೆಂಬಲ ನನ್ನ ಬಗ್ಗೆ ನಾನು ಅರಿಯಲು ಒಂದು ದಾರಿಮಾಡಿಕೊಟ್ಟಿತ್ತು. 
ನನ್ನ ಬಗ್ಗೆ ನಾನು ಅರಿಯುವ ದಾರಿಯಲ್ಲಿ, ನನ್ನ ಮೇಲೆ ನನಗೆ ನಂಬಿಕೆಯಿರಲಿಲ್ಲ, ಹಾಗೆ ನಾನು ನನ್ನನ್ನು ಮೌಲ್ಯೀಕರಿಸುತ್ತಿರಲಿಲ್ಲ, ನನ್ನ ಆಸಕ್ತಿಗಳು, ನನ್ನ ಆಸೆಗಳು ನನ್ನ ಹಕ್ಕು ಎಂದು ನಂಬಿರಲಿಲ್ಲ. ಆತ್ಮವಿಶ್ವಾಸವಿರದ ಕಾರಣ ನಾನು ಇತರರು ನನ್ನ ನಿರ್ಧಾರಗಳನ್ನು ಮನ್ನಿಸಲಿ ಎಂದು ಆಶಿಸುತಿದ್ದೆ, ಇದರ ಮೂಲ ಎಲ್ಲೋ ಒಂದುಕಡೆ ನನ್ನ ಬಾಲ್ಯದಲ್ಲಿದೆ ಅನಿಸುತ್ತೆ. ನನ್ನ ತಂದೆ ತಾಯಿ ನನಗೆ ಸದಾ ಕುಟುಂಬದ ಮಾತನ್ನು ಮೌಲ್ಯೀಕರಿಸುವುದಕ್ಕೆ ಹೇಳಿಕೊಟ್ಟರೇ ಹೊರೆತು ಒಬ್ಬ ವ್ಯಕ್ತಿಯಾಗಿ ನನ್ನ ಮಾತಿಗೆ ಮನ್ನಣೆ ಸಿಗಲಿಲ್ಲ. ಎಲ್ಲೋ ಬಾಲ್ಯದಲ್ಲಿ ನಡೆದ ಸಣ್ಣ ಅವಮಾನ ನನಗೇ ಗೊತ್ತಿಲ್ಲದೇ ನನ್ನ ವ್ಯಕ್ತಿತ್ವಕ್ಕೆ, ನನ್ನ ಸೆಲ್ಫ್ ಎಸ್ಟೇಮ್‍ಗೆ ದೊಡ್ಡ ಪೆಟ್ಟಾಗಿ ನನ್ನ ಜೀವನದುದಕ್ಕು ಸಾಗಿದೆ. ಇದೀಗ ನನ್ನ ಹಳೇ ನಂಬಿಕೆಗಳಿಂದ ಹೊರ ಬರುವುದಕ್ಕೆ ನನ್ನ ಗಂಡ ಒಳ್ಳೆಯ ಸ್ನೇಹಿತರಾಗಿ ಬೆಂಬಲಿಸುತ್ತಿದ್ದಾರೆ. ನನ್ನ ಅಭಿಪ್ರಾಯಗಳು ನಾನು ಯಾರು, ನನ್ನ ಅನಿಸಿಕೆಗಳೇನು, ನನ್ನ ನಿಲುವುಗಳೇನು, ಎಂಬಿದೆಲ್ಲವೂ ನನ್ನ ಸ್ವಂತಿಕೆಯ ಕುರುಹುಗಳು. ಇಂದಿಗೇ ‘ಇಲ್ಲಾ’ ಅನ್ನೋದು ಪಾಪವಲ್ಲಾ ಅಂತಾ ಗೊತ್ತಾಗಿದೆ. ನನ್ನ ನಿರ್ಧಾರಗಳು ಮತ್ತೊಬ್ಬರು ಮನ್ನಿಸದಿದ್ದರೂ, ನಾನು ಮನ್ನಿಸುತ್ತೇನೆ. ನನ್ನ ಮನಸ್ಸು ಮೊದಲಿಗಿಂತಲೂ ಈಗ ನೆಮ್ಮದಿಯಾಗಿದೆ. ಆ ಚಡಪಡಿಕೆಗಳು, ಆಂತರಿಕ ಯುದ್ಧಗಳು ಕಡಿಮೆಯಾಗಿವೆ. ಒಂದಷ್ಟು ಸ್ಪಷ್ಟತೆಗಳು ಬಂದಿವೆ. ಜೀವನದಲ್ಲಿ ದೊಡ್ಡ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಹಾತೊರೆಯುವ ನಾವು ಮೊದಲು ಇಂತಹ ಸಣ್ಣ ಸಣ್ಣ ವಿಷಯಗಳನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೇ ಇಡೀ ಜೀವನ ಈ ಗೊಂದಲಗಳು, ಅದರಿಂದ ಕಾಡುವ ಕೊರಗಿನಿಂದಲೇ ಮುಗಿದುಬಿಡುತ್ತದೆ ಎಂದು ಅರಿವಾಗಿದೆ ನನಗೆ. ಹಾ! ನಾನಿನ್ನು ನನ್ನ ಬಗ್ಗೆ ಅರಿಯುತ್ತಿದ್ದೇನೆ ಹಾಗೆಯೇ, ನನ್ನ ಗಂಡನೊಟ್ಟಿಗೆ ಸದ್ಯ ಒಳ್ಳೆಯ ಸ್ನೇಹಿತೆಯಾಗಿದ್ದೇನೆ.

Saturday, March 9, 2019

What is to fail?








ಕನಸು, ಗುರಿ ಈ ಎರಡು ಪದಗಳು ನನ್ನ ಜೀವನದಲ್ಲಿ ಸಾಕಷ್ಟು ಪ್ರಭಾವ ಬೀರಿದೆ. ಕನಸು ಕಾಣುತ್ತ ಗುರಿ ನಿರ್ಧರಿಸಿದೆ, ಗುರಿಯನ್ನು ತಲುಪುವ ಕನಸನ್ನು ಕಾಣತೊಡಗಿದೆ. ಒಂದಿಲ್ಲದೆ ಮತ್ತೊಂದಿಲ್ಲ. ನಿದ್ದೆ ಮಾಡಲು ಬಿಡದ ಕನಸು ಅದಾಗಿತ್ತು, ಅದರ ನನಸಿನೆಡೆಗೆ ನನ್ನ ಸಕಲ ಪ್ರಯತ್ನ, ತಯಾರಿಗಳು ಸಾಗಿತ್ತು. ನಾನು ಬದುಕಿದ್ದೆ ಆ ಕನಸಿನ ನನಸಿಗಾಗಿ, ನಾನು ಉಸಿರಾಡಿದ್ದೇ ಆ ಗುರಿ ಸಾಧನೆಗಾಗಿ, ಹಾಗಾದರೇ ಹಾಗೇಕೆ ನಡೆಯಿತು? ಈ ನನ್ನ ಅಂತರಂಗ ಇಂದು ತೆರೆದಿಟ್ಟಿರುವೆ.
ಸಾಮಾನ್ಯ ಮದ್ಯಮವರ್ಗದ ಕುಟುಂಬದವನು ನಾನು. ಅಮ್ಮ, ಅಪ್ಪ, ಅಕ್ಕ ಸ್ನೇಹಿತರುಗಳೇ ನನ್ನ ಪ್ರಪಂಚ. ಅಪ್ಪ ಎಂದರೇ ಭಯ, ಅಮ್ಮ ಎಂದರೇ ಮುದ್ದು ಜಾಸ್ತಿ. ಅಪ್ಪ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಪಾಠಗಳಲ್ಲಿ ಅಷ್ಟಾಗಿ ಆಸಕ್ತಿ ತೋರದಿದ್ದರು, ಆಟಗಳಲ್ಲಿ ಸದಾ ಮುಂದಿರುತ್ತಿದ್ದೆ. 10ನೇ ತರಗತಿಯ ನಂತರ, ಕಲಾ ವಿಷಯವನ್ನು ಆಯ್ದುಕೊಂಡು ಕಾಲೇಜು ಮೆಟ್ಟಿಲೇರಿದ್ದೆ. ಆ ವಯಸ್ಸಿನ ಕರಾಮತ್ತೆ ಹಾಗೆ, ಚಿಗುರು ಮೀಸೆಯ ಎತ್ತರದ ಹುಡುಗನಾಗಿದ್ದ ನನ್ನನ್ನು ಕಂಡು ಹುಡುಗಿಯರೆಲ್ಲರು ನನ್ನ ಸ್ನೇಹ ಬಳಸಲು ಇಚ್ಚಿಸುತ್ತಿದ್ದರು. ನಾನು ಎಲ್ಲರೊಂದಿಗೆ ಸ್ನೇಹದಿಂದಲೇ ಇರುತ್ತಿದ್ದೆ. ಹೀಗಿರುವಾಗ ಅಷ್ಟು ಹುಡುಗಿಯರಲ್ಲಿ ಒಬ್ಬಳು ಮಾತ್ರ ಸ್ನೇಹಕ್ಕು ಮೀರಿ ಒಂದು ಹೆಜ್ಜೆ ಮುಂದೆ ನನ್ನ ಜೊತೆ ಸಲುಗೆಯಿಂದಿದ್ದಳು. ಅವಳೆಂದರೇ ನನಗೆ ಇಷ್ಟ, ನಾನೆಂದರೇ ಅವಳಿಗೂ ತುಂಬ ಇಷ್ಟ. ಸರೀ, ಇಬ್ಬರು ಮುಂದೆ ಮದುವೆ ಆಗುವ ಎಂದು ನಿರ್ಧರಿಸಿಕೊಂಡೆವು. ನನ್ನ ಬದುಕು ಓದು, ಆಟ, ನನ್ನ ಗೆಳತಿ, ಕುಟುಂಬ ಎಂದು ಹಾಯಾಗಿ ಸಾಗುತಿತ್ತು. ನಾಳಿನ ಚಿಂತೆ, ಮುಂದಿನ ಭವಿಷ್ಯದ ಭಯ ನನ್ನನ್ನು ಸೋಕಿರಲಿಲ್ಲ.
ಹೀಗಿದ್ದ ನಾನು ಪಿಯುಸಿ ಮುಗಿಸಿ ಬಿಎ ಓದಲು ಕಾಲೇಜಿಗೆ ಸೇರಿದೆ. ಪಿಯುಸಿಯಿಂದ ಹೊರ ಬಂದ ನಮಗೆಲ್ಲರಿಗು ಏನೋ ಒಂದು ರೀತಿ ಜಗತ್ತನ್ನೇ ಗೆಲ್ಲೋ ಹುಮ್ಮಸ್ಸು, ಬಂಡೆಯನ್ನು ಗುದ್ದಿ ಪುಡಿಪುಡಿಮಾಡಿ ಬಿಡುವಷ್ಟು ಶಕ್ತಿ ಇರುವ ಭಾವನೆ, ನಾವು ಅಂದುಕೊಂಡದ್ದೇ ಸರಿ, ನಾವು ಮಾಡುವುದೆಲ್ಲಾ ಸರಿ ಎಂಬ ನಂಬಿಕೆ. ನಮ್ಮ ಈ ಶಕ್ತಿಗೆ ಸರಿಯಾದ ಮಾರ್ಗದರ್ಶನ ದೊರೆತರೆ ಖಂಡಿತ ಮನುಷ್ಯ ಕುಲವೇ ಬೆರಗಾಗುವ ಸಾಧನೆ ಮಾಡುವುದರಲ್ಲೀ ಎರಡು ಮಾತಿಲ್ಲ. ಅದೇ ಹುಮ್ಮಸ್ಸು ನನ್ನಲ್ಲೂ ಇತ್ತು. ನನ್ನ ಸ್ನೇಹಿತರಲ್ಲು ಇತ್ತು. ಆದರೇ ಎಲ್ಲರೂ ಹೀಗಿರಲಿಲ್ಲ, ಮೋಜು, ಮಸ್ತಿ, ಸಂತೋಷದ ಹೆಸರಲ್ಲಿ ಬೇರೆಯವರನ್ನು ರ್ಯಾಗ್ ಮಾಡೋದು, ಹಿಂಸಿಸೋದು, ನೋವು ಕೊಡುವ ಕೆಲಸಮಾಡುತ್ತಿದ್ದರು.
ಆದಿನ ನಡೆದ ಆ ಘಟನೇ ನನ್ನ ಜೀವನದ ದಿಕ್ಕನ್ನೇ ಬದಲಿಸುತ್ತೆ ಎಂದು ನಾನು ಅಂದು ಎಣಿಸಿರಲಿಲ್ಲ. ಆ ದಿನ ನಾನು ಕಾಲೇಜಿನಲ್ಲಿ, ತರಗತಿಗಳ ನಡುವೆ ಬಿಡುವಿದ್ದಾಗ ನನ್ನ ಸ್ನೇಹಿತರ ಜೊತೆ ಕೂಡಿ ಹರಟುತಿದ್ದಾಗ, ದೂರದಲ್ಲಿ ನಾಲ್ಕಾರು ಹುಡುಗರ ಗುಂಪು ಕಾಣಿಸಿತು. ನಾವು ಅಲ್ಲೇನು ನಡೆಯುತ್ತಿದೆ ಎಂದು ತಿಳಿಯಲು ಹೋದೆವು. ಹೋಗಿ ನೋಡಿದರೇ ಅಲ್ಲಿ ಒಬ್ಬ ಜ್ಯೂನಿಯರ್ ಹುಡುಗಿಯನ್ನು ಆ ಹುಡುಗರು ರ್ಯಾಗ್ ಮಾಡುತ್ತಿದ್ದರು. ಅವಳು ಅಸಹಾಯಕಳಾಗಿ ಅಳುತ್ತಿದ್ದಳು. ಅವಳು ಅತ್ತಷ್ಟು ಇವರುಗಳು ಅದನ್ನು ಮನೋರಂಜನೆ ಎಂಬಂತೆ ಕೇಕೆ ಹಾಕಿ ನಗುತ್ತಿದ್ದರು. ಇದನ್ನು ಕಂಡು ನನಗೇ ರೋಷ, ಆ ಹುಡುಗಿಯ ಅಳು ನನ್ನನ್ನು ಕೆರಳಿಸುತ್ತಿತ್ತು. ಸರೀ ಎಂದು ಅವರುಗಳನ್ನು ತಡೆಯಲು ಹೋದೆ. ಆದರೇ ಅವರೆಲ್ಲರು ಸೇರಿ ನನ್ನನ್ನು ತಡೆದು, ಹೊಡೆದು, ಅವಾಚ್ಯ ಶಬ್ಧದಲ್ಲಿ ನಿಂದಿಸಿ ನನ್ನನ್ನು ದಬಾಯಿಸಿಬಿಟ್ಟರು. ಅಷ್ಟರಲ್ಲಿ ರೌಂಡ್ಸ್‍ನಲ್ಲಿದ್ದ ಆ ಏರಿಯಾ ಎಸ್.ಐ ಅಲ್ಲಿಗೆ ಧಾವಿಸಿದರು. ಅವರನ್ನು ಕಂಡೊಡನೇ ಇಷ್ಟೊತ್ತು ಎಗರುತ್ತಿದ್ದ ಹುಡುಗರೆಲ್ಲರು ನಡುಗಲಾರಂಭಿಸಿದರು. ಅದನ್ನು ನಾನು ಗಮನಿಸಿದೆ. ಅವರು ಬಂದು ಎಲ್ಲವನ್ನು ವಿಚಾರಿಸಿ ಆ ಹುಡುಗರಿಗೆ ನಾಲ್ಕು ತಟ್ಟಿ ಎಚ್ಚರಿಕೆ ನೀಡಿ ತೆರಳಿದರು.
ಈ ಘಟನೆಯಾದ ಬಳಿಕ ನನ್ನ ಗೆಳೆಯರು ಅಷ್ಟು ಜನರ ನಡುವೆ ಅನ್ಯಾಯವನ್ನು ತಡೆಯಲು ಮುಂದಾದ ನನ್ನ ಧೈರ್ಯವನ್ನು ಕೊಂಡಾಡಿದರು. ನನ್ನ ಹುಡುಗಿಯಂತೂ ಆನಂದದಿಂದ ನನ್ನನ್ನು ಅಪ್ಪಿ ‘ಮತ್ತೊಬ್ಬ ಹುಡುಗಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಲು ಪ್ರಯತ್ನಿಸಿದೆಯಲ್ಲಾ, ನಿನ್ನಂತಹ ಹುಡುಗನನ್ನು ಪಡೆಯಲು ನಾನು ಪುಣ್ಯಮಾಡಿದ್ದೆ’ ಎಂದು ಕೊಂಡಾಡಿದಳು. ಎಲ್ಲರು ನನ್ನ ಧೈರ್ಯ, ಗುಣವನ್ನು ಕೊಂಡಾಡುತ್ತಿದ್ದರೇ, ನನ್ನ ಮನಸ್ಸು ಮಾತ್ರ ಬೇರೆಯೆ ಆಲೋಚನೆಯಲ್ಲಿ ಮುಳುಗಿತ್ತು.
ಆ ಹುಡುಗರ ಗುಂಪನ್ನು ಚದುರಿಸಲು ನಾನು ಒಬ್ಬನೇ ಹೋದಾಗ ನನ್ನನ್ನು ದಬಾಯಿಸಿ, ನಿಂದಿಸಿದರು. ಆದರೇ ಅದೇ ಎಸ್.ಐ ಒಬ್ಬರೇ ಬಂದಾಗ ಅಷ್ಟೂ ಜನ ಹುಡುಗರು ನಿಂತಲ್ಲಿಯೇ ನಡುಗಲಾರಂಭಿಸಿದ್ದರು. ನಾನು ಒಬ್ಬನೇ, ಅವರೂ ಒಬ್ಬರೇ, ಆದರೇ ಅವರ ಕೈಯಲ್ಲಿ ಅನ್ಯಾಯ ತಡೆಯಲು ಸಾಧ್ಯವಾಯಿತೇ ಹೊರೆತು ನನ್ನ ಕೈಯಲ್ಲಿ ಸಾಧ್ಯವಾಗಲಿಲ್ಲ. ಯಾಕೆ? ಎಂದು ಪ್ರಶ್ನೆ ಕಾಡಲಾರಂಭಿಸಿತು. ಅದಕ್ಕೆ ಉತ್ತರ ಅವರು ಒಬ್ಬ ಪೊಲೀಸ್ ಅಧಿಕಾರಿ (ಎಸ್.ಐ). ಅವರು ಎಸ್.ಐ ಆಗದೇ ಇದ್ದಿದ್ದರೇ ನನಗಾದ ಗತಿಯೇ ಅವರಿಗು ಆಗುತಿತ್ತು. ನಾನು ಅನ್ಯಾಯ ತಡೆಯುವ ಪ್ರಯತ್ನ ಮಾಡಿದಕ್ಕೆ ಒಂದು ತೆರನಾದ ಆನಂದ, ಏನೋ ಸಾಧಿಸಿದ ಭಾವನೆ ಜೊತೆಗೆ ಎಲ್ಲರಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಒಂದುವೇಳೆ ನಾನು ನಿಜವಾಗಲು ಅನ್ಯಾಯಗಳನ್ನು ಮಟ್ಟ ಹಾಕಿದರೇ, ತಡೆಯಲು ಯಶಸ್ವಿಯಾದರೇ, ಅದು ಹೇಗಿರುತ್ತೆ? ಎಂದೆನಿಸಿತು. ಹಾಗಾದರೇ ಅದನ್ನು ಮಾಡುವುದಾದರು ಹೇಗೆ ಎಂದು ಯೋಚಿಸಿದಾಗ ನಾನ್ಯಾಕೆ ಎಸ್.ಐ ಆಗಬಾರದು ಎಂದು ಹೊಳೆಯಿತು. ಹೀಗೆ ಆ ಘಟನೆಯಿಂದ ನನ್ನೊಳಗೆ ಒಂದು ಗುರಿ ಮೊಳೊಕೆಯೊಡಿಯಿತು. ಅದನ್ನ ಹೆಮ್ಮರವಾಗಲು ಬಿಟ್ಟೆ. ಅದರ ಸಾಧನೆಯೆಡೆಗೆ ಕನಸುಕಾಣಲು ಶುರುಮಾಡಿದೆ.
ತಂದೆ ಪೊಲೀಸ್ ಇಲಾಖೆಯಲ್ಲೇ ಇದ್ದುದರಿಂದ ನನ್ನ ಗುರಿ ಅವರಿಗು ಹಿಡಿಸಿತು. ನನ್ನ ತಯಾರಿಗೆ ಬೇಕಾದ ನೆರವುಗಳನ್ನು ಅವರು ಮಾಡಿದರು. ಬಿಎ ನಂತರ ಮಾಸ್ಟರ್ಸ್ ಇನ್ ಸೋಷಿಯಲ್ ವರ್ಕ್ ಮಾಡಿ ನಂತರ ಎಸ್.ಐ ಪರೀಕ್ಷೆ ಬರಿಯಲು ನಿರ್ಧರಿಸಿದೆ. ಆದರೆ ಪರೀಕ್ಷೆಯ ತಯಾರಿ ಮಾತ್ರ ಗುರಿ ನಿರ್ಧರಿಸಿದ ದಿನದಿಂದಲೇ ಶುರುಮಾಡಿದ್ದೆ. ನನ್ನ ಕನಸು, ನನ್ನ ಮನಸ್ಸು ಎಲ್ಲವೂ ಎಸ್.ಐ ಆಗುವುದರಲ್ಲೇ ಇತ್ತು. ನನ್ನ ಹುಡುಗಿ ನನ್ನ ಗುರಿಗೆ ಬೆಂಬಲಿಸಿದಳು. ನನ್ನ ಮೇಲೆ ಅಪಾರ ನಂಬಿಕೆ ಇರುವುದಾಗಿಯು, ತಾನು ಪೊಲೀಸ್ ಹೆಂಡತಿಯಾಗಲು ಹೆಮ್ಮೆ ಪಡುವುದಾಗಿಯು ಯಾವಾಗಲು ಹೇಳುತಿದ್ದಳು.
ದಿನದ 24 ಗಂಟೆಗಳಲ್ಲಿ, ಸರಿ ಸುಮಾರು 16-20 ಗಂಟೆ ನಾನು ಎಸ್.ಐ ಪರೀಕ್ಷೆ ತಯಾರಾಗುವುದರಲ್ಲೇ ಕಳಿಯುತಿದ್ದೆ.5-6 ದಿನಪತ್ರಿಕೆಗಳನ್ನು ಓದೋದು, ಕೋಚಿಂಗ್ ಕ್ಲಾಸ್‍ಗಳಿಗೆ ತೆರಳಿ ಅಲ್ಲಿ ಹೇಳುತಿದ್ದ ಪುಸ್ತಕಗಳನ್ನ ಓದೋದು ಹೀಗೆ ಎಲ್ಲಾ ರೀತಿಯ ತಯಾರಿಗಳು ಅಚ್ಚುಕಟ್ಟಾಗಿ ಸಾಗಿದ್ದವು. ನಾನು ಮೊದಲೇ ಕ್ರೀಡ ಪಟುವಾಗಿದ್ದ ಕಾರಣ ಫಿಸಿಕಲ್ ಫಿಟ್‍ನೆಸ್ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿರಲಿಲ್ಲ. ನನ್ನ ಕೋಚಿಂಗ್ ತರಗತಿಗಳಲ್ಲಿ ಎಲ್ಲಾ ಪರೀಕ್ಷೆಗಳಲ್ಲು 50ಕ್ಕೆ 45ರ ಮೇಲೆ ಅಂಕ ಪಡೆದುಕೊಳ್ಳುತಿದ್ದೆ. ಇನ್ನುಳಿದ 2-3 ಅಂಕಗಳು ಯಾಕೆ ತಪ್ಪುತಿದ್ದವು ಎಂದು ತಿಳಿದು ಅವುಗಳನ್ನು ಅಭ್ಯಾಸಿಸುತಿದ್ದೆ. ಇಷ್ಟರ ಮಟ್ಟಿಗೆ ನನ್ನ ಎಸ್.ಐ ಕನಸು ಬೇರೂರಿತ್ತು. ನಾನು ಒಂದೇ ಬಾರಿಗೆ ನನ್ನ ಗುರಿಯನ್ನು ತಲುಪಿಬಿಡುವ ಆತ್ಮವಿಶ್ವಾಸ, ಆಸೆ ಹೊಂದಿದ್ದೆ. ನನ್ನ ತಂದೆಯ ಸ್ನೇಹಿತರು, ನನ್ನ ಗೆಳೆಯರೆಲ್ಲರು ನನ್ನ ಪರಿಶ್ರಮ, ನನ್ನ ತಯಾರಿಕಂಡು ನಾನು ಎಸ್.ಐ ಆಗೆ ತೀರುವೆ ಎಂದು ಅಪ್ಪನಿಗೆ ಹೇಳಿ ಪೊಲೀಸ್ ಸಮವಸ್ತ್ರ ಹೊಲಿಸಲು ಹೇಳಿದ್ದರು. ನನ್ನ ಸುತ್ತಮುತ್ತ, ನನ್ನ ಬಳಗದಲ್ಲೆಲ್ಲಾ ನಾನು ಮಾದರಿ ಯುವಕನಾಗಿದ್ದೆ. ಎಲ್ಲರು ನನ್ನನ್ನೆ ತೋರಿಸಿ ಅವನ ಹಾಗಿರ ಬೇಕು ಎನ್ನುತ್ತಿದ್ದರು.
ನಾನು ಎದುರು ನೋಡುತ್ತಿದ್ದ ಗಳಿಗೆ ಬಂದೇಬಿಟ್ಟಿತು. ನಾನು ಫಿಸಿಕಲ್ ಎಕ್ಸಾಮಿನಿಷೇನ್ ಅದ್ಭತವಾಗಿ ಮಾಡಿದೆ. ನಂತರ ರೈಟಿಂಗ್ ಎಕ್ಸಾಮ್ ಕೂಡ ಅತ್ಯತ್ತಮವಾಗೆ ಮಾಡಿದೆ. ಇನ್ನು ಬಾಕಿ ಉಳಿದಿದ್ದು ಫೈನಲ್ ಇಂಟವ್ರ್ಯೂ ಮಾತ್ರ. ನನ್ನ ಕೋಚಿಂಗ್ ತರಗತಿಗಳಲ್ಲಿ ಮತ್ತೆ ನನ್ನ ತಂದೆಯ ಪೊಲೀಸ್ ಗೆಳೆಯರೆಲ್ಲರು, ಸಂದರ್ಶನ ಹೇಗಿರುತ್ತದೆ ಎಂಬುದರ ಕುರಿತಾಗಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು. ಸಂದರ್ಶನದಲ್ಲಿ ಹಿರಿಯ ಅಧಿಕಾರಿಗಳು ನಮ್ಮ ಆತ್ಮವಿಶ್ವಾಸ ಪರೀಕ್ಷಿಸಲು ಬೇಕೆಂದೆ ನಮಗೆ ಒಂದೇ ಪ್ರಶ್ನೆಯನ್ನು ಪದೇ ಪದೇ ಕೇಳುವುದು, ಹಾಗೆ ಸರಿಯಿರುವ ಉತ್ತರವನ್ನು ಬೇಕೆಂದಲೇ ತಪ್ಪು ಇರಬಹುದೇನೋ ಎಂದು ಸಂಶಯ ಕಾಡುವ ಹಾಗೆ ನಡೆದುಕೊಳ್ಳುತ್ತಾರೆ, ನಮ್ಮ ಉತ್ತರವನ್ನು ನಾವು ಬದಲಿಸಬಾರದು ಬದಲಿಗೆ ಮತ್ತಷ್ಟು ಆತ್ಮವಿಶ್ವಾಸದಿಂದ ಉತ್ತರ ಬದಲಿಸದೇ, ಒಂದೇ ಉತ್ತರವನ್ನೆ ಹೇಳಬೇಕು ಎಂದು ಹೇಳಿದ್ದರು.
ಮಾರನೆಯ ದಿವಸ ಸಂದರ್ಶನದ ಸಮಯ ಬಂದೇ ಬಿಟ್ಟಿತು. ಅಂದು ನಾಲ್ಕು ಜನರ ನಡುವೆ ಪೈಪೋಟಿ ಇತ್ತು. ಸಮಾನಾಂಕ ಬಂದ ನಾವು ನಾಲ್ವರ ಪೈಕಿ ಇಬ್ಬರಿಗೆ ಎಸ್.ಐ ಅವಕಾಶ. ನಾಲ್ವರಲ್ಲಿ ಇಬ್ಬರು ಕ್ಯಾಟಗರಿಯಲ್ಲಿ ಬರುವುದರಿಂದ ಹಾಗು ನಾನು ಜೆನೆರಲ್ ಕ್ಯಾಟಗರಿಯಾದ್ದರಿಂದ ನಾನು ಸಂದರ್ಶನದಲ್ಲಿ ಅವರೆಲ್ಲರಿಗಿಂತಲೂ ಹೆಚ್ಚು ಅಂಕ ಪಡೆಯಬೇಕಿತ್ತು. ಇವೆಲ್ಲಾ ಅಂಶ ತಲೆಯಲ್ಲಿತ್ತು. ಜೊತೆಗೆ ನನ್ನ ತಂದೆಯ ಸ್ನೇಹಿತರು ಮತ್ತಿತ್ತರು ಹೇಳಿದಹಾಗೆ ಹೆಚ್ಚು ಆತ್ಮವಿಶ್ವಾಸ ತೋರಬೇಕು ಹಾಗೆ ನಾನು ಹೇಳಿದ ಉತ್ತರದ ಮೇಲೆ ನಿಲ್ಲಬೇಕು ಸಂದರ್ಶನಕಾರರು ಏನೆ ಮಾಡಿದರು ನಾನು ಅವರ ಟ್ರಾಪ್‍ಗೆ ಬೀಳಬಾರದೆಂದು ಮನಸಲ್ಲೇ ನಿರ್ಧರಿಸಿದ್ದೆ. ಅಂತೆಯೇ ಸಂದರ್ಶನಕಾರರು ನನಗೆ ಪ್ರಶ್ನೆಗಳನ್ನು ಕೇಳಲು ಶುರುಮಾಡಿದರು. ಮೊದಲು 2-3 ಪ್ರಶ್ನೆಗಳ ನಂತರ ಸಂದರ್ಶನಕಾರರಲ್ಲಿ ಒಬ್ಬರಾಗಿದ್ದ ಐ.ಪಿ.ಎಸ್ ಅಧಿಕಾರಿಯೊಬ್ಬರು. ‘ಕರ್ನಾಟಕದ ಮೊದಲ ಮಹಿಳಾ ಐ.ಪಿ.ಎಸ್ ಅಧಿಕಾರಿ ಯಾರೆಂದರು?’, ನಾನು ಪಟ್ಟನೇ ನಕ್ಕುಬಿಟ್ಟೆ. ಇಷ್ಟೊಂದು ಸರಳ ಪ್ರಶ್ನೆಗಳನ್ನ ಕೇಳುತ್ತಾರ ಎಂಬ ಭಾವನೆ ನನ್ನದಾಗಿತ್ತು. ಪಟ್ಟೆಂದು ‘ಕಿರಣ್‍ಬೇಡಿ’ ಎಂದು ಉತ್ತರಿಸಿದೆ. ಅವರು ನಿಮ್ಮ ಉತ್ತರ ಬಗ್ಗೆ ವಿಶ್ವಾಸ ಇದೆಯಾ, ಯೋಚಿಸಿ ಉತ್ತರ ನೀಡಿ ಎಂದರು. ಪಟ್ಟಂತ ನನ್ನ ಅಪ್ಪನ ಸ್ನೇಹಿತರು ಹೇಳಿದ ಮಾತುಗಳು ನೆನಪಾದವು. ಬೇಕೆಂದಲೇ ನಮ್ಮ ಆತ್ಮವಿಶವಾಸ ಕೆಡಿಸಲು ಮರು ಪ್ರಶ್ನಿಸುತ್ತಾರೆ ಎಂದು ತಿಳಿದೆ. ನಾನು ‘ಹೌದು ಸರ್ ನನಗೆ ಸರಿಯಾಗಿ ಗೊತ್ತದೆ ಅದು ಕಿರಣ್ ಬೇಡಿ’ ಎಂದೆ. ಅವರು ಮತ್ತೊಮ್ಮೆ ‘ನೀನು ಪ್ರಶ್ನೆಯನ್ನು ಸರಿಯಾಗಿ ಕೇಳಿದೆಯ?’ ಎಂದರು. ಆಗ ಯಾಕೊ ನನಗೆ ಒಂದು ತೆರನಾದ ಗಾಬರಿ ಆವರಿಸಿತು, ತಕ್ಷಣವೇ ಅವರು ನಾವು ಕೇಳುತ್ತಿರುವುದು ‘ಕರ್ನಾಟಕದ ಮೊದಲ ಮಹಿಳಾ ಐ.ಪಿ.ಎಸ್ ಅಧಿಕಾರಿ ಯಾರು ಎಂದು’ ಅಂತ ಹೇಳಿದರು. ನನಗೆ ಆ ಸಂದರ್ಶನದ ಕೊಠಡಿಯಲ್ಲೇ ಅಳು ಉಮ್ಮಳಿಸಿತು. ಇದು ಹೇಗೆ ಸಾಧ್ಯ? ನನಗೆ ಮೊದಲ ಭಾರಿ ಅವರು ಪ್ರಶ್ನೆಕೇಳಿದಾಗ ಅದ್ಹೇಗೆ, ಯಾಕೆ ಅಂತ ತಿಳಿಯದು ಅದು ನನಗೆ ‘ಭಾರತದ ಮೊದಲ ಮಹಿಳಾ ಐ.ಪಿ.ಎಸ್ ಅಧಿಕಾರಿ ಯಾರು?’ ಎಂದು ಕೇಳಿದ ಹಾಗೆ ತೋರಿದೆ. ಎಂತಹ ಎಡವಟ್ಟು ಮಾಡಿಕೊಂಡೆ ಎಂದೆನಿಸಿತು. ಪ್ರಶ್ನೆಗೆ ಉತ್ತರ ತಿಳಿಯದೇ ತಪ್ಪು ಉತ್ತರವನ್ನು ಕೊಟ್ಟಿರುವವರನ್ನು ಕಂಡಿದ್ದೆ. ಆದರೆ ಉತ್ತರ ತಿಳಿದಿದ್ದರು ಪ್ರಶ್ನೆಯನ್ನು ಸರಿಯಾಗಿ ಕೇಳದೆ ಎಡವಟ್ಟು ಮಾಡಿಕೊಂಡೆನೆಲ್ಲ ಎಂದು ಒದ್ದಾಡಿದೆ. ಅಲ್ಲಿಂದ ಸಂದರ್ಶನಕಾರರೇ ಸಮಾಧಾನ ಪಡಿಸಿ, ಮತ್ತೊಮ್ಮೆ ಪರೀಕ್ಷೆ ಬರೆಯ ಬಹುದು ಎಂದು ಹೇಳಿಕಳುಹಿಸಿ ಬಿಟ್ಟರು. ಅಲ್ಲಿಗೆ ನನ್ನ ಭವಿಷ್ಯ ನನಗೆ ಗೋಚರಿಸಿತು. ಒಟ್ಟಾರೆ ಅಂಕಗಳಲ್ಲಿ ಕೇವಲ 2 ಅಂಕಗಳ ಕೊರತೆಯಲ್ಲಿ ನಾನು ಎಸ್.ಐ ಆಗಲು ಅನರ್ಹನಾದೆ.
ನಿರಾಸೆ, ಹತಾಶೆ, ನೋವು, ಅವಮಾನ, ಎಲ್ಲವೂ ಆಯಿತು. ನನ್ನ ಕನಸು ನುಚ್ಚು ನೂರಾದ ಅನುಭವ, ಅದನ್ನು ಸಹಿಸದಾದೆ. ಅಪ್ಪ ನನ್ನ ಮೇಲೆ ನಂಬಿಕೆ ಕಳೆದುಕೊಂಡರು. ಯುನಿಫಾರ್ಮ್ ಹೊಲಿಸಿಕೊಳ್ಳಿ ಎಂದವರೆಲ್ಲಾ ನನ್ನನ್ನು ನೋಡಿ ಕೇಕೆ ಹಾಕಿ ನಕ್ಕಿದ ಹಾಗೆ ಆಗುತಿತ್ತು. ಒಂದೇ ಭಾರಿಗೆ ಎಸ್.ಐ ಆಗುವುದಕ್ಕೆ ಅಣಿಯಾಗಿದ್ದ ಮನಸ್ಸಿಗೆ ಮತ್ತೊಮ್ಮೆ ಪ್ರಯತ್ನಿಸಬಹುದಲ್ಲ ಎಂಬ ಮಾತುಗಳು ಅಸಹನೀಯವಾಗಿ ಕಾಡಿತು. ಬುದ್ದಿ ಮಾತು ಹೇಳಲು ಬಂದವರಿಗೆ ಹೊಡೆದು ಬಿಡುವಷ್ಟು ಆಕ್ರೋಷ. ಕಡೆಗೆ ಯಾರ ಕಣ್ಣಿಗು ಬೀಳಬಾರದು, ನಿರಾಸೆಯು ನನ್ನ ಕಾಡಬಾರದೆಂದು ಗೆಳೆಯರೊಡನೆ ಸೇರಿ, ಗಾಂಜ, ಸಿಗರೇಟು, ಹೆಂಡದ ಮೊರೆಹೋದೆ. ಡ್ರಗ್ಸ್ ಸೇವಿಸೋದು ಮಲಗೋದು, ಮತ್ತೆ ಎದೊಳೋದು ನೆನಪಾದಾಗ ಮತ್ತೆ ಅದೇ ಸೇವಿಸೋದು ನನ್ನ ದಿನಚರಿಯಾಗಿ ಹೋಯಿತು. ಮನೆಯನ್ನು ಬಿಟ್ಟು ಗೆಳೆಯರ ಬಳಿಯೇ ತಂಗಲು ಶುರುಮಾಡಿದೆ.
ಹೀಗೆ ತಿಂಗಳಾನುಗಟ್ಟಲೇ ನಿಷೆಯ ಗುಂಗಲ್ಲೇ ಕಾಲಕಳೆದೆ. ಎಸ್.ಐ ಆಗಿ ಅನ್ಯಾಯ ತಡೆಯಬೇಕಾದವನು, ತಾನೆ ಅನ್ಯಾಯವೆಸಗಲು ಶುರುಮಾಡಿದ್ದೆ. ನನ್ನ ಮೇಲಿನ ಹಿಡಿತವನ್ನು ಕಳೆದುಕೊಂಡಿದ್ದೆ. ಹೀಗೆ ಕಾಲ ಕಳೆಯುತ್ತಿದ್ದ ನನ್ನ ಮನಸ್ಸು ಅದೇಕೊ ನನ್ನನ್ನು ಚುಚ್ಚಲು ಶುರುಮಾಡಿತ್ತು. ನಾನು ಇದಲ್ಲ, ನಾನು ಬದಲಾಗಬೇಕೆಂದು ಹೇಳತೊಡಗಿತು. ಅದೇ ಸಮಯಕ್ಕೆ ದೂರದ ಊರಿನಲ್ಲಿದ್ದ ನನ್ನ ಗೆಳೆಯನೊಬ್ಬ ನನಗೆ ಹೊರ ಬರುವ ದಾರಿ ತೋರಿದ. ಸಾಂತ್ವಾನದ ಮಾತುಗಳನ್ನಾಡಿದ. ನನ್ನನ್ನು ದೂಷಿಸದೇ, ಒಪ್ಪಿಕೊಂಡು ನಿಧಾನವಗಿ ಬದಲಾಗು ಎಂದು ಮನವರಿಕೆ ಮಾಡಿದ. ಹಾಗೆ ಸಮಾಜ ಸೇವೆ ಮಾಡಲು ಪೊಲೀಸ್ ಮಾತ್ರ ಆಗಬೇಕೆಂದಿಲ್ಲ, ಪತ್ರಕರ್ತನಾಗಿಯು ಸೇವೆ ಸಲ್ಲಿಸಬಹುದೆಂದ. ನನಗು ಹೌದೆನಿಸಿತು. ಖಾಸಗಿ ಮಾದ್ಯಮವೊಂದರಲ್ಲಿ ಕೆಲಸ ಕೊಡಿಸಿದ. ಹಾಗೊ ಹೀಗೊ ಜೀವನ ಸಾಗುತಿತ್ತು. ಆಗ ನನ್ನ ಹುಡುಗಿ ತನಗೆ ಮನೆಯಲ್ಲಿ ಹುಡುಗ ಹುಡುಕುತ್ತಿರುವುದಾಗಿಯು, ನನಗೆ ಕಡಿಮೆ ಸಂಬಳ ಇರುವುದರಿಂದ ಬೆಂಗಳೂರಲ್ಲಿ ಹೇಗೆ ಸಂಸಾರ ಮಾಡುವುದು? ನಮ್ಮ ವಿಷಯವನ್ನು ಮನೆಯಲ್ಲಿ ಪ್ರಸ್ತಾಪ ಮಾಡಲು ಹಿಂಜರಿದಳು. ಹಾಗು ತನಗೆ ಇನ್ನುಮುಂದೆ ಈ ಸಂಬಂಧ ಮುಂದುವರೆಸುವುದರಲ್ಲಿ ಇಚ್ಚೆಯಿಲ್ಲ ಎಂದು ತಿಳಿಸಿ ಬೇರೆ ಹುಡುಗನನ್ನು ಮದುವೆಯಾಗಿಬಿಟ್ಟಳು. 7 ವರ್ಷದ ಪ್ರೀತಿ ಮುರಿದು ಬಿದ್ದು ಮತ್ತೊಂದು ಬರೆಯಾಯಿತು. ಆದರೆ ಈ ಭಾರಿ ನಾನು ಹತಾಶನಾಗಲಿಲ್ಲ, ಬದಲಿಗೆ ಹಠ ಹುಟ್ಟಿತು, ಈ ಕೆಲಸದಲ್ಲೂ ನಾನು ಬೆಳೆಯಬಲ್ಲೆ, ಬೆಳೆಯ ಬೇಕು. ಚೆನ್ನಾಗಿ ಬದುಕ ಬೇಕು ಎಂದು ತೋರಿತು. ಅಂತೆಯೇ ಚೆನ್ನಾಗಿ ಕೆಲಸ ಕಲೆತೆ, ಕಷ್ಟಪಟ್ಟು ದುಡಿದೆ, ಈಗಲು ದುಡಿಯುತ್ತಿದ್ದೇನೆ. ನನಗೂ ಈಗ ಮದುವೆಯಾಗಿದೆ. ಒಳ್ಳೇ ಮನಸಿನ ನನ್ನನ್ನು ಹೆಚ್ಚು ಪ್ರೀತಿಸುವ ಹೆಂಡತಿ ಹಾಗೆ ಒಂದು ಮದ್ದಾದ ಮಗುವಿನೊಂದಿಗೆ ನನ್ನ ಸಂಸಾರ ಸುಖಮಯವಾಗಿದೆ.
ಈಗ ಹಿಂದೆ ತಿರುಗಿ ನೋಡಿದರೇ, ಒಂದು ರೀತಿ ಆಗಿದ್ದೆಲ್ಲಾ ಒಳ್ಳೆಯದಕ್ಕೆ ಎನಿಸುತ್ತದೆ. ಈ ಘಟನಾವಳಿಗಳಿಂದ ನಾನು ಜೀವನದಲ್ಲಿ ದೊಡ್ಡ ಪಾಠ ಕಲೆತಿದ್ದೇನೆ. ಜೀವನ ನಾವು ಅಂದುಕೊಂಡಂತೆ ಸಾಗದು, ಜೀವನ ಬಂದಂತೆ ಸ್ವೀಕರಿಸುವುದು, ಹಾಗೆ ಅದರಲ್ಲೀ ಆನಂದದಿಂದ ಇರುವುದು ನನಗೆ ಚೆನ್ನಾಗಿ ಮನವರಿಕೆಯಾಗಿದೆ. ಕನಸು ಕಾಣುವುದು, ಗುರಿ ಹೊಂದುವುದು ಅದರ ಸಾಧನೆಗೆ ಶ್ರಮಿಸಬೇಕೆಂಬುದು ಎಷ್ಟು ಮುಖ್ಯವೋ, ಆ ಗುರಿ ನೆರವೇರದಿದ್ದರೇ ಸೋಲಿಗೆ ಮನಸ್ಸು ತಯಾರಾಗಿಸಿಕೊಳ್ಳುವುದು ಅಷ್ಟೇ ಮುಖ್ಯ, ಸೋತ ನಂತರ ಎದ್ದಾಗ ಅದೊಂದು ಹೊಸ ಅನುಭವ, ಹೊಸ ಹುಟ್ಟು, ಹೊಸ ವಿಶ್ವಾಸ.

Tuesday, February 5, 2019

Expected Love..




ಗಾಳಿಗಾಳಿ ತಂಪೂ ಗಾಳಿ ಊರ ತುಂಬ ಇದೆಯೋ,                                                           
ನಿನ್ನ ಹೆಸರೂ ಗಾಳಿಯೊಂದೇ ನನ್ನ ಉಸಿರಲ್ಲಿದೆಯೋ,                                                     
ನಮ್ಮ ಪ್ರೀತಿ ಬೆಳಗಿದ ಇತಿಹಾಸವೋ, ನಿನ್ನ ವಿರಹಾನೆ ಕಡಿವಾಣ                                          
ನಿನ್ನ ದಾರೀನ ಕಾಯುವೆನಾ...ತುಂತುರೂ ಅಲ್ಲೀ ನೀರಾ ಹಾಡು..’
ಇವತ್ತಿಗೆ ಈ ಹಾಡಿನ ಸಾಲುಗಳ ಬೆನ್ನಹಿಂದೆ ಇರುವಾ ನೆನಪುಗಳಷ್ಟೇ ನನ್ನ ಪಾಲಿಗೆ ಉಳಿದಿದೆ. ಈ ಸಾಲುಗಳಂತೆ ಸುಂದರವಾದ ದಾಂಪತ್ಯ ನಮ್ಮದಾಗಿತ್ತು. ಹೌದು ನಿಜಕ್ಕೂ ಸುಂದರ ದಾಂಪತ್ಯ ಅದು, ಆದರೇ ನನಗೆ ಮಾತ್ರ ಆ ಸೌಂದರ್ಯ ನೋಡೋಕ್ಕೆ ಆಗಲೇ ಇಲ್ಲ. ಆ ಸೌಂದರ್ಯ ಕಾಣೋಕ್ಕೆ ನಿರ್ಮಲ ಮನಸ್ಸು ಬೇಕು. ನನಗೂ ಈಗ ಬಂದಿದೇ ಆ ನಿರ್ಮಲತೇ, ಆದರೇನು ಪ್ರಯೋಜನ? ನನ್ನ ಅಂತರಾಳ ಕೇಳಿ
ನಾನೊಬ್ಬಳು ಅನಾಥೆ. ಅಜ್ಜಿಯೇ ನನ್ನ ಪ್ರಪಂಚ. ಬಾಲ್ಯವೆಲ್ಲಾ ಅಜ್ಜಿ ಕಥೆಗಳನ್ನೇ ಕೇಳಿ ಬೆಳೆದೆ. ನನ್ನ ಅಪ್ಪ ಅಮ್ಮನ ಬಗ್ಗೆ ಕೇಳಿದಾಗಲೆಲ್ಲ ಅಜ್ಜಿ ರಾಜಕುಮಾರನ ಕಥೆ ಹೇಳುತ್ತಿದ್ದಳು, ಎಲ್ಲಾ ಕಥೆಗಳ ಅಂತ್ಯದಲ್ಲೂ ‘ಅಂತೂ ರಾಜ ರಾಣಿ ಒಂದಾಗುತ್ತಾರೆ ಮತ್ತೆ ಅವರ ಜೀವನವೆಲ್ಲಾ ಸಂತೋಷದಿಂದ ಕೂಡಿರುತ್ತೆ’ ಎಂದಿರುತ್ತಿತ್ತು. ಕಥೆ ಮುಗಿದ ಮೇಲೆ ಅಮ್ಮಮ್ಮ ‘ನಿನಗಾಗಿ ಎಲ್ಲೋ ನಿನ್ನ ರಾಜಕುಮಾರ ಹುಟ್ಟಿದ್ದಾನೆ. ಅವನು ನಿನ್ನ ಮದುವೆ ಆದಮೇಲೆ, ಅವನೇ ನಿನ್ನ ಅಪ್ಪ, ಅಮ್ಮ ಎಲ್ಲಾ. ಆಮೇಲೆ ನಿನ್ನ ಜೀವನದಲ್ಲಿ ಬರೀ ಆನಂದ ಇರುತ್ತೇ, ಈಗ ಮಲಗು ನಿನ್ನ ರಾಜ ಕನಸಲ್ಲೀ ಬರುತ್ತಾನೆ’ ಎಂದು ಹೇಳಿ ಮಲಗಿಸುತ್ತಿದ್ದರು. ನಾನು ಆಗ ನಿರ್ಭೀತ, ನಿಶ್ಚಿಂತೆಯಿಂದ ರಾಜನಿಗಾಗಿ ಎದುರು ನೋಡುತ್ತಾ ಮಲಗುತ್ತಿದ್ದೆ.
ಇಂತಿಪ್ಪ ನನಗೆ ಅಂತು ಮದುವೆ ಆಯಿತು. ನನ್ನ ರಾಜಕುಮಾರ ನನಗೆ ಸಿಕ್ಕೇಬಿಟ್ಟರು, ಅವರು ನನ್ನಂಥೆ ಅನಾಥರು. ನನಗಾದರು ಅಜ್ಜಿ ಇದ್ದರು. ಅವರು ಸುತಾರಾಂ ಒಬ್ಬರೇ. ಚಿಕ್ಕ ವಯಸ್ಸಿನಿಂದಲೇ ಬೇಕರಿ ಕೆಲಸ, ಪೇಪರ್ ಹಾಕುವುದು, ಮೆಕ್ಯಾನಿಕ್ ಕೆಲಸಗಳನ್ನು ಮಾಡಿಕೊಂಡು ಹಾಗೋ ಹೀಗೋ ಓದಿ ಡಬಲ್ ಗ್ರಾಜುಯೇಟ್ ಆಗಿ ಒಳ್ಳೆ ಕೆಲಸದಲ್ಲಿದ್ದರು. ಅವರು ಬಹಳ ವಾಸ್ತವ ಮನುಷ್ಯ. ಜೀವನ ಬಂದಂತೆ ಸ್ವೀಕರಿಸೋದು, ನಮ್ಮ ಸುಖಕ್ಕೆ, ದುಃಖಕ್ಕೆ ನಾವೇ ಹೊಣೆ, ಈಗ ಏನು ನಡೆಯುತ್ತಿದೆಯೋ ಅದಕ್ಕೆ ಚತುರತೆಯಿಂದ ಸ್ಪಂದಿಸಿದರೇ, ನಾಳೆಗಳು ಅದ್ಭುತವಾಗಿರುತ್ತೆ ಎಂದು ನಂಬಿದ್ದರು. ಸದಾ ಲವಲವಿಕೆ ಇಂದಾ ಇರಲು ಬಯಸುತ್ತಿದ್ದರು. ಚಿಕ್ಕಂದಿನಿಂದಲೂ ತಮ್ಮ ತೋಳ್ಬಲದಿಂದ ಬಂದಿದ್ದರಿಂದ, ಯಾವುದಕ್ಕು ಅಂಜುತ್ತಿರಲಿಲ್ಲ ಹಾಗೆ ಯಾರಿಂದಲೂ ಏನು ನಿರೀಕ್ಷಿಸುತ್ತಿರಲಿಲ್ಲ. ಎಲ್ಲಿದ್ದರು ಜನ ಇವರನ್ನು ಹೆಚ್ಚು ಪ್ರೀತಿಸುತಿದ್ದರು. ಇವರ ಜನಗಳಿಕೆಯೆ ನನಗೆ ಇವರೊಡನೆ ಮನಸೋಲುವಂತೆ ಮಾಡಿತು.
ಇಬ್ಬರು ಏಕಾಂತದಲ್ಲಿದ್ದಾಗ ನಾನು ‘ತುಂತುರು ಅಲ್ಲೀ ನೀರಾ ಹಾಡು ..’ಎಂದು ಹಾಡಲು ಶುರುಮಾಡುತ್ತಿದ್ದೆ. ಅವರು ಸಣ್ಣಕಿರುನಗೆಯೊಂದಿಗೆ ತಲೆ ಸವರಿ ‘ಮೇಡಂ ಖುಷಿಯಾಗಿದ್ದಾರೆ’ ಎಂದು ಹಣೆಗೆ ಮುತ್ತಿಡುತಿದ್ದರು. ಅಜ್ಜಿ ಹೇಳಿದಂಗೆ ನನಗೆ ರಾಜಕುಮಾರನೆ ಸಿಕ್ಕಿದನೆಂದು ಖುಷಿಪಡುತ್ತಿದ್ದೆ. ಮದುವೆ ಗೊತ್ತಾದಿನಿಂದಲೂ, ಮದುವೆ ಮುಗಿದು ಒಂದಷ್ಟು ತಿಂಗಳಿನ ವರೆಗು ನನ್ನ ಜೀವನ, ನನ್ನ ಕಲ್ಪನೆಯಂತೆಯೇ ಇತ್ತು. ‘ಅಮೃತವರ್ಷಿಣಿ’ ಚಿತ್ರದಲ್ಲಿರುವ ಗಂಡ, ಹೆಂಡತಿಯಂತೆ ಅನ್ಯೋನ್ಯವಾಗಿದ್ದೆವು. ನನ್ನೊಟ್ಟಿಗೆ ಬಹಳ ಸಮಯ ಕಳಿತಿದ್ದರು. ಹಾಗೆ ನನ್ನನ್ನ ಮಗುವಿನಂತೆ ನೋಡಿಕೊಳ್ಳುತಿದ್ದರು ನನ್ನವರು. ನನ್ನನ್ನು ಹೀಗಿರು, ಹಾಗಿರು ಎಂದು ಆಕ್ಷೇಪಿಸಿದೆ, ನಾನಿರೋ ಹಾಗೆ ಸ್ವೀಕರಿಸಿದ್ದರು. ಅವರ ರಜಗಳೆಲ್ಲಾ ಮುಗಿದು ಅವರಿಗೆ ಮತ್ತೆ ಕೆಲಸ ಶುರುವಾಯಿತು.
ನನ್ನವರಿಗೆ ಸಾಕಷ್ಟು ಹವ್ಯಾಸಗಳಿದ್ದವು, ಒಳ್ಳೆಯ ನಟರಾಗಿದ್ದರು, ಹಲವಾರು ನಾಟಕಗಳಲ್ಲಿ ನಟಿಸಲು ಪಾಲ್ಗೊಳ್ಳುತ್ತಿದ್ದರು. ಅವರಿಗೆ ಡೈರಿ ಬರೆಯುವ ಹವ್ಯಾಸವಿತ್ತು. ಜೊತೆಗೆ ಸಾಕಷ್ಟು ವಿಚಾರ ಸಂಕೀರ್ಣಗಳು, ಗೋಷ್ಠಿಗಳಲ್ಲಿ ಪಾಲ್ಗೊಂಡು ವಿಷಯಗಳ ಬಗ್ಗೆ ಜ್ಞಾನ ಪಡೆದುಕೊಳ್ಳಲು ಬಯಸುತ್ತಿದ್ದರು. ಹಾಗೆ ಆಗಾಗ ಅವರ ಸ್ನೇಹಿತರೊಟ್ಟಿಗೆ ಏಕಾಂತ ಸಮಯ ಕಳೆಯಲು ಇಚ್ಚಿಸುತ್ತಿದ್ದರು. ಇವೆಲ್ಲವು ನನಗೆ ಮದುವೆಗೆ ಮುಂಚೆ ಅವರಲ್ಲೀ ಹಿಡಿಸಿದ್ದ ಪ್ರಮುಖ ಗುಣಗಳಾಗಿದ್ದವು. ಆದರೆ ನಂತರದಲ್ಲಿ ಈ ಹವ್ಯಾಸಗಳಿಂದ ಅವರು ನನಗೆ ಸಮಯ ಕೊಡುತ್ತಿಲ್ಲಾ ಎನಿಸುತಿತ್ತು. ನನ್ನನ್ನು ಎಲ್ಲಾ ಕಡೆ ಕರೆದುಕೊಂಡು ಹೋಗುತ್ತಿದ್ದರು, ಆದರೆ ಅವರೊಟ್ಟಿಗೆ ಹೋದಾಗ ಅವರಗೆಳೆಯರ ಜೊತೆ ನಗುನಗುತ ಮಾತಾಡುತ್ತಿದ್ದರೇ ಏನೊ ಕಸಿವಿಸಿಯಾಗೋದು. ನನಗೆ ಅವರು ಪ್ರಾಮುಖ್ಯತೆ ಕೊಡುತ್ತಿಲ್ಲವೇನೊ ಎನಿಸುತ್ತಿತ್ತು. ಅವರು ಯಾವಾಗಲು ನನ್ನ ಧ್ಯಾನದಲ್ಲೇ ಇರಬೇಕು ಎನಿಸುತಿತ್ತು. ನಾನೆ ಅವರಿಗೆ ಮೊದಲಾಗಿರಬೇಕು ಆಮೇಲೆ ಮತ್ತೆಲ್ಲಾ ಅನಿಸುತಿತ್ತು. ಅದಕ್ಕೆ ನಾನು ಅವರನ್ನು ಹೆಚ್ಚೆಚ್ಚು ಕಾಳಜಿವಹಿಸಲು ಶುರುಮಾಡಿದೆ. ಪ್ರೀತಿ ಹೆಸರಲ್ಲಿ ಕಟ್ಟಾಕಲು ನೋಡಿದೆ, ಏನೇನೊ ಸಪ್ರೈಸ್ ಗಳನ್ನು ಮಾಡಿ ಅವರಿಗೆ ಬೆರಗು ಮೂಡಿಸಿ, ಈ ಹವ್ಯಾಸಗಳನ್ನು ಬಿಟ್ಟು ನನ್ನ ನಿರೀಕ್ಷೆಯಲ್ಲೇ ಇರುವ ಹಾಗೆ ಮಾಡಲು ಯತ್ನಿಸಿದೆ.
ಆದರೆ ನನ್ನವರು ಇದಕ್ಕೆಲ್ಲ ಬಗ್ಗಲಿಲ್ಲ. ನನ್ನ ಪ್ರಯತ್ನಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದರು, ಖುಷಿಯು ಪಡುತಿದ್ದರು ಆದರೆ ಅವರ ಕೆಲಸಗಳನ್ನು ಯಾವತ್ತು ಬಿಡುತ್ತಿರಲಿಲ್ಲ. ಹೆಂಡತಿ, ಕೆಲಸ, ಹವ್ಯಾಸಗಳು, ಸ್ನೇಹಿತರು ಎಲ್ಲರನ್ನು ಒಳಗೊಂಡಿದ್ದೆ ಅವರ ಜೀವನ. ಬರೀ ಹೆಂಡತಿಯೆಂದು ಅವರಿಗೆ ಇರಲು ಸಾಧ್ಯವಾಗುತ್ತಿರಲಿಲ್ಲ. ಇತ್ತಕಡೆ ನನಗೆ ಅವರ ವ್ಯಕ್ತಿತ್ವವನ್ನು ಒಪ್ಪಿಕೊಳ್ಳಲು ನನ್ನ ನಿರೀಕ್ಷೆಗಳು ಅಡ್ಡಿಯಾಗುತಿದ್ದವು. ನಾನು ಅವರಿಗಾಗಿ ಮಾಡಿದರು, ಅದಕ್ಕೆ ಅವರು ಒಂದು ನಿರ್ದಿಷ್ಟ ಬಗೆಯಲ್ಲೇ ಖುಷಿ ವ್ಯಕ್ತಪಡಿಸುತ್ತಾರೆ ಮೊದಲೇ ಅಂದುಕೊಂಡು ಬಿಡುತಿದ್ದೆ. ಅವರು ಅದಕ್ಕೆ ಭಿನ್ನವಾಗಿ ಪ್ರತಿಕ್ರಿಯೆ ನೀಡಿದರೇ, ನಾನು ಬಹಳ ನೊಂದುಕೊಂಡು, ರೇಗಾಡಿ, ಜಗಳವಾಡಿ, ‘ನಿಮಗಾಗಿ ಇಷ್ಟಲ್ಲಾ ಮಾಡುತ್ತೇನೆ ಆದರೆ ನಿಮಗೆ ಏನು ಅನ್ನಿಸಲ್ಲಾ, ನೀವು ನನಗೆ ಖುಷಿ ಪಡಿಸೋದೆ ಇಲ್ಲಾ’ ಎನ್ನುತ್ತಿದ್ದೆ. ಸಿಟ್ಟಿನಲ್ಲಿ ‘ನಿಮ್ಮನ್ನು ಮದುವೆಯಾಗಿ ತಪ್ಪು ಮಾಡಿದೆ, ನನ್ನಕನಸ್ಸಿನ ರಾಜಕುಮಾರ ನೀವಲ್ಲ’ ಎಂದೆಲ್ಲಾ ಅಂದದ್ದು ಇದೆ. ಅವರು ಹೆಚ್ಚಿಗೆ ಮಾತುಬೆಳೆಸುತ್ತಿರಲಿಲ್ಲ, ಆಗ ನನಗೆ ಇನ್ನಷ್ಟು ಸಿಟ್ಟು ಬರೋದು, ನಾನು ಇನ್ನು ಬಾಯಿಗೆ ಬಂದಹಾಗೆ ಮಾತಾಡುತಿದ್ದೆ. ಅವರು ನಂತರ ಮೂರ್ನಾಲ್ಕು ದಿನಗಳ ಕಾಲ ನನ್ನೊಟ್ಟಿಗೆ ಮಾತಾಡುತ್ತಲೇ ಇರಲಿಲ್ಲ, ಆ ದಿನಗಳಲ್ಲಿ ನನಗೇ ಹುಚ್ಚೇ ಹಿಡಿದ ಹಾಗಾಗುತಿತ್ತು. ಆಮೇಲೆ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿ, ‘ನನ್ನ ಮೇಲೆ ಕರುಣೆ ಇಲ್ಲವಾ, ನಾನು ಅನಾಥೆ ನಿಮ್ಮನ್ನು ಬಿಟ್ಟರೇ ನನಗ್ಯಾರು ಗತಿ’ ಎಂದು ಗೋಗರಿದು ಮಾತಾಡಿಸುತ್ತಿದ್ದೆ. ಇದು ನನಗೂ ಅವರಿಗು ಖುಷಿ ಕೊಡುತ್ತಿರಲಿಲ್ಲ, ‘ನಿನ್ನ ಬಗ್ಗೆ ನನಗೆ ಇರಬೇಕಾದದ್ದು ಕರುಣೆ ಅಲ್ಲಾ ಪ್ರೀತಿ’ ಎಂದು ಯಾವಾಗಲು ಹೇಳುತ್ತಿದ್ದರು.
ಒಂದು ದಿನ, ನಾನು ಮನೆಯಲ್ಲಿ ಸುಮ್ಮನಿರುವ ಬದಲು ಏನಾದರೂ ಮಾಡುವುದರ ಬಗ್ಗೆ ಸಲಹೆ ಇತ್ತರು. ಆಗ ನಾನು ಬ್ಯುಸಿಯಾಗಿರುತ್ತೇನೆ, ಗಮನ ಬೇರೆಡೆ ಇದ್ದಾಗ ಜಗಳಗಳು ಕಡಿಮೆಯಾಗಬಹುದು ಎಂದರು. ನನಗೋ ವಿಪರೀತ ಸಿಟ್ಟು ಬಂದಿತು. ‘ಹಾಗೋ ಹೀಗೋ ನನ್ನನ್ನ ಕೆಲಸಕ್ಕೆ ಸೇರಿಸಿ ನಿಮಗಿಷ್ಟ ಬಂದ್ಹಾಗೆ ಇದ್ದು ಬಿಡುವುದು ಎಂದು ತೀರ್ಮಾನಿಸಿದ್ದೀರಾ, ನಿಮ್ಮ ಜೊತೆ ಹೆಚ್ಚೆಚ್ಚು ಸಮಯ ಕಳೀಬೇಕು ಎಂದು ನಾನು ಬಯಸಿದರೇ ನೀವು ನನ್ನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ನಾನು ಇಷ್ಟವಿಲ್ಲವೆಂದರೇ ನನ್ನನ್ನು ಮದುವೆ ಯಾಕಾಗಬೇಕಿತ್ತು? ನನ್ನ ಜೀವನ ಯಾಕೆ ಹಾಳು ಮಾಡಬೇಕಿತ್ತು? ನಾನು ನನ್ನ ಮದುವೆ ನಂತರ ಜೀವನ ಹೇಗೆಲ್ಲ ಇರುತ್ತದೆ ಎಂದುಕೊಂಡಿದ್ದೆ. ಆದರೆ ಮೋಸ, ಎಲ್ಲರು ಮೋಸ ಮಾಡಿಬಿಟ್ಟಿರಿ. ನನ್ನ ಅಪ್ಪ ಅಮ್ಮನನ್ನು ಕಿತ್ತುಕೊಂಡು ದೇವರು ಮೋಸ ಮಾಡಿದ, ಈಗ ಹೆಂಡತಿಯ ಬಗೆಗೆ ಭಾವನೆಗಳೇ ಇಲ್ಲದ ಒಬ್ಬನನ್ನು ಗಂಡನಾಗಿ ಕೊಟ್ಟಿ ಮತ್ತೆ ಮೋಸ ಮಾಡಿಬಿಟ್ಟೆ’ ಎಂದು ಕೂಗಲಾರಂಭಿಸಿದೆ. ಕಡೆಗೆ ಅವರು ಏನು ಮಾತಾಡದೇ ಮೌನವಾಗಿದ್ದದ್ದು ನನ್ನನ್ನು ಕೆರಳಿಸಿ, ‘ನನ್ನನ್ನು ಬರೀ ದೇಹ ಸುಖಕ್ಕಾಗಿ ಮದುವೆಯಾದಿರಿ, ಯಾರಿಗ್ಹೊತ್ತು ಹೊರಗಡೆ ಇನ್ನು ಎಷ್ಟು ಹೆಂಗಸರ ಜೀವನ ಹಾಳುಮಾಡಿದ್ದೀರೋ, ಆ ಡೈರಿಯಲ್ಲಿ ನಿಮ್ಮ ಬಂಡವಾಳಗಳೆಲ್ಲ ಬರೆದಿರುವಿರೇನೊ ಅದಕ್ಕೆ ನನಗೂ ಓದಲು ಬಿಡದೇ ಲಾಕ್ ಮಾಡಿದ್ದೀರ’ ಎಂದೆ. ಅವರ ಕಣ್ಣಲ್ಲಿ ಕೆಂಡದಂತ ಕೋಪ. ರೂಮಿಗೆ ಹೋದವರೇ ಡೈರಿ ತಂದು ನನ್ನ ಮುಖದ ಮೇಲೆ ಎಸೆದು ದಡದಡ ಎಂದು ಮನೆಯಿಂದ ಹೊರನಡೆದರು. ಆಚೆ ಗಾಡಿ ಶುರು ಮಾಡಿದ ಸದ್ದು ಕೇಳಿಸಿತು. ನಾನು, ‘ಇನ್ನೇನು ಹೆಂಡತಿ ಮಾತುಗಳಿಗೆ ಉತ್ತರ ಕೊಡಲಾರದೆ ಮನೆಯಿಂದ ಹೊರನಡೆಯುವುದಷ್ಟೆ ಇವರ ಕೆಲಸ’ ಎಂದುಕೊಂಡು ಅಳಲಾರಂಭಿಸಿದೆ. ‘ನನ್ನ ಜೀವನ ಏನೇನಲ್ಲ ಆಗೋಯ್ತು. ನಾನು ಯಾವ ಕರ್ಮ ಅಂತ ಈ ಶಿಕ್ಷೆ’ ಎಂದು ನೊಂದುಕೊಳ್ಳತೊಡಗಿದೆ.
ಒಂದಷ್ಟೊತ್ತು ಸುಮ್ಮನೆ ಕೂತೆ, ಕೋಪವೆಲ್ಲಾ ತಣ್ಣಗಾಯಿತು. ಬುದ್ದಿ ಸ್ವಲ್ಪ ಯೋಚನೆ ಮಾಡಿತು ಯಾಕ್ಹಾಗಿ ಸಮಸ್ಯೆಗಳಾಗುತ್ತಿವೆ? ಎಂದು. ನಾನು ಅವರ ಡೈರಿಯನ್ನು ತೆಗೆದೆ. ಅವರಿಗೆ, ಅವರ ಡೈರಿಯನ್ನು ಯಾರು ಓದಬಾರದಿತ್ತು. ಅಂತದ್ದೇನಿದೆ ಹೆಂಡತಿಗು ಓದಲು ಕೊಡದಿರುವಂತದ್ದು ಎಂದು ಅದಕ್ಕು ಎಷ್ಟೋ ಭಾರಿ ಜಗಳ ಮಾಡಿದ್ದಿದೆ. ಈಗ ಅದನ್ನು ಓದಲು ತೆಗೆದೆ. ಅವರ ಬಾಲ್ಯದ ಘಟನೆಗಳು, ಅವರು ಪಟ್ಟ ಕಷ್ಟಗಳ ಬಗ್ಗೆಬರೆದಿದ್ದರು. ಓದಿ ಎಂತಹ ಗ್ರೇಟ್ ವ್ಯಕ್ತಿ ಎನಿಸಿತು. ಇವೆಲ್ಲಾ ಯಾಕೆ ನನ್ನ ಬಳಿ ಹೇಳಿಕೊಂಡಿಲ್ಲ ಎನಿಸಿತು. ಮರುಕ್ಷಣವೆ ಹೇಳಿಕೊಳ್ಳಲು ನಾನು ಅವಕಾಶ ಮಾಡೆಕೊಟ್ಟಿಲ್ಲ ಎನಿಸಿತು. ಹೌದು ಅವರು ಅವರ ಬಗ್ಗೆ ಏನೆ ಹೇಳಿಕೊಳ್ಳಲು ಬಂದರೂ, ನಾನು ‘ನಿಮ್ಮದು ಇದ್ದದ್ದೇ, ಮೊದಲು ನನ್ನದು ಕೇಳಿ’ ಎನ್ನುತಿದ್ದೆ. ಆದರೆ ಅವರು  ಎಂದಿಗು ‘ಬರೀ, ನಿನ್ನದೇ ಆಯಿತು ನನ್ನ ವಿಚಾರಗಳನ್ನ ಯಾಕೆ ನೀ ಕೇಳಲ್ಲ’ ಎಂದು ಕೇಳಿರಲಿಲ್ಲ. ತಾಳ್ಮೆಯಿಂದ ನನ್ನ ಮಾತನ್ನು ಆಲಿಸುತ್ತಿದ್ದರು.
ಪುಟಗಳನ್ನು ತಿರುಗಿಸುತ್ತಿದ್ದಂತೆ, ಒಂದು ಫೋಟೊ ಸಿಕ್ಕಿತು, ಅದು ನನ್ನ ಬಾಲ್ಯದ ಫೋಟೊ, ಅದನ್ನು ಅವರು ಸಂಗ್ರಹಿಸಿದ್ದರು. ಹೌದು, ಒಮ್ಮೆ ನನ್ನ ಬಳಿ ಬಂದು ‘ನನ್ನ ಹತ್ತಿರ ಒಂದು ಸುಂದರ ಬಾಲೆಯ ಫೋಟೊವಿದೆ ನೋಡುವೆಯ?’, ಎಂದು ಛೇಡಿಸಿದ್ದರು. ಅಷ್ಟೇ ಸಾಕು ಎಂಬಂತೆ ಫೋಟೊವನ್ನು ನೋಡದೆ ಬಿಸಾಡಿ, ರಂಪಾಟ ಮಾಡಿದ್ದೆ. ಅದು ನನ್ನದೇ ಪೋಟೊ ಎಂದು ತಿಳಿದಿರಲಿಲ್ಲ. ಮುಂದೆ ಓದಿದಾಗ, ‘ನನ್ನ ತಾಯಿ ಸಿಕ್ಕರು’ ಎಂದು ಬರೆದಿದ್ದರು. ನಾನು ಕುತೂಹಲದಿಂದ ಓದಿದೆ, ಅವರು ತಾಯಿ ಎಂದು ಬರೆದಿದ್ದು ನನ್ನ ಬಗ್ಗೆಯೇ, ನಾನು ಪ್ರತಿದಿನಾಲು ಅವರ ಬಗ್ಗೆ ತಪ್ಪುಗಳನ್ನು ಕಂಡುಹಿಡಿದು ಅವರ ಕೆಲಸಗಳನ್ನು ಆಕ್ಷೇಪಿಸುತ್ತಿದ್ದರೇ, ಅವರು ನಾನು ಮಾಡುವ ಕಾಫಿ, ತಿಂಡಿ, ಇನ್ನಿತರ ಕೆಲಸಗಳನ್ನೆ ಸಾದನೆಯೆಂಬಂತೆ ಹೊಗಳಿ ಬರೆದಿದ್ದಾರೆ. ನನಗೇ ಮನಸ್ಸು ಭಾರವಾಗ ತೊಡಗಿತು. ಮುಂದೇ ಒಂದು ಪುಟದಲ್ಲಿ, ‘ಮನೆಯಲ್ಲಿ ಏನೋ ನೆಮದಿಯಿಲ್ಲ, ನನ್ನ ಹೆಂಡತಿಗೆ ಏನೇನೊ ಕನಸ್ಸುಗಳಿವೆ, ಅವನ್ನು ನಾನು ತೀರಿಸ ಬೇಕು, ಆದರೆ ಏನು ಪ್ರಯತ್ನ ಪಟ್ಟರು ಆಕೆಗೆ ಹಿಡಿಸುತ್ತಿಲ’್ಲ ಎಂದು ಬರೆದಿದ್ದಾರೆ. ‘ನಾನು ನಮ್ಮ ಒಳ್ಳೆ ಜೀವನಕ್ಕಾಗಿ ಒಂದಷ್ಟು ಬದಲಾವಣೆಗಳನ್ನು ತಂದುಕೊಳ್ಳಬೇಕು. ಆಕೆಯನ್ನು ಅರ್ಥಮಾಡಿಕೊಳ್ಳಬೇಕು, ಇನ್ಮುಂದೆ ನಾಟಕಗಳು, ಸ್ನೇಹಿತರು ಇವೆಲ್ಲಾ ಸ್ವಲ್ಪ ಕಡಿಮೆ ಮಾಡಿ ಅವಳೊಟ್ಟಿಗೆ ಇರಬೇಕು. ಹೌದು ಇದು ಸ್ವಲ್ಪ ಕಷ್ಟವಾದೀತು, ಆದರೆ ಇದು ನನಗಾಗಿ, ನಮ್ಮ ಜೀವನಕ್ಕಾಗಿ, ನನ್ನ ಹೆಂಡತಿ ಖುಷಿಯಲ್ಲಿ ನನ್ನ ಖುಷಿಯು ಅಡಿಗಿದೆ’ ಎಂದು ಬರೆದಿದ್ದರು.
ಡೈರಿ ಮುಚ್ಚಿಬಿಟ್ಟೆ. ಮುಂದೆ ಓದಲಾಗಲಿಲ್ಲ. ನಾನು ಎಂದಿಗು ಈ ರೀತಿ ಯೋಚಿಸಲೇ ಇಲ್ಲಾ, ಅವರಿಗೆ ನನ್ನ ಬಗೆಗೆ ಯಾವ ನಿರೀಕ್ಷೆಯು ಇರಲಿಲ್ಲ. ಅದಕ್ಕೆ ನಾನು ಅವರಿಗಾಗಿ ಮಾಡಿತ್ತಿದ್ದ ಒಂದು ಕಾಫಿಯು ಸಹ ಅವರಿಗೆ ಖುಷಿಕೊಡುತಿತ್ತು. ಅದರಿಂದಲೇ ನನ್ನಲ್ಲೀ ಯಾವ ದೋಷವು ಕಂಡಿರಲಿಲ್ಲ. ಆದರೆ ನನಗೆ ಎಲ್ಲಾದರಲ್ಲು ನಿರೀಕ್ಷೆ, ನಾನು ಒಂದು ಅಡುಗೆ ಮಾಡಿದರೂ, ಅದಕ್ಕೆ ಅವರು ಹೀಗೆ ಹೊಗಳ ಬೇಕು ಎಂದು ನಿರೀಕ್ಷಿಸುತ್ತಿದ್ದೆ. ಅವರು ನನ್ನ ಗುರುತಿಸಲಿ ಎಂದೇ ಕೆಲಸಗಳನ್ನು ಮಾಡುತ್ತಿದ್ದೆ. ನನ್ನ ಉದ್ದೇಶವೆಲ್ಲಾ, ಅವರು ನನ್ನ ಶ್ರಮವನ್ನು ಮೆಚ್ಚುವುದರಲ್ಲೇ ಇರುತಿತ್ತು. ಇದರಿಂದ ನಾನು ಮಾಡುವ ಕೆಲಸವನ್ನು ರಸ್ವಾದಿಸಲಾಗುತ್ತಲೇ ಇರಲಿಲ್ಲ, ಹೋಗಲಿ ಅವರು ನನ್ನ ಶ್ರಮವನ್ನು ಗುರುತಿಸಿ ಮೆಚ್ಚಿದ್ದರೂ ನನಗದು ಆನಂದ ಕೊಡುತ್ತಿರಲಿಲ್ಲ, ಯಾಕೆಂದರೇ ನಾನು ಮೊದಲೇ ನನ್ನ ಶ್ರಮಕ್ಕೆ ಹಾಡಿ, ಹೊಗಳಿ, ಮುದ್ದಾಡಿ ನನ್ನನ್ನು ಮೆಚ್ಚುತ್ತಾರೆ ಎಂದು ಒಂದು ಚೌಕಟ್ಟಿನ ನಿರೀಕ್ಷೆ ಇಟ್ಟುಕೊಳ್ಳುತ್ತಿದ್ದೆ. ಆದರೆ ಅವರು ನಾನು ನಿರೀಕ್ಷಿಸಿದಂತೆ ನನ್ನನ್ನು ಹೊಗಳದೆ, ಪ್ರಾಮಾಣಿಕವಾಗಿ ಸಾಧಾರಣವಾಗಿ ಹೊಗಳುತ್ತಿದ್ದರು. ಅಷ್ಟೇ ಸಾಕು ಎಂಬಂತೆ ಅದನ್ನೆ ಇಟ್ಟುಕೊಂಡು ಜಗಳವಾಡುತ್ತಿದ್ದೆ. ನಾನು ಮಾತು ಮಾತಿಗೆ ಯಾವಾಗಲು ನಿಮಗಾಗಿ ಏನೆಲ್ಲಾ ಮಾಡಿದ್ದೇನೆ, ನನಗಾಗಿ ಏನು ಮಾಡಿದ್ದೀರಿ ಎನ್ನುತ್ತಿದ್ದೆ? ವಾಸ್ತವವಾಗಿ ಅವರಿಗಾಗಿ ನಾನೇನು ಮಾಡಿರಲಿಲ್ಲ, ನಾನೆಲ್ಲ ನನ್ನ ಸಂತೋಷಕ್ಕೆ, ನನ್ನ ಮನಸ್ಸಿಗೆ ಖುಷಿ ಆಗಲಿ, ಎಂದೇ ಮಾಡುತ್ತಿದ್ದದ್ದು. ಕಡೆಗೆ ನನ್ನ ನಿರೀಕ್ಷೆಗಳಿಂದ ಬೇಸರ ಅನುಭವಿಸುತ್ತಿದ್ದದ್ದು ನಾನೆ, ಆದರೆ ಅದರ ಹೊಣೆ ಮಾತ್ರ ನನ್ನವರ ಮೇಲೆ ಹಾಕುತ್ತಿದ್ದೆ. ಕಣ್ಣಲ್ಲಿ ಕಂಬನಿಗಳು ಜಾರಿದವು, ಫೋನ್ ರಿಂಗಾಗಿ ಬೆಚ್ಚಿದೆ, ಸಮಯ ನೋಡಿದೆ ರಾತ್ರಿ 11 ಗಂಟೆಯಾಗಿದೆ, ನನ್ನವರು ಇನ್ನು ಬಂದಿರಲಿಲ್ಲ. ಅವರದ್ದೇ ಫೋನ್ ಇರಬಹುದೆಂದು ನೋಡಿದೆ, ಅವರ ಫೋನಿಂದಲೇ ಕರೆಬಂದಿತ್ತು. ಆದರೆ ಮಾತಾಡಿದವರು ಮಾತ್ರ ಬೇರೆ ಯಾರೋ, ನನ್ನವರಿಗೆ ಆಕ್ಸಿಡೆಂಟ್ ಆಗಿದೆಯೆಂದು, ಸಿರಿಯಾಸ್ಸಾಗಿದ್ದಾರೆಂದು ತಿಳಿಸಿದರು.
ಒಂದುಕ್ಷಣ ಆಕಾಶವೇ ಕಳಚಿದಂತಾಗಿತು. ಎದ್ನೋ ಬಿದ್ನೋ ಎಂದು ಆಸ್ಪತ್ರೆಗೆ ದವಡಾಯಿಸಿದೆ. ನನ್ನ ಗಂಡ ಐ.ಸಿ.ಯು ನಲ್ಲಿದ್ದರು. ಅವರ ಸ್ನೇಹಿತರೆಲ್ಲರು ಬಂದಿದ್ದರು. ಅವರ ಮೆದುಳಿಗೆ ತೀವ್ರ ಪೆಟ್ಟಾಗಿರುವುದರಿಂದ ಉಳಿಯುವುದು ಕಷ್ಟ ಎಂದರು, ನನಗೆ ಗಾಬರಿ, ಜೊತೆಗೆ ಆಸ್ಪತ್ರೆಗೆ ಬರುವ ಅವಸರದೀ, ಬರಿಗೈಯಲ್ಲೀ ಬಂದಿದ್ದೆ. ಆಗ ಆಸ್ಪತ್ತರೆಗೆ ಹಣ ಪಾವತಿಸಲು ಮುಂದಾಗಿದ್ದೆ ಅವರ ಸ್ನೇಹಿತರು. ಪೊಲೀಸ್ ಪ್ರಶ್ನೆಗಳು, ಆಸ್ಪತ್ರೆ ವಿಧಾನಗಳು ಯಾವುದು ನನ್ನ ಬಳಿ ಬಾರದ ಹಾಗೆ ಎಲ್ಲಾ ಅವರೇ ನೋಡಿಕೊಂಡರು. ‘ಅತ್ತಿಗೆ ನಾವಿದ್ದೇವೆ, ಹೆದರಬೇಡಿ’ ಎಂದರು. ನನಗೆ ಅಳು ಉಮ್ಮಳಿಸಿ ಬಂತು. ಇಂತಹವರನ್ನ ನನ್ನವರಿಂದ ದೂರಮಾಡಲು ಯತ್ನಿಸಿದ್ದು ಎಂದು ಬೇಸರವಾಯಿತು. ಡಾಕ್ಟರ್ ಒಳಗೆ ಕರೆದು, ‘ಸಾರಿ ನಿಮ್ಮ ಗಂಡ ಕೋಮದಲ್ಲಿದ್ದಾರೆ’ ಎಂದಾಗ ನನಗೇ ಯಾರೋ ನನ್ನ ಕರುಳು ಹಿಸುಕಿದಂತ ಅನುಭವ. ನಾನು ಇಲ್ಲಾ ಸುಳ್ಳು, ಇದನ್ನು ನಂಬುವುದಿಲ್ಲ, ನನಗೆ ಅವರು ಬೇಕು ಎಂದು ಬೊಬ್ಬೆ ಇಡಲು ಶುರುಮಾಡಿದೆ.
ನಂತರ ಅಲ್ಲಿಂದ ಅವರ ಸ್ನೇಹಿತರು ಹೊರಗೆ ಕರೆದುಕೊಂಡು ಬಂದು, ‘ಅತ್ತಿಗೆ ಈಗ ಧೈರ್ಯವಾಗಿರಬೇಕು ಅವನಿಗೆ ಏನು ಆಗುವುದಿಲ್ಲ. ನಂಬಿಕೆ ಕಳೆದುಕೊಳ್ಳ ಬೇಡಿ’ ಎಂದರು. ನನ್ನ ಕಲ್ಪನೆಯ ರಾಜಕುಮಾರ, ಕಲ್ಪನೆಗು ಮೀರಿ ದೊಡ್ಡ ವ್ಯಕ್ತಿಯಾಗಿದ್ದ. ಆದ್ದರಿಂದಲೇ ಅವನ ಸಂಪಾದನೆ ನನಗೆ ಆಸ್ಪತ್ರೆಯಲ್ಲಿ ತಿಳಿಯಿತು. ಪ್ರಿತಿದಿನ ಏನಿಲ್ಲ ಅಂದರೂ 15 ಜನ ಅವರÀನ್ನು ನೋಡಲು ಬರುತ್ತಿದ್ದರು. ಅವರನ್ನು ನೋಡಿಕೊಳ್ಳುವುದನ್ನು ಬಿಟ್ಟರೇ, ಹಣಕ್ಕಾಗಲಿ, ಆಸ್ಪತ್ರೆಯ ತಾಪತ್ರಯಗಳಾಗಲೀ ನನ್ನ ವರೆಗು ಬಾರದಂತೆ ಅವರ ಸ್ನೇಹಿತರು ಗಮನಿಸಿಕೊಂಡಿದ್ದರು. ನಿರೀಕ್ಷೆಯ ಕಲ್ಪನೆಗಳಲಿದ್ದ ನನಗೆ, ವಾಸ್ತವವಾಗಿ ನನ್ನ ಗಂಡನ ಬಗ್ಗೆ ಏನು ಗೊತ್ತಿರಲಿಲ್ಲ. ಅವರ ಬ್ಯಾಂಕ್ ವಿವರಗಳು, ಶೇರ್ ವಹಿವಾಟುಗಳು ಏನು ತಿಳಿದಿರಲಿಲ್ಲ. ಅವರು ಇವೆಲ್ಲದರ ಬಗ್ಗೆ ಹೇಳಲು ಬಂದಾಗ, ‘ನನ್ನ ಪ್ರಪಂಚ ದುಡ್ಡಿಗೆ ಸೀಮಿತವಾಗಿಲ’್ಲ ಎಂದು ಹಂಗಿಸುತ್ತಿದ್ದೆ. ಅವರ ಸ್ನೇಹಿತರಿಲ್ಲದಿದ್ದರೇ ನಾನು ಏನಾಗಿತ್ತಿದ್ದೆನೋ ನಾ ಅರಿಯೇ. 
ಇವತ್ತಿಗೆ ನನ್ನ ಮನಸ್ಸು ನನ್ನ ಜೀವನ ಹೀಗಾಯಿತಲ್ಲ ಎಂದು ಕೊರಗಲಾರಂಭಿಸಿದರೇ, ನಾನು ಆ ಹೊಣೆಯನ್ನ ನನ್ನ ಮೇಲೆ ಹಾಕಿಕೊಳ್ಳುವೆ. ಅವತ್ತು ಸ್ವಲ್ಪ ಶಾಂತಿ ಇಂದ ಇದ್ದಿದ್ದರೇ, ಅವರು ಮನೆಯಿಂದ ಹೊರನಡೆಯುತ್ತಿರಲಿಲ್ಲ, ಈ ಪರಸ್ಥಿತಿ ಬರುತ್ತಲೂ ಇರಲಿಲ್ಲ. ಮದುವೆ ಮುಗಿದರೇ ಎಲ್ಲಾ ಮುಗಿಯಿತು. ಗಂಡ ಎಲ್ಲವನ್ನು ನೋಡಿಕೊಳ್ಳುತ್ತಾನೆ ಎಂಬ ನನ್ನ ಕಲ್ಪನೆಯನ್ನು ಈ ಘಟನೆ ನುಚ್ಚು ನೂರಾಗಿಸಿದೆ. ಮದುವೆ ಹೊಸ ಆರಂಭ. ಇಬ್ಬರು ವಿವಿಧ ಆಲೋಚನೆಯ, ವಿವಿಧ ವ್ಯಕ್ತಿತ್ವಗಳ ಮನುಷ್ಯರ ಸಮ್ಮಿಲನ ಮದುವೆ. ಒಬ್ಬ ವ್ಯಕ್ತಿಯನ್ನು, ಅವನ ಒಳ್ಳೆಗುಣಗಳು ಹಾಗೆ ನ್ಯೂನತೆಗಳ ಸಮೇತ ಒಪ್ಪಿಕೊಳ್ಳುವುದೇ ನಿಜವಾದ ಪ್ರೀತಿ ಅಂತ ನನ್ನ ಗಂಡನಿಂದ ಕಲಿತಿದ್ದೇನೆ. ನನ್ನ ಚೌಕಟ್ಟಿನ ನಿರೀಕ್ಷೆಗಳಿಗೆ ಸ್ಪಂದಿಸಿದರೇ ಮಾತ್ರ ಅವರು ನನ್ನನ್ನು ಪ್ರೀತಿಸುತ್ತಾರೆ ಎಂದರ್ಥವಲ್ಲ ಎಂದು ನನಗೆ ಚೆನ್ನಾಗಿ ಅರ್ಥವಾಗಿದೆ. ಮಾತು ಮನೆಕೆಡಿಸಿತು ಎಂದು ನನ್ನಂತಹವರನ್ನು ಕಂಡೇ ಹಿರಿಯರು ಹೇಳಿದ್ದಾರೆ ಅನಿಸುತ್ತೆ. ಸಿಟ್ಟಲೀ ಕೂಯ್ದುಕೊಂಡ ಮೂಗು, ಸಿಟ್ಟಲೀ ಆಡಿದ ಮಾತು ಎರಡು ಅಪಾಯಕಾರಿ.
ಈಗ ಗಂಡ ಸದಾ ನನ್ನ ಜೊತೆಯಲ್ಲೇ ಇರುತ್ತಾರೆ, ಹೆಚ್ಚು ಸಮಯ ನನ್ನೊಟ್ಟಿಗೆ ಕಳೆಯುತ್ತಾರೆ. ಆದರೆ ಅವರಿಗೆ ಸರಿಯಾಗಿ ಪ್ರಜ್ಞೆ ಇಲ್ಲಾ. ಒಮ್ಮೊಮ್ಮೆ ಬರುತ್ತೆ ಹಾಗೆ ಮತ್ತೆ ಕಣ್ಣುಮುಚ್ಚುತ್ತಾರೆ. ಡಾಕ್ಟರ್ ಒಂದಷ್ಟು ಒಳ್ಳೆಯ ಬೆಳವಣಿಗೆಗಳಿವೆ ಎಂದಿದ್ದಾರೆ. ಒಂದೇ ಒಂದು ಅವಕಾಶ ಆ ದೇವರು ನನಗೆ ಕಲ್ಪಿಸಿದರೇ, ಮತ್ತೆಂದು ಅವರನ್ನು ನಾನು ಬಿಟ್ಟುಕೊಡಲಾರೆ. ಆದರೆ ಅಲ್ಲಿವರೆಗು ನನ್ನ ಒಂಟಿ ವೇದನೆ ನಾನೆ ಅನುಭವಿಸಬೇಕು. ಅನುಭವಿಸುತ್ತೇನೆ. ಸಮಯ, ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿರುವುದಿಲ್ಲ, ಅವರು ಯಾವಾಗಲು ಹೇಳುತಿದ್ದರು ‘ಸಿಕ್ಕ ಸಮಯವೆಲ್ಲಾ ಜಗಳವಾಡಿ ಸಮಯ ಕೊಡುತ್ತಿಲ್ಲ ಎನ್ನಬೇಡ’ ಎಂದು. ಹೌದು ಎಷ್ಟು ಸಮಯ ನಾನು ಕೈಯ್ಯಾರೆ ಹಾಳುಮಾಡಿಕೊಂಡೆ. ಆದರೆ ಈಗ ಸಮಯವಿದೆ ಆದರು ಏನುಮಾಡಲಾಗುತ್ತಿಲ್ಲ. ಈ ಹಿಂದೆ ನಾನು ‘ತುಂತುರು ಅಲ್ಲಿ ನೀರ ಹಾಡು..’ಎಂದು ಹಡುತ್ತಿದ್ದಾಗ ಅವರು ನನ್ನನ್ನು ನಾನಂದುಕೊಂಡಂತೆ ಹೊಗಳುತ್ತಿಲ್ಲ ಎಂದು ಬೇಸರಿಸಿಕೊಳ್ಳುತ್ತಿದ್ದೆ. ಆದರೆ ಈಗ ಬೇಸರಿಸಿಕೊಳ್ಳಲ, ಸುಮ್ಮನೆ ಕೇಳಿ ಸಾಕು ಎಂದರೂ ಅವರು ಹಾಡು ಕೇಳುತ್ತಿಲ್ಲ. ಇಷ್ಟೇ ಬದುಕು. ಒಂದು ದಾಂಪದ್ಯದಲ್ಲಿ ಸಂವಹನ, ನಂಬಿಕೆ, ಬದ್ದತೆ, ಗೌರವ ತುಂಬ ಮುಖ್ಯ, ಇವೆಲ್ಲಾ ಇದ್ದ ಕಡೆ ಪ್ರೀತಿ ಕಂಡಿತ ಇರುತ್ತದೆ. ಪ್ರೀತಿಯ ಬಗೆಗೆ ನಾವೆ ನಮಗೆ ಬೇಕಾದ Pಲ್ಪನೆಗಳನ್ನು ಇಟ್ಟುಕೊಂಡು ಅದನ್ನೆ ಪ್ರೀತಿ ಎಂದು ನಂಬಿ, ಆ ಪ್ರೀತಿ ನಮ್ಮವರು ಕೊಡುತ್ತಿಲ್ಲ ಎಂದು ನೋವು ಪಟ್ಟರೇ ಏನು ಪ್ರಯೋಜನ? ಈಗ ನನ್ನ ಬದುಕಿಗೆ ಅವರ ಚೇತರಿಸಿಕೊಳ್ಳುತ್ತಾರೆ ಎಂಬ ನಂಬಿಕೆಯೆ ಆಸರೆ. ಆ ನಂಬಿಕೆಯಲ್ಲೇ ನನ್ನದಿನಗಳನ್ನು ಕಳೆಯುತ್ತಿದ್ದೇನೆ.  

Sunday, January 20, 2019

ಅನಾಮಿಕಳ ಅಂತರಂಗ




ಇವತ್ತು ನನಗೆ ಬಹಳ ಖುಷಿಯಾಗ್ತಿದೆ. ಒಂದು ಕೆಲಸದ ಇಂಟವ್ರ್ಯೂ ಎದುರಿಸಿದ್ದೇ  ಇವತ್ತಿನ ನನ್ನ ಖುಷಿಗೆ ಕಾರಣ ಅಂತಂದ್ರೆ ನಂಬುತ್ತೀರಾ? ಹೌದು ದೂರದಿಂದ ನೋಡಿದವರಿಗೆ ಒಳ್ಳೆ ಅಂಕ ಪಡೆಯುವ ನನ್ನಂತಹ ವಿದ್ಯಾರ್ಥಿ ಒಂದು ಕೆಲಸ ಗಿಟ್ಟಿಸಿಕೊಳ್ಳೋದು ಖಂಡಿತ ದೊಡ್ಡವಿಷಯವಲ್ಲ. ಆದರೆ ಹತ್ತಿರದಿಂದ ಬಹಳ ಹತ್ತಿರದಿಂದ ನನ್ನ ಬಲ್ಲವರಿಗೆ ಅಂತಂದ್ರೆ ನನಗೆ ಮಾತ್ರ ಗೊತ್ತಿದೆ ಈ ಹಂತಕ್ಕೆ ಬರಲು ನಾನು ಎಂತಹ ದೊಡ್ಡ ಹೋರಾಟ ಮಾಡಬೇಕಾಯಿತೆಂದು. ಆ ಹೋರಾಟ ಸಮಾಜದ ವಿರುದ್ಧವೊ, ಕುಟುಂಬದ ವಿರುದ್ಧವೋ ಅಥವಾ ಮತ್ಯಾರದ್ದೋ ವಿರುದ್ಧವೋ ಅಲ್ಲ; ಈ ಹೋರಾಟ ನನ್ನ ವಿರುದ್ಧವೇ. 
ನಾನು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವಳು. ನನ್ನ ಅಪ್ಪ ಬ್ಯಾಂಕ್ ಉದ್ಯಮಿ, ಅಮ್ಮ ಗೃಹಿಣಿ. ನನಗೆ ಯಾವುದಕ್ಕೂ ಕೊರತೆ ಬಾರದ ಹಾಗೆ ನನ್ನ ಪೋಷಕರು ನನ್ನನ್ನು ಸಲಹುತ್ತಿದ್ದರು. ಎಲ್ಲಾ ಮಕ್ಕಳಂತೆ ಬೆಳೆಯುತಿದ್ದ ನಾನು, ಆಟ ಪಾಠಗಳಲ್ಲಿ ಸದಾ ಮುಂದು. ಆಗ ನಾನು 7ನೇ ತರಗತಿಯಲ್ಲಿದ್ದೆ, ಆಗಿನ್ನು ಪ್ರೌಢಾವಸ್ತೆಗೆ ಕಾಲಿಟ್ಟಿದೆ.್ದ ದೇಹದಲ್ಲಿ ವಿವಿಧ ಬದಲಾವಣೆಗಳು ಹಾಗೆಯೇ ಮನಸ್ಸಿನಲ್ಲಿಯೂ ನಾನಾ ಕುತೂಹಲಗಳು. ನಮ್ಮ ಮನೆಯ ಎದುರು ಮನೆಗೆ ನವ ವಿವಾಹಿತ ಜೋಡಿ ಬಾಡಿಗೆಗೆ ಬಂದರು. ನನ್ನ ಕೋಣೆಯ ಎದುರಿಗೆ ಅವರ ಕೋಣೆ ಇತ್ತು. ಅವರೆಂದಿಗು ಕಿಟಕಿ ಮುಚ್ಚದ ಕಾರಣ, ನನಗೆ ಅವರ ಕೋಣೆಯಲ್ಲಿನ ಸರಸ ಸಲ್ಲಾಪಗಳು ಕಾಣುತಿತ್ತು. ಅದಾಗಲೇ ಸಾಕಷ್ಟು ಕುತೂಹಲಗಳಲ್ಲಿ ಮಿಂದಿದ್ದ ನನ್ನ ಮನಸ್ಸಿಗೆ ಇದು ಮತ್ತಷ್ಟು ಕೋಲಾಹಲ ಎಬ್ಬಿಸಿತು. ಈ ಅನುಭವ ನನಗಾದಲ್ಲಿ ಹೇಗಿರುತ್ತದೆ ಎಂಬ ಆಲೋಚನೆಗಳೊಡನೆ ಕಲ್ಪನೆಗಳು ವಿಹರಿಸ ತೊಡಗಿದವು. ಸಂಪ್ರದಾಯಸ್ತ ಕುಟುಂಬದವಳಾದ ನಾನು ಅಮ್ಮನ ಹತ್ತಿರ ನನ್ನ ಕುತೂಹಲಗಳನ್ನೂ ನನ್ನ ಆಲೋಚನೆಗಳನ್ನು ಹಂಚಿಕೊಳ್ಳುವ ಧೈರ್ಯಮಾಡಲಿಲ್ಲ.
ಹೀಗಿರುವಾಗಲೆ ಎದುರು ಮನೆಯವರು ನಮ್ಮ ಮನೆಗೆ ಚಿರಪರಿಚಿತರಾದರು. ಹಾಗೆ ಎದುರು ಮನೆಯವ ನನ್ನೊಟ್ಟಿಗೆ ಬಹಳ ಸಲಿಗೆಯಿಂದ ನಡೆದುಕೊಳ್ಳುತಿದ್ದ. ಅದು ನನಗು ಹಿಡಿಸಿತ್ತು. ಆ ದಿನ ನಮ್ಮ ಮನೆಯಲ್ಲಿ ಅಪ್ಪ ಅಮ್ಮ ಯಾರು ಇರಲಿಲ್ಲ. ಎದುರು ಮನೆಯವ ಅಪ್ಪನೊಂದಿಗೆ ಏನೋ ಮಾತನಾಡಬೇಕೆಂದು ಮನೆಗೆ ಬಂದ. ಅಪ್ಪ ಮನೆಯಲ್ಲಿ ಇಲ್ಲವೆಂದರೂ ಒಳಗೆ ಬಂದ. ನನಗೆ ಏನು ಹೇಳಬೇಕು ತಿಳಿಯದಾದೆ. ಬಂದವನೇ ನಮ್ಮ ಮನೆಯ ಬಾಗಿಲು ಹಾಕಿ ನನ್ನನ್ನು ಅವನೆಡೆಗೆ ಬರಮಾಡಿಕೊಂಡ. ಒಂದೆಡೆ ಅವನನ್ನು ತಡೆಯಬೇಕೆಂದೆನಿಸಿದರು ಅದ್ಯಾಕೊ ಗೊತ್ತಿಲ್ಲ ನಾನು ಅವನನ್ನು ತಡೆಯಲಿಲ್ಲ. ಈ ಘಟನೆಯಾಗಿ ಸ್ವಲ್ಪ ದಿನದಲ್ಲೇ ಅವನು ಮನೆ ಕಾಲಿಮಾಡಿಕೊಂಡು ಹೊರಟು ಹೋದ. ಆದರೆ ನನ್ನ ಮನಸಿನಲ್ಲಿ ಎಂದೂ ಮಾಂiÀiದ ಶಾಶ್ವತಗಾಯವಾಗಿ ಉಳಿದುಬಿಟ್ಟ. ನನ್ನ ನಿಷ್ಕಲ್ಮಶ ಮನಸ್ಸಿನಲ್ಲಿ ದೊಡ್ಡ ಅಲೆಯೊಂದನ್ನು ಎಬ್ಬಿಸಿ ಬಿಟ್ಟ. ನನಗೆ ನನ್ನ ದೇಹದ ಮೇಲೆ ಅಸಹ್ಯ ಶುರುವಾಯಿತು. ಅಪ್ಪ ಅಮ್ಮನಿಗೆ ಮೋಸ ಮಾಡಿದ ಅಪರಾಧಿ ಪ್ರಜ್ಞೆ ನನ್ನನ್ನು ಕಾಡಲಾರಂಭಿಸಿತು. ಆದರೆ ಎಲ್ಲರ ಮುಂದೆ ನಗು ಮೊಗದಿಂದ ಇರುತಿದ್ದೆ. ಆಟ ಪಾಠಗಳಲ್ಲಿನ ನನ್ನ ಮೊದಲಿನ ಆಸಕ್ತಿ ಕ್ರಮೇಣವಾಗಿ ಕ್ಷೀಣಿಸುತ್ತ ಬಂದಿತು. ಕಾಲೇಜು ಮೆಟ್ಟಿಲೇರುವಷ್ಟರಲ್ಲಿ ಕೀಳರಿಮೆ ಅಪನಂಬಿಕೆಗಳು ನನ್ನ ಮನೆಮಾಡಿತ್ತು. ನನ್ನ ಬಗ್ಗೆಯೇ ಸ್ಪಷ್ಟತೆ ಇಲ್ಲದಾಗ ಸ್ನೇಹಿತರ ಸಹವಾಸ ನನ್ನ ಮನಸ್ಸಿಗೆ ಮುದ ನೀಡಿತ್ತು. ನನ್ನ ಜಗತ್ತೆಲ್ಲಾ ಅವರೇ ಆವರಿಸಿಕೊಂಡಿದ್ದರು. ಮನೆಗೆ ಹೋದರೆ ಹಳೇ ನೆನಪುಗಳು ಪಾಪಪ್ರಜೆÐಯಾಗಿ ಕಾಡುತಿದ್ದವು. ಅವುಗಳನ್ನು ಹತ್ತಿಕ್ಕಲು ಸ್ನೇಹಿತರೊಂದಿಗೆ ಹೆಚ್ಚೆಚ್ಚು ಸಮಯ ಕಳೆಯಲಾರಂಭಿಸಿದೆ. ನನ್ನ ಸ್ನೇಹಿತರು ಹೇಳಿದ ಹಾಗೆ ಕೇಳದಲ್ಲಿ ಅವರನ್ನು ಕಳೆದುಕೊಂಡು ಒಂಟಿಯಾಗಿಬಿಡುವ ಭಯದಿಂದ ಅವರು ಏನು ಹೇಳಿದರು ಮಾಡಲಾರಂಭಿಸಿದೆ. ಸ್ನೇಹದ  ಹೆಸರಲ್ಲಿ ನನ್ನನ್ನು ಅಡ್ಡದಾರಿಗೆ ಎಳೆಯುತ್ತಿದ್ದಾರೆ ಎಂಬುದರ ಅರಿವಿದ್ದರೂ ನಾನು ಸುಮ್ಮನಿರುತ್ತಿದ್ದೆ. ಹೀಗೆ ಪಾಪಪ್ರಜ್ಞೆ, ಒಂಟಿತನಕ್ಕೆ ಅಂಜಿ ನನ್ನ ಮೇಲಿನ ಪೂರ್ತಿ ನಿಯಂತ್ರಣ ಕಳೆದುಕೊಂಡು ನಮ್ಮ ಮನೆಯವರೆಲ್ಲರ ಮೇಲೆ ಅಸಹನೆಯಿಂದ ವರ್ತಿಸುತಿದ್ದೆ. ಅವರು ಏನೆಂದರೂ ಕೋಪಗೊಳ್ಳುತಿದ್ದೆ. ಹೀಗಿರುವಾಗಲೆ ಇಂಜಿನಿಯರಿಂಗ್ ಕೂಡ ಮುಗಿಸಿಕೊಂಡೆ. ಆದರೆ ಕೆಲಸ ಮಾಡಲು ಧೈರ್ಯ ಸಾಲಲಿಲ್ಲ. ಸುಮ್ಮನೆ ಮನೆಯಲ್ಲೇ ಕುಳಿತು ಬಿಟ್ಟೆ. ಸ್ನೇಹಿತರೊಂದಿಗೆ ಇಷ್ಟವಿಲ್ಲದ ದಾರಿಗೆ ಹೋಗಲು ಮನಸ್ಸಾಗಲಿಲ್ಲಾ. ಮೊಬೈಲ್ ಆಫ್ ಮಾಡಿ ಹೊರಿಗಿನವರ ನೆರಳೆ ಬೀರದಂತೆ ಉಳಿದು ಬಿಟ್ಟೆ.
ಸದಾ ಲವಲವಿಕೆಯಿಂದ ಇದ್ದ ಮಗಳು ಮನೆಯಲ್ಲೇ ಉಳಿದು ಬಿಟ್ಟಾಗ ಸಹಜವಾಗಿಯೆ ನನ್ನ ಪೋಷಕರಿಗೆ ಆತಂಕ ಶುರುವಾಯಿತು. ನನ್ನ ಸಮಸ್ಯೆಗೆ ಅವರು ಕಂಡುಕೊಂಡ ಉತ್ತರ ನನ್ನ ಮದುವೆ. ನನಗೊಂದು ಮದುವೆ ಮಾಡಿಬಿಟ್ಟರೆ ಎಲ್ಲಾ ಸರಿ ಹೋಗಿಬಿಡುತ್ತದೆ ಎಂದು ಅವರು ಬಲವಾಗಿ ನಂಬಿದ್ದರು. ಅಂತೆಯೆ ನನಗೆ ಸೂಕ್ತವಾದ ವರಾನ್ವೇಷಣೆಗೆ ಸಜ್ಜಾದರು. ಈ ವಿಷ್ಯ ನನ್ನ ಗಮನಕ್ಕೆ ಬಂದೊಡನೆಯೇ ನನ್ನ ಮೈ ಕಂಪಿಸಿತು. ಭಯದಿಂದ ಬೆವೆತು ಹೋದೆ, ಭಯ ಹೋಗಿ ವಿಪರೀತ ಸಿಟ್ಟು ಬಂತು ಮನೆಯ ಸಾಮನ್ನೆಲ್ಲ ಒಡೆದು ಹಾಕಿ ರಂಪಾಟ ಮಾಡಿಬಿಟ್ಟೆ. ಎದುರು ಮನೆಯವನ ನಡವಳಿಕೆ, ನನ್ನ ಗೆಳೆತನದ ದುರುಪಯೋಗ ಪಡಿಸಿಕೊಂಡ ನನ್ನ ಗೆಳೆಯರನ್ನು ಕಂಡ ನಾನು, ಗಂಡಸರ ನೆರಳನ್ನು ಕಂಡರೂ ದ್ವೇಷಿಸುತಿದ್ದೆ. ಇದು ಸಾಲದಕ್ಕೆ ನನ್ನ ದೇಹದ ಮೇಲಿದ್ದ ಅಸಹ್ಯ, ಮುಂದೆ ಬರುವ ಗಂಡನೆದುರು ಕೀಳಾಗಿ ಬಿಡುವ ಭಯದಿಂದ ನನಗೆ ಮದುವೆಯ ಮೇಲೆ ನಂಬಿಕೆ ಇರಲಿಲ್ಲಾ.
ಈ ಘಟನೆಯ ನಂತರ ಮತ್ತಷ್ಟು ಕುಗ್ಗಿಹೋದೆ. ಅಲ್ಲಿಂದ ಅಜ್ಜಿ ಮನೆಗೆ ಹೊರಟು ಹೋದೆ. ದಿನೇ ದಿನೇ ಹೆಚ್ಚುತ್ತಿರುವ ನನ್ನ ಆಕ್ರೋಷವನ್ನು ಕಂಡ ಅಮ್ಮ, ನನ್ನಲ್ಲಿ ಏನೋ ಅಸಹಜವಾಗಿದೆ ಎಂದು ಗುರುತಿಸಿ ನನ್ನನ್ನು ಒಬ್ಬ ಆಪ್ತಸಮಾಲೋಚನೆತಜ್ಞರ ಬಳಿ ಕರೆದುಕೊಂಡು ಹೋದರು. ಇಷ್ಟರಲ್ಲಾಗಲೆ ನನ್ನ ಮನಸ್ಸು ನಾನು ಬದಲಾಗಬೇಕು ಆದರೆ ಹೇಗೆ ಎಂಬ ಬಗೆ ಹುಡುಕುತಿತ್ತು. ನಂತರ ಆಪ್ತ ಸಮಾಲೋಚನೆಗಾರರಿಗೆ ನನ್ನ ವಿಷಯಗಳನೆಲ್ಲಾ ಹಂಚಿಕೊಂಡೆ. ಮನಸ್ಸು ನಿರಾಳವಾಯ್ತು. ನಿಧಾನವಾಗಿ ನಾನು ನನ್ನ ಪಾಪ ಪ್ರಜ್ಞೆಯಿಂದ ಹೊರ ಬರಲಾರಂಭಿಸಿದೆ. ನಡೆದು ಹೋದ ಘಟನೆಗೆ ಚಿಂತಿಸಿ ಫಲವಿಲ್ಲ ಮುಂದೆ ಜೀವನದಲ್ಲಿ ಎಡವದಂತೆ ಎಚ್ಚರ ವಹಿಸುವೆ ಎಂದು ನಿರ್ಧರಿಸಿದೆ. ಇದರಿಂದ ನಿಧಾನವಾಗಿ ನಾನು ನನ್ನನ್ನು ಪ್ರೀತಿಸತೊಡಗಿದೆ.
 ಇವತ್ತಿಗೆ ನನ್ನ ದೇಹದ ಮೇಲೆ ಯಾವುದೆ ರೀತಿಯ ಅಸಹ್ಯ ನನಗಿಲ್ಲ. ಯಾರೆ ನನ್ನ ಸ್ನೇಹಿತರು ಕರೆ ಮಾಡಿದರೂ, ನಾನು ಯಾವುದೆ ಅಳುಕಿಲ್ಲದೆ ನನ್ನ ಅನಿಸಿಕೆಗಳನ್ನು ನೇರವಾಗಿ ಉತ್ತರಿಸುವುದನ್ನು ಕಲೆತೆ. ಮತ್ತೆ ನನ್ನ ಜೀವನದಲ್ಲಿ ಏನಾದರು ಸಾಧಿಸಬೇಕೆಂಬ ಆಸೆ ಮೊಳಕೆಯೊಡೆಯಲಾರಂಭಿಸಿತು. ಈ ಹಂತದಲ್ಲಿ ನನ್ನ ಪೋಷಕರು ನನಗೆ ಯಾವುದೇ ರೀತಿಯ ಒತ್ತಡ ಬಲವಂತಗಳನ್ನು ಹೇರದೆ, ನಾನು ಬದಲಾಗುವುದಕ್ಕೆ ಸಮಯ ಕೊಟ್ಟರು. ಆಚೆ ಸಂಬಂಧಿಕರು, ಸ್ನೇಹಿತರು ನನ್ನ ಮದುವೆಯ ವಿಷ್ಯ ಪ್ರಸ್ತಾಪಿಸಿದಾಗಲೆಲ್ಲಾ ‘ಆಕೆ ಮೊದಲು ತನ್ನ ಕಾಲ ಮೇಲೆ ನಿಂತುಕೊಳ್ಳಲಿ ನಂತರ ಮದುವೆ ಮಾಡೋದು ಇದ್ದೇ ಇದೆ’ ಎಂದು ಉತ್ತರಿಸುತ್ತಿದ್ದರು. ಈ ವಾತಾವರಣದಿಂದ ನನ್ನ ಮನಸ್ಸಿಗೆ ಹಗುರವಾಯ್ತು. ಅದಾಗಲೇ ನನ್ನ ಜೊತೆ ಓದಿದವರೆಲ್ಲಾ ಕೆಲಸ ಮಾಡಿ ಮುಂದುವರೆದಿದ್ದರೇ, ನಾನು ಒಂದು ವರುಷ ಹಾಗೆ ಕಾಲಿ ಇದ್ದೇ. ಎಷ್ಟೋ ಜನ ನನ್ನನ್ನು ನೋಡಿ ನಕ್ಕದ್ದು ಇದೆ. ಕೈಲಾಗದವಳೆಂದು ಹೀಯಾಳಿಸಿದ್ದೂ ಇದೆ. ಆದರೆ ಅದು ನನಗೆ ಈ ಬಾರಿ ಧೃತಿಗೆಡುವ ಹಾಗೆ ಮಾಡಲಿಲ್ಲ, ಬದಲಿಗೆ ನಿಧಾನವಾಗಿಯಾದರೂ ನನ್ನ ಜೀವನದಲ್ಲಿ ಏನಾದರು ಸಾಧಿಸಬೇಕೆಂಬ ನನ್ನ ಬಯಕೆಗೆ ಮತ್ತಷ್ಟು ಪುಷ್ಠಿ ನೀಡಿತು.
ಮಾನಸಿಕ ನರಕ ಯಾತನೆ ಅನುಭವಿಸಿದ್ದ ನನಗೆ, ಮನಸ್ಸನ್ನು ಮೊದಲು ಹತೋಟಿಗೆ ತೆಗೆದುಕೊಳ್ಳುವುದೇ ನಿಜವಾದ ಸಾಧನೆಯಾಗಿದೆ. ನಮ್ಮ ಮನಸ್ಸು ನಮಗೆ ಬೆಂಬಲಿಸಿದರೆ ಎಲ್ಲವು ಸಾಧಿಸಬಹುದೆಂಬ ಅರಿವು ನನಗಾಗಿದೆ. ನಾನು ದಿನೇ ದಿನೇ ನನ್ನ ಬಗ್ಗೆ ಹೆಚ್ಚು ಅರಿಯುತ್ತಿದ್ದೇನೆ. ಇವತ್ತಿಗೆ ಕೆಲಸಕ್ಕೆ ಸಂದರ್ಶನ ಕೊಡುವಷ್ಟು ಸುಧಾರಿಸಿದ್ದೇನೆ. ಈ ಅನುಭವದಲ್ಲಿ ನಾನು ಯಾರನ್ನು ಜಡ್ಜ್ ಮಾಡಬಾರದೆಂದು ಅರಿತಿದ್ದೇನೆ. ನಮ್ಮನ್ನು ನಾವು ಪ್ರೀತಿಸಬೇಕೆಂದು ಕಲಿತಿದ್ದೇನೆ. ಆದ್ದರಿಂದಲೇ ನನ್ನ ಘಟನೆಗಳಿಂದ ಜನ ನನ್ನ ಬಗ್ಗೆ ಏನಂದುಕೊಂಡುಬಿಡುತ್ತಾರೋ ಎಂಬ ಯಾವುದೇ ಅಳುಕಿಲ್ಲದೇ ನನ್ನ ಜೀವನದ ಅನುಭವವನ್ನು ಹಂಚಿಕೊಂಡಿದ್ದೇನೆ.



Thursday, January 10, 2019




   
ಅನಾಮಿಕನ ಅಂತರಂಗ


ಮಗು ಹುಟ್ಟಿದ ತಕ್ಷಣ ಅತ್ತರೆ ಎಲ್ಲರು ಸಂಭ್ರಮಿಸುತ್ತಾರೆ. ಅದೇ ಅಳಲಿಲ್ಲ ಎಂದರೇ ಎಲ್ಲರಿಗು ದಿಗಿಲಾಗುತ್ತದೆ. ಒಟ್ಟಾರೆ ಮಗು ಗಂಡಾಗಲಿ, ಹೆಣ್ಣಾಗಲಿ ಅಳುವುದು ಪ್ರಕೃತಿ ಧರ್ಮ. ಅದು ಮಗುವಿನ ಸಂವಹನದ ವಿಧ. ನಮ್ಮಲ್ಲಿ ಹೆಣ್ಣುಮಕ್ಕಳು ಅತ್ತರೆ ಎಲ್ಲರು ಕಣ್ಣೊರೆಸಲು ಮುಂದಾಗುತ್ತೇವೆ. ಅದೇ ಒಬ್ಬ ಹುಡುಗ ಅತ್ತರೇ..? ಹೌದು ನಾನೊಬ್ಬ ಹುಡುಗ. ನಾನು ಹುಡುಗ ಆಗಿದ್ದೇ ಎಷ್ಟೋ ಬಾರಿ ನನಗೆ ಶಾಪದಂತೆ ತೋರಿದೆ. ನಾನು ಸೂಕ್ಷ್ಮ ಜೀವಿ, ಎಲ್ಲಾ ರೀತಿಯ ಭಾವನೆಗಳನ್ನು ವ್ಯಕ್ತಪಡಿಸುವುದು ನನ್ನ ಸ್ವಭಾವ. ಆದರೆ ಅಳುವುದಕ್ಕೆ ನಾನು ಪಡುತ್ತಿದ್ದ ಕಷ್ಟ ಅಷ್ಟಿಷ್ಟಲ್ಲ, ನನ್ನ ಭಾವನೆಯನ್ನು ವ್ಯಕ್ತಪಡಿಸಲಾಗದೆ ಅನುಭವಿಸಿದ ಆ ಮೂಕ ವೇದನೆಯನ್ನು ನಾನು ಹಂಚಿಕೊಂಡಿದ್ದೇನೆ.
ನನಗಾಗ 4 ವರ್ಷವಿರಬೇಕು ನಾನು ನನ್ನ ಅಕ್ಕನ ಜೊತೆ ಆಟವಾಡುವಾಗ ರೋಡ್‍ನಲ್ಲಿ ಬಿದ್ದುಬಿಟ್ಟೆ. ನನ್ನ ಮಂಡಿಯಲ್ಲಿ ಗಾಯವಾಗಿ ರಕ್ತಬಂದಿತು. ನನಗೋ ವಿಪರೀತ ಗಾಬರಿ, ನನಗೇನೊ ಆಗೋಗಿದೆ ಎಂದುಕೊಂಡು ಜೋರಾಗಿ ಅಳಲು ಶುರುಮಾಡಿಬಿಟ್ಟೆ. ನನ್ನ ಅಳಲನ್ನು ಕೇಳಿದ ನನ್ನ ತಂದೆ ಗಾಬರಿಯಿಂದ ಓಡಿ ಬಂದರು. ಬಂದವರೇ ಏನಾಯ್ತು ಎಂದು ವಿಚಾರಿಸಿದರು ನಾನು ನನ್ನ ಗಾಯವನ್ನು ತೋರಿಸಿದೆ. ಅವರು ಸಿಟ್ಟಲ್ಲೀ ಇಷ್ಟು ಚಿಕ್ಕ ಗಾಯಕ್ಕೆ ಒಳ್ಳೆ ಹುಡುಗಿ ತರಹ ಅಳೋz?À ಎಂದು ರೇಗಿಬಿಟ್ಟರು. ಆದರೆ ನನಗೆ ಹುಡುಗರು ಹೇಗೆ ಅಳಬೇಕು ಎಂದು ಹೇಳಿಕೊಡಲಿಲ್ಲ. ಮನೆಯಲ್ಲಿ ಅಕ್ಕ ತನಗೇನೆ ಕೆಲಸವಾಗಬೇಕಿದ್ದರು ಬಳಸುತ್ತಿದ್ದ ಏಕೈಕ ಬ್ರಹ್ಮಾಸ್ತ್ರ ಅದು ತನ್ನ ಅಳು. ಆದರೆ ನಾನು ಯಾವುದೇ ವಿಚಾರಕ್ಕೆ ಅತ್ತರು ಬೈಗುಳ ತಪ್ಪಿದಲ್ಲ. ‘ಹುಡುಗ ಆಗಿ ಅಳ್ತಿಯಲ್ಲಾ ಚೀ’ ಎಂಬ ಮಾತುಗಳು ಸರ್ವೆಸಾಮಾನ್ಯವಾಗಿದ್ದವು. ಹೀಗೆ ಬರುಬರುತ್ತಾ ನಾನು ಎಲ್ಲರ ಮಾತಿಗೆ ಅಂಜಿ ಎಲ್ಲರ ಮುಂದೆ ಅಳುವುದನ್ನೆ ನಿಲ್ಲಿಸಿಬಿಟ್ಟೆ. ಹುಡುಗ ಆದವನು ಎಲ್ಲಾ ಪರಿಸ್ಥಿತಿಗಳನ್ನು ಮನಗುಂದದೇ ಎದುರಿಸುತ್ತಾನೆ ಹೊರೆತು, ಹೆದರಿ ಅಳುತ್ತಾ ಕೂರುವುದಿಲ್ಲಾ ಎಂದು ಅಪ್ಪಾ ಯಾವಾಗಲು ಬೋದಿಸುತ್ತಿದ್ದರು. ನನ್ನ ಮನದಲ್ಲಿ ಅಳುವ ಹಕ್ಕು ಹೆಂಗಸರದ್ದೇ ಹೊರೆತು ಗಂಡಸರದಲ್ಲಾ ಎಂದು ಅಚ್ಚಾಗಿ ಉಳಿದುಬಿಟ್ಟಿತು. ಒಂದು ವೇಳೆ ನಾನು ಅತ್ತರೆ ನನ್ನನ್ನು ಹೆದರು ಪುಕ್ಕಲ, ಕೈಲಾಗದವನೆಂದು ಅಳೆದುಬಿಡುತ್ತಾರೆ ಎಂಬ ಅಳುಕು ಶುರುವಾಗಿತ್ತು. ನನ್ನ ಸಾಮಥ್ರ್ಯಕ್ಕೂ ಅಳುವಿಗು ಎತ್ತಣ ಸಂಬಂಧ ಎಂಬ ಪ್ರಶ್ನೆಗಳು ಬಂದರೂ ನಾನು ಎಂದಿಗು ಉತ್ತರ ಹುಡುಕುವ ಗೋಜಿಗೆ ಹೋಗಲಿಲ್ಲ.
ಆದರೆ ನನ್ನ ಗುಣ ಬದಲಾಯಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಹಾಗಂತ ಎಲ್ಲರ ಮುಂದೆ ಅಳುವ ಧೈರ್ಯವು ನನಗಿರಲಿಲ್ಲಾ. ನಾನು ಅದಕ್ಕಾಗಿ ಕಂಡುಕೊಂಡ ಮಾರ್ಗೊಪಾಯ ಮಾತ್ರ ಕಠಿಣವಾದದ್ದು. ಒಂದು ವೇಳೆ ಯಾವುದಾದರು ಘಟನೆಯಿಂದ ನನಗೆ ಅಳು ಬಂದರೇ ನಾನು ತಕ್ಷಣವೇ ಯಾರು ಇಲ್ಲದ ಸ್ಥಳವನ್ನು ಹುಡುಕುತ್ತಿದ್ದೆ. ಅದರಲ್ಲೂ ಕತ್ತಲಿರಬೇಕಿತ್ತು. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲುಕುಡಿಯುವ ಹಾಗೆ, ನಾನು ಯಾರು ಇಲ್ಲದ ಕತ್ತಲ ಕೋಣೆಯನ್ನು ಹುಡುಕಿ, ಕಣ್ಣುಮುಚ್ಚಿಕೊಂಡು ಮನಸ್ಸೋ ಇಚ್ಚೆ ಅತ್ತು ಮನಸ್ಸು ಹಗುರ ಮಾಡಿಕೊಂಡು ಬರುತಿದ್ದೆ. ಆದರೆ ಎಲ್ಲಾ ಸಂದರ್ಭದಲ್ಲೂ ಯಾರು ಇಲ್ಲದ ಕೋಣೆ ಸಿಗುತ್ತಿರಲಿಲ್ಲ, ಅಂತಹ ಪರಿಸ್ಥಿತಿಗಳಲ್ಲಿ ನನ್ನ ಸಂಕಟ ಹೇಳತೀರದು. ಎಷ್ಟೋ ಸಂದರ್ಭದಲ್ಲಿ ನನಗೆ ನಾನೆ ಕಚ್ಚಿಕೊಂಡು, ಚುಚ್ಚಿಕೊಂಡಿ ಇನ್ಯಾವುದೋ ಬಗೆಯಲ್ಲಿ ನನ್ನ ದೇಹಕ್ಕೆ ಹಿಂಸಿಸಿಕೊಂಡು ಅಳುವನ್ನು ಬಿಗಿಹಿಡಿದದ್ದು ಇದೆ. ನಂತರ ಒಂದು ಕೋಣೆ ಸಿಗುವವರೆಗು ನಾನು ಪಡುತ್ತಿದ್ದ ಹಿಂಸೆ ಮಾತ್ರ ಆ ದೇವರಿಗೆ ಪ್ರೀತಿ. ಮುಂದೆ ನನ್ನ ಈ ಅಳುವ ವಿಧ ನನಗೇ ಹವ್ಯಾಸವಾಗಿ ಬಿಟ್ಟಿತ್ತು. ನನಗೇನಾದರು ಅಳು ಬಂದರೇ ಒಂದು ಕತ್ತಲ ಕೋಣೆಯಲ್ಲಿ ಅಳುವವರೆಗು ಬೇರೆ ಯಾವ ವಿಷಯದಲ್ಲೂ ಗಮನಹರಿಸಲಾಗದಷ್ಟರ ಮಟ್ಟಿಗೆ ಹೋಗಿತ್ತು. ಅಳುಬಂದಾಗ ಅತ್ತುಬಿಟ್ಟರೇ ನನಗೆ ಅಷ್ಟು ಹಿಂಸೆ ಆಗುತ್ತಿರಲಿಲ್ಲ. ಆದರೆ ಅಳುವುದಕ್ಕೆ ನನಗೆ ಭಯ. ಹೊರಗಿನವರಿಗೆ ನಾನೊಬ್ಬ ಬಹಳ ಸುಖಿ, ಚೂಟಿ ಎಲ್ಲದರಲ್ಲೂ ಮುಂದು ಆದರೆ ನನಗೆ ಈ ಒಂದು ಹಿಂಸೆ ನನ್ನ ನೆಮ್ಮದಿಯನ್ನು ಕಸಿದಿತ್ತು.
ಎರಡು ವರ್ಷದ ಹಿಂದೆ ನಾನು ನನ್ನ ಊರಿಂದ ಪದವಿ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದಿದ್ದೆ, ಆಗ ಗಣೇಶ ಹಬ್ಬದ ಸಮಯ ನಾನು ನನ್ನ ಸಹಪಾಠಿಗಳೊಡನೇ ಸೇರಿ ಗಣಪತಿಯನ್ನು ಕೂಡಿಸಿ ವಿಜೃಂಬಣೆಯಿಂದ ಹಬ್ಬ ಆಚರಿಸಿದ್ದೆ. ಸಂಜೆ ಗಣೇಶನನ್ನು ವಿಸರ್ಜಿಸುವ ಸಮಯ, ಎಲ್ಲರು ತಯಾರಾಗುತ್ತಿದ್ದರು, ಆಗ ನನಗೆ ಒಂದು ಕರೆಬಂತು. ಫೋನಲ್ಲಿ ಮಾತಾಡುತಿದ್ದಂತೆ ಕಣ್ಣಲ್ಲಿ ನೀರು ತುಂಬಿಕೊಂಡಿತು ಆದರೆ ಕಣ್ಣೀರು ಕಣ್ಣಿಂದ ಹರಿಯುವ ಧೈರ್ಯ ಮಾಡಲಿಲ್ಲ. ಸುತ್ತ ನನ್ನಸ್ನೇಹಿತರಿದ್ದಾರೆ ನನಗೆ ತಡಿಯಲಾಗದಷ್ಟು ಅಳು ಬರುತ್ತಿದೆ, ಆದರೆ ನನಗೆ ಎಲ್ಲರ ಮುಂದೆ ಅಳೋದಕ್ಕೆ ಆಗುತ್ತಿಲ್ಲ. ಹುಡುಕಿದೆ, ಹುಡುಕಿದೆ ಒಂದು ಕತ್ತಲೆ ಕೋಣೆಗಾಗಿ ಅಲೆದು ಅಲೆದು ಸಾಕಾಯ್ತೆ ಹೊರೆತು ಒಂದು ಕೋಣೆ ಸಿಗಲಿಲ್ಲ. ಕಡೆಗೆ ನಾನು ಗಣೇಶನ ವಿಸರ್ಜನಕ್ಕೆ ಹಾಡಿ ಕುಣಿದಾಡಲು ತಂದಿಟ್ಟಿದ್ದ ಸೌಂಡ್ ಬಾಕ್ಸ್ ನಲ್ಲಿ ವಾಲ್ಯೂಮ್ ಜಾಸ್ತಿ ಮಾಡಿದೆ, ಎಲ್ಲಾ ಸ್ನೇಹಿತರನ್ನು ಒಗ್ಗೂಡಿಸಿ ನನ್ನ ಬಾಯಿಗೆ ಒಂದು ಕರ್ಚಿಫ್ ತುರಕಿಕೊಂಡು ಕುಣಿದೆ, ಕುಣಿದೆ, ಕಣ್ಣೇರನ್ನು ಎಲ್ಲರು ಬೆವರ ಹನಿಯೆಂದು ಭಾವಿಸುವ ಹಾಗೆ ಕುಣಿದೆ, ಕಡೆಗೆ ಉಸಿರಾಡಲು ಕಷ್ಟವಾಗುವ ವರೆಗು ಕುಣಿದೆ. ನಂತರ ಒಂದಿಷ್ಟು ತಡಮಾಡದೇ ಊರಿಗೆ ಹೊರಡುವ ಬಸ್ಸು ಹತ್ತಿದೆ. ನಾನು ಊರಿಗೆ ಹೊರಡುವಷ್ಟರಲ್ಲಿ ಕತ್ತಲಾಗಿತ್ತು, ಬಸ್ಸಿನಲ್ಲಿ ಅಷ್ಟೊಂದು ಜನರಿರಲಿಲ್ಲ. ಆ ಕತ್ತಲಲ್ಲಿ ನನ್ನ ಕಣ್ಣಹನಿಗಳು ಕಣ್ಣಿಂದ ಹೊರ ಜಾರುವ ಧೈರ್ಯ ಮಾಡಿದವು. ಮಧ್ಯರಾತ್ರಿ ವೇಳೆಗೆ ಊರು ತಲುಪಿದೆ, ಮನೆಯ ಹತ್ತಿರ ನೆಂಟರು, ಇಷ್ಟರು ನೆರೆ ಹೊರೆಯವರು ಎಲ್ಲರು ತುಂಬಿಕೊಂಡಿದ್ದಾರೆ. ಅಲ್ಲಿ ನನ್ನ ತಾಯಿಯ ಸಾವಾಗಿದೆ. ನನ್ನನ್ನು ಈ ಭೂಮಿಗೆ ಪರಿಚಯಿಸಿದ ನನ್ನವ್ವ ಇನ್ನಿಲ್ಲ. ನನ್ನಪ್ಪ ನನ್ನನ್ನು ಬೈದಾಗಲೆಲ್ಲಾ ನನ್ನ ಪರವಹಿಸಿ ನನ್ನ ಸಮಾಧಾನ ಪಡಿಸುತ್ತಿದ್ದ ನನ್ನವ್ವ ಇನ್ನಿಲ್ಲ. ನಾನು ಊರಿಂದ ಬರುವ ದಾರಿಯನ್ನೆ ಕಾದು ನನ್ನ ಖುಷಿಯಲ್ಲಿ ತನ್ನ ಖುಷಿಕಾಣುತ್ತಿದ್ದ ನನ್ನವ್ವ ಇವತ್ತು ಶಾಶ್ವತ ನಿದ್ರೆಗೆ ಜಾರಿದ್ದಾಳೆ. ನಾನು ಅಳಬೇಕು, ಜೋರಾಗಿ ಅಳಬೇಕು, ನನ್ನವ್ವನನ್ನು ತಬ್ಬಿ ಅಳಬೇಕು ಆದರೆ ಈ ಜನರು ಅವರ ಮಧ್ಯೆ ನಾನೇಗೆ ಅಳಲಿ, ಯೋಚನೆಯಲ್ಲೇ ಮುಳುಗಿದ್ದ ನನಗೆ ಮನೆಗೆ ಬಂದದ್ದು ತಿಳಿಯಲೇ ಇಲ್ಲ. ಮನೆಗೆ ಬಂದಾಕ್ಷಣ ಅಕ್ಕ ನನ್ನನ್ನು ತಬ್ಬಿ ಜೋರಾಗಿ ಅಳಲು ಶುರುಮಾಡಿದಳು, ನನ್ನ ಕಣ್ಣಲ್ಲು ನೀರು ಬಂತು ಆದರೆ ಅಷ್ಟರಲ್ಲಿ ನನ್ನ ಯಾವನೋ ಸಂಬಂಧಿಕನೊಬ್ಬ ‘ನೀನೆ ಧೈರ್ಯ ಗೆಟ್ಟರೇ ಹೇಗೆ? ಅಪ್ಪನಿಗೆ ಅಕ್ಕನಿಗೆ ಇನ್ನುಮುಂದೆ ನೀನೆ ಎಲ್ಲಾ, ಎದ್ದು ಮುಂದೆ ಏನಾಗಬೇಕೊ ಅದರ ಕಡೆ ಗಮನ ಕೊಡು’ ಎಂದು ಬಿಟ್ಟ. ನನಗೆ ರಕ್ತ ಕುದಿಯಲಾರಂಭಿಸಿತು, ಕತ್ತಲೆ ಕೋಣೆಗೆ ಹೋಗುವ ಪರಿಸ್ಥಿತಿಯಲ್ಲಿ ನಾನಿರಲಿಲ್ಲ. ಹೀಗೆ ಆ ರಾತ್ರಿ ರೋಷ, ದುಃಖ ಮಿಶ್ರಿತ ಭಾವದಲ್ಲಿ ಕಳೆದೆ. ಬೆಳಗ್ಗೆ ಅಮ್ಮನ ಶವ ಸಂಸ್ಕಾರದ ಕಡೇಗಳಿಗೆವರೆಗು ತಡೆದೆ, ತಡೆದೆ ನನ್ನ ಶಕ್ತಿ ಮೀರಿ ತಡೆದೆ. ಇನ್ನೇನು ಅಮ್ಮನ ದೇಹಕ್ಕೆ ಅಗ್ನಿಸ್ಪರ್ಷ ಮಾಡಬೇಕು ಆಗ ನನ್ನಿಂದ ಆಗಲಿಲ್ಲ, ಯಾರು ಏನೆ ಹೇಳಲಿ, ನನ್ನನ್ನು ಕೈಲಾಗದವ ಅಂದುಕೊಳ್ಳಲಿ, ನನ್ನ ಹೇಡಿ ಅಂದುಕೊಳ್ಳಲಿ ನನಗದರ ಚಿಂತೆ ಆಗಲಿಲ್ಲ, ನನ್ನ ಹೆತ್ತು ಸಾಕಿದ ನನ್ನವ್ವನ ದೇಹ ಮಾತ್ರ ಕಾಣಿಸುತ್ತಿದೆ. ಅತ್ತೆ, ಜೋರಾಗಿ ಕಿರುಚಿ, ಗೋಡೆಗೆ ಗುದ್ದಿ ಗುದ್ದಿ ಅತ್ತೆ, ಸಮಾಧಾನ ಪಡಿಸಲು ಬಂದವರನ್ನ ತಳ್ಳಿ ಅತ್ತೆ, ನನ್ನನ್ನು ಅಳಬೇಡ ಎಂದು ಹೇಳಲು ಬಂದವರನ್ನ ನೂಕಿ ಅತ್ತೆ, ವರ್ಷಾನುಗಟ್ಟಲೆಯಿಂದ ಅಳುವ ಸ್ವಾತಂತ್ರವನ್ನು ಕಳೆದುಕೊಂಡಿದ್ದವನಿಗೆ ಸ್ವಾತಂತ್ರ ಸಿಕ್ಕಿತೆಂದು ಅತ್ತೆ, ನನ್ನ ಭಾವನೆ ನನ್ನ ಇಷ್ಟ ಎಂದು ಅತ್ತೆ, ಅತ್ತು ಅತ್ತು ಸುಸ್ತಾಗಿ ಬಿದ್ದೆ. ಕಡೆಗು ನನ್ನವ್ವ ತನ್ನ ಸಾವಿನಲ್ಲಿ ಭಾವನೆಯನ್ನು ಅಂಜಿಕೆಇಲ್ಲದೇ ವ್ಯಕ್ತಪಡಿಸಲು ಹೇಳಿಕೊಟ್ಟಳು. ನನ್ನ ಜೀವನದ ಅತ್ಯಂತ ದೊಡ್ಡ ಹಿಂಸೆಯಾಗಿ ಕಾಡುತ್ತಿದ್ದ ನನ್ನ ಅಳುವನ್ನು ನನಗೆ ಮರಳಿಸಿದ್ದಳು ಅವ್ವ. ಇನ್ನೆಂದು ನಾನು ಸಾರ್ವಜನಿಕವಾಗಿ ಅಳೋದಕ್ಕೆ ಹೆದರಿಕೆಯಾಗಲಿಲ್ಲ.
ಈ ನನ್ನ ದುರಂತದ ಘಟನೆ ನನಗೆ ಮುಕ್ತವಾಗಿ ಭಾವನೆಯನ್ನು ವ್ಯಕ್ತಪಡಿಸಲು ಕಲಿಸಿತು, ಭಾವನೆಗೆ ಲಿಂಗ ಭೇದವಿಲ್ಲ ಎಂಬುದನ್ನು ಕಲಿಸಿತು, ನಾನು ಏನೆಂಬುದರ ಅರಿವು ನನಗಿದ್ದಲ್ಲೀ ಬರೀ ನನ್ನ ಅಳುವ ಭಾವನೆಯಿಂದ ನನ್ನನ್ನು ಹೇಡಿ, ಕೈಲಾಗದವನೆಂದು ನನ್ನನ್ನು ಜಡ್ಜ್ ಮಾಡುವವರ ಬಗ್ಗೆ ನಾನು ಗಮನ ಹರಿಸುವ ಅವಶ್ಯಕತೆಯಿಲ್ಲ ಎಂಬುದನ್ನು ಕಲೆತೆ. ಎಷ್ಟೇ ಆಗಲಿ ಈ ಜೀವನ ನನ್ನದು, ಭಾವನೆಗಳನ್ನು ಅದುಮಿ ಹಿಂಸೆ ಅನುಭವಿಸುತ್ತಿದ್ದುದು ನಾನೆ ಹೊರೆತು ನನ್ನನ್ನು ಠೀಕಿಸುತ್ತಿದ್ದ ಜನರಲ್ಲ ಅಲ್ಲವೇ..?
ಭಾವನೆಗಳನ್ನು ವ್ಯಕ್ತಪಡಿಸಲು ಅಂಜದಿರಿ. 


Friday, January 4, 2019



 ಏನು ಯೋಚಿಸ್ತಿದ್ದೀರಾ...?
ಏನು ಯೋಚನೆ ಮಾಡ್ತಿದ್ದೀವಿ? ಇದನ್ನ ತಿಳ್ಕೊಳ್ಳೋದು ತುಂಬಾ ಮುಖ್ಯ. ಯಾಕೆ ಅಂತ ತಿಳ್ಕೊಬೇಕಾದರೇ ಈ ಲೇಕನಿ ಓದಿ

ನಾನು ಒಂಬತ್ತನೆ ತರಗತಿಯಲ್ಲಿದ್ದಾಗ ವಿಜ್ಞಾನ ಪರೀಕ್ಷೆಗೆ ತಯಾರಾಗುತ್ತಿದ್ದಾಗ ನನಗೊಂದು ಆಲೋಚನೆ ಬಂತು, ಆ ಆಲೋಚನೆ ಏನೆಂದರೇ, ಅದಾಗಲೇ ಕತ್ತಾಲಾಗಿದೆ ಬೆಳಗ್ಗೆ ಪರೀಕ್ಷೆ ಇದೆ, ಈ ಅಲ್ಪ ಸಮಯದಲ್ಲಿ ನಾನು ಎಲ್ಲ ಓದಿ ಮುಗಿಸಲು ಸಾಧ್ಯವಿದೆಯೇ? ಎಂದು.

ಈ ಯೋಚನೆ ಬಂದಿದ್ದೇ ಬಂದಿದ್ದು, ನನಗೆ ಎದೆ ಹೊಡೆದುಕೊಳ್ಳಲು ಶುರುವಾಯಿತು, ಮುಖ ಬೆವರಲು ಹತ್ತಿತು, ಪುಸ್ತಕ ಕೈಯಿಂದ ಬೀಳುವಷ್ಟರ ಮಟ್ಟಿಗೆ ಕೈ ನಡುಗಲಾರಂಭಿಸಿತು, ಬಾಯಿ ಪದಗಳನ್ನು ಓದುತ್ತಿದೆ ಆದರೆ ತಲೆಗೆ ಏನು ಅರ್ಥವಾಗುತ್ತಿರಲಿಲ್ಲ. ಕಡೆಗೇ ಕಣ್ಣಿಂದ ಹನಿಗಳು ಜಾರಿ ಅಮ್ಮನ ಬಳಿ ಹೋಗಿ, ಅಮ್ಮ ನನಗೇನೋ ಆಗೋಗಿದೆ, ನಾಳೆ ಪರೀಕ್ಷೆ ಬರಿಯಲು ಸಾಧ್ಯವಿಲ್ಲ ಎಂದು ಬಿಟ್ಟೆ.

ಹಾಗೋ ಹೀಗೋ ಅಮ್ಮ ಒತ್ತಾಯ ಮಾಡಿ ನನ್ನನ್ನು ಪರೀಕ್ಷೆಗೆ ಕಳುಹಿಸಿದರು, ನಂತರ ನನಗೆ ಒಳ್ಳೆ ಅಂಕಗಳು ಬಂದವು. ಆದರೆ ಇದಾದ ಮೇಲೆ ಮತ್ತೊಂದು ಆಲೋಚನೆ ಬಂದಿತು ಅದೇನೆಂದರೆ, ಒಂದುವೇಳೆ ಮುಂದಿನ ಪರೀಕ್ಷೆಯಲ್ಲು ನನಗೇ ಹೀಗೆ ಭಯ ಆದರೆ ಏನು ಮಾಡುವುದು ಎಂದು. ಅಷ್ಟೇ ನನಗೆ ವಿಜ್ಞಾನವೆಂದರೇ ಒಂದು ತೆರನಾದ ಹಿಂಸೆ ಬಂದು ಬಿಟ್ಟಿತು. ಓದಲು ಕುಳಿತರೇ ಸಾಕು ಎದೆ ಹೊಡೆದುಕೊಳ್ಳುತಿತ್ತು.

ನಾನು ಪ್ರತಿ ಭಾರಿಯು ಯಾಕಾದರು ಶಾಲೆಗಳನ್ನಿಟ್ಟಿದ್ದಾರೋ, ಯಾಕಾದರು ಈ ಪರೀಕ್ಷೆಗಳು ಬರುತ್ತವೋ ಇವೆಲ್ಲಾ ಇರದಿದ್ದರೇ ನಾನು ಈ ಭಯ, ಹಿಂಸೆ ಇವುಗಳನೆಲ್ಲಾ ಅನುಭವಿಸುತ್ತಲೇ ಇರಲಿಲ್ಲ ಎಂದು ಸಾವಿರ ಭಾರಿ ಅಂದುಕೊಂಡಿದ್ದೇನೆ. ಎಲ್ಲರೂ ಹೇಳಿದಂತೆ ನಾನು ಅವತ್ತಿನದನ್ನು ಅವತ್ತೇ ಅಭ್ಯಾಸಿಸುತಿದ್ದೆ. ಪರೀಕ್ಷೆಗೆ ಒಂದು ತಿಂಗಳು ಮುಂಚೆಯೇ ಎಲ್ಲಾ ಓದಿ ಮುಗಿಸಿರುತ್ತದೆ, ಆದರು ಈ ತಳಮಳ ಕಡಿಮೆಯೇ ಆಗುತ್ತಿರಲಿಲ್ಲ.

ಹಾಗಾದರೇ ನನ್ನ ಒದ್ದಾಟಕ್ಕೆಲ್ಲಾ ಏನು ಕಾರಣ? ವಿಜ್ಞಾನ ವಿಷಯನಾ? ಶಾಲೆ ಪರೀಕ್ಷೆಗಳ? ಸೂಕ್ಷ್ಮವಾಗಿ ಗಮನಿಸಿದರೇ ಮೊದಲು ನನಗೆ ಆತಂಕ ಶುರುವಾಗಿದ್ದೂ, ‘ಬೆಳಗ್ಗೆ ಆಗುವುದರೊಳಗೆ ಎಲ್ಲವನ್ನು ಓದಿ ಮುಗಿಸಲು ಸಾಧ್ಯವೇ?’  ಎಂಬ ಒಂದೇ ಒಂದು ಆಲೋಚನೆಯಿಂದ, ಇದರಿಂದ ‘ಭಯ’ ಎಂಬ ಭಾವನೆ ಮೂಡಿತು, ಆ ಭಯದ ಕಾರಣ ನಾನು ಪರೀಕ್ಷೆಗೆ ಹೋಗಲ್ಲ ಎಂದು ಅಳಲಾರಂಭಿಸಿದೆ. ಹಾಗೆ ಮುಂದೇ ‘ಈ ಪರೀಕ್ಷೆಯಲ್ಲಿ ಆದಂತೆ ಮತ್ತೆಲ್ಲಾ ಪರೀಕ್ಷೆಯಲ್ಲಿ ಆದರೇ ಏನು ಗತಿ’ ಎಂಬ ಒಂದು ಆಲೋಚನೆ ನನ್ನಲ್ಲಿ ಪರೀಕ್ಷೆ ಬಗೆಗೆ ವಿಪರೀತ ಆತಂಕ ಮೂಡಿಸಿತು.

ಈ ಘಟನೆಯನ್ನು ನಾನು ಪ್ರಸ್ತಾಪಿಸುವುದಕ್ಕೆ ಒಂದು ಕಾರಣವಿದೆ. ನಾವು ಪ್ರತಿಭಾರಿಯು ನಮ್ಮ ನಡವಳಿಕೆಗಳಿಗೆ, ನಮ್ಮ ಕಷ್ಟ ಸುಖಗಳಿಗೆ ಬೇರೆಯವರಿಗೆ, ಹೊರ ಜಗತ್ತಿನ ಕಡೆಗೆ ಬೆಟ್ಟುಮಾಡೋದು ಸರ್ವೇಸಾಮಾನ್ಯ. ಆದರೆ ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೇ ನಮ್ಮ ಪ್ರತಿಯೊಂದು ಕಾರ್ಯಗಳ ಹಿಂದೆ ಒಂದಲ್ಲಾ ಒಂದು ಭಾವನೆಯ ಪ್ರೇರೆಪಣೆ ಇರುತ್ತದೆ. ಆ ಭಾವನೆ ಉಗಮದ ಹಿಂದೆ ಒಂದು ಆಲೋಚನೆ ಇರುತ್ತದೆ.
(thoughts) →→      (emotions) →→    (Actions)

ನಮ್ಮ ನಿಯಂತ್ರಣದಲ್ಲಿರದ ಈ ಆಲೋಚನೆಗಳಿಗೆ ನಾವು ಸ್ಪಂದಿಸುವ ರೀತಿಯಲ್ಲೇ ನಮ್ಮ ಖುಷಿ ನೆಮ್ಮದಿ ಅಡಗಿದೆ. ನನಗೆ ಬಾಧಿಸುತ್ತಿದ್ದ ಆಲೋಚನೆ ಬಗ್ಗೆ ಅರಿವಿಲ್ಲದ ನಾನು ಸಮಸ್ಯೆ ಇರುವುದು ಪರೀಕ್ಷೆಯಲ್ಲಿ, ವಿಜ್ಞಾನದಲ್ಲಿ ಎಂದು ಅವನ್ನು ಶಪಿಸಲಾರಂಭಿಸಿದೆ. ಮೇಲಿನ ಉದಾಹರಣೆಯಲ್ಲಿ ನನ್ನ ಆಲೋಚನೆಗೆ ಯಾವ ಹುರುಳಿರಲಿಲ್ಲ, ಆ ಆಲೋಚನೆಯನ್ನು ನಂಬಿ, ಆತ್ಮವಿಶ್ವಾಸ ಕಳೆದುಕೊಂಡೆ. ಹೀಗೆ ನನಗೆ ಓದುವುದೇ ಹಿಂಸೆ ಆಯಿತು. ಮುಂದೇ ಇದರ ಅರಿವಾದಾಗ ನನಗೆ ನಗು ಬಂದಿತು, ಇಷ್ಟೆನಾ ನನ್ನನ್ನು ಬಾಧಿಸುತ್ತಿರುವುದು ಎಂದು ತಿಳಿದ ನಂತರ ಇದು ಆಲೋಚನೆಯಷ್ಟೆ ಇದನ್ನು ನಂಬೋದು ಬೇಡ ನನ್ನನ್ನು ನಾನು ನಂಬುತ್ತೇನೆ ಎಂದು ಯೋಚಿಸ ತೊಡಗಿದೆ. ನಂತರ ಕ್ರಮೇಣ ನನ್ನ ಭಯ ಕಡಿಮೆಯಾಗಿ ನನಗೀಗ ಯಾವ ಪರೀಕ್ಷೆ ಭಯವು ಇಲ್ಲ.

ನಾವು ಭಾವಜೀವಿಗಳು, ಆದರೆ ಎಲ್ಲೋ ಒಂದು ಕಡೆ ಭಾವನೆಗಳು ಅತ್ಯಂತ ನಿರ್ಲಕ್ಷಕ್ಕೊಳಗಾಗಿರೋದು ದುರಂತ. ಆದರೆ ಸತ್ಯ ಏನೆಂದರೇ ಭಾವನೆಗಳಿಲ್ಲದೇ ನಾವೇನು ಮಾಡಲು ಸಾಧ್ಯವಿಲ್ಲ. ಈಗ ಈ ಲೇಖನಿ ಬರೆಯುವುದಕ್ಕೆ ನನಗೇ ನನ್ನ ವಿಷಯದ ಮೇಲೆ ನಂಬಿಕೆ ಇರಬೇಕು, ಆ ನಂಬಿಕೆ ಕೂಡ ಒಂದು ಭಾವನೆ. ಈ ಆಲೋಚನೆಗಳಾಗಲೀ, ಅದರಿಂದ ಉಗಮಿಸುವ ಭಾವನೆಗಳಾಗಲೀ ನಮ್ಮ ನಿಯಂತ್ರಣದಲ್ಲಿರುವುದಿಲ್ಲ. ಆದರೆ ನಮ್ಮಲ್ಲಿ ಮೂಡುತ್ತಿರುವ ಆಲೋಚನೆಗಳ ಬಗೆಗೆ ನವiಗೆ ಪ್ರಜ್ಞಾಪೂರ್ವಕ ಅರಿವಿದ್ದರೇ, ಅದರಿಂದ ಮೂಡುತ್ತಿರುವ ಭಾವನೆಗಳ ಬಗ್ಗೆ ಗಮನವಿದ್ದರೇ, ಆ ಆಲೋಚನೆಗಳಿಗೆ ಯಾವ ರೀತಿ ಸ್ಪಂದಿಸಬಹುದು ಎಂದು ನಾವೆ ನಿರ್ಧರಿಸಬಹುದು. ನಾನು ಮೇಲೆ ನನ್ನ ಸಮಸ್ಯೆ ಬಗೆಹರಿಸಿಕೊಂಡಂತೆ ಎಲ್ಲರೂ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಅದಕ್ಕೆ ನಾವು ನಮಗೆ ಸಮಯ ಕೊಡಬೇಕು ಅಷ್ಟೇ.

ನಮ್ಮಲ್ಲಿ ಎಷ್ಟು ಭಾವನೆಗಳಿವೆ ಎಂಬುದರ ಬಗ್ಗೆ ನಿವiಗೆ ತಿಳಿದಿದೆಯೇ? ಕೆಳಗಿನ ಈ ಚಿತ್ರ ನೋಡಿ. ನಿಮ್ಮಲ್ಲಿ  ಈಗ ಯಾವ ಭಾವನೆ ಇದೆ ಗುರುತಿಸಿ.




ಈ ನನ್ನ ಆಲೋಚನೆ ಬ್ಲಾಗ್‍ನಲ್ಲಿ ಇನ್ನುಮುಂದೆ, ಜನ ಹೆಚ್ಚು ಪ್ರಯಾಣಿಸದ ಈ ದಾರಿಯ ಬಗ್ಗೆ ಹೆಚ್ಚು ಬರೆಯುತ್ತೇನೆ. ಈ ಭಾವನೆಗಳ ಮ್ಯಾಜಿಕ್ ಬಗ್ಗೆ ಮುಂದಿನ ವಾರಗಳಲ್ಲಿ ಮತ್ತಷ್ಟು ಹಂಚಿಕೊಳ್ಳುತ್ತೇನೆ.

ಅಂದ್ಹಾಗೆ ನಿಮಗೀಗ ಯಾವ ಆಲೋಚನೆಕಾಡುತ್ತಿದೆ? ಏನು ಯೋಚನೆ ಮಾಡುತ್ತಿದ್ದೀರಾ?