Sunday, January 20, 2019

ಅನಾಮಿಕಳ ಅಂತರಂಗ




ಇವತ್ತು ನನಗೆ ಬಹಳ ಖುಷಿಯಾಗ್ತಿದೆ. ಒಂದು ಕೆಲಸದ ಇಂಟವ್ರ್ಯೂ ಎದುರಿಸಿದ್ದೇ  ಇವತ್ತಿನ ನನ್ನ ಖುಷಿಗೆ ಕಾರಣ ಅಂತಂದ್ರೆ ನಂಬುತ್ತೀರಾ? ಹೌದು ದೂರದಿಂದ ನೋಡಿದವರಿಗೆ ಒಳ್ಳೆ ಅಂಕ ಪಡೆಯುವ ನನ್ನಂತಹ ವಿದ್ಯಾರ್ಥಿ ಒಂದು ಕೆಲಸ ಗಿಟ್ಟಿಸಿಕೊಳ್ಳೋದು ಖಂಡಿತ ದೊಡ್ಡವಿಷಯವಲ್ಲ. ಆದರೆ ಹತ್ತಿರದಿಂದ ಬಹಳ ಹತ್ತಿರದಿಂದ ನನ್ನ ಬಲ್ಲವರಿಗೆ ಅಂತಂದ್ರೆ ನನಗೆ ಮಾತ್ರ ಗೊತ್ತಿದೆ ಈ ಹಂತಕ್ಕೆ ಬರಲು ನಾನು ಎಂತಹ ದೊಡ್ಡ ಹೋರಾಟ ಮಾಡಬೇಕಾಯಿತೆಂದು. ಆ ಹೋರಾಟ ಸಮಾಜದ ವಿರುದ್ಧವೊ, ಕುಟುಂಬದ ವಿರುದ್ಧವೋ ಅಥವಾ ಮತ್ಯಾರದ್ದೋ ವಿರುದ್ಧವೋ ಅಲ್ಲ; ಈ ಹೋರಾಟ ನನ್ನ ವಿರುದ್ಧವೇ. 
ನಾನು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವಳು. ನನ್ನ ಅಪ್ಪ ಬ್ಯಾಂಕ್ ಉದ್ಯಮಿ, ಅಮ್ಮ ಗೃಹಿಣಿ. ನನಗೆ ಯಾವುದಕ್ಕೂ ಕೊರತೆ ಬಾರದ ಹಾಗೆ ನನ್ನ ಪೋಷಕರು ನನ್ನನ್ನು ಸಲಹುತ್ತಿದ್ದರು. ಎಲ್ಲಾ ಮಕ್ಕಳಂತೆ ಬೆಳೆಯುತಿದ್ದ ನಾನು, ಆಟ ಪಾಠಗಳಲ್ಲಿ ಸದಾ ಮುಂದು. ಆಗ ನಾನು 7ನೇ ತರಗತಿಯಲ್ಲಿದ್ದೆ, ಆಗಿನ್ನು ಪ್ರೌಢಾವಸ್ತೆಗೆ ಕಾಲಿಟ್ಟಿದೆ.್ದ ದೇಹದಲ್ಲಿ ವಿವಿಧ ಬದಲಾವಣೆಗಳು ಹಾಗೆಯೇ ಮನಸ್ಸಿನಲ್ಲಿಯೂ ನಾನಾ ಕುತೂಹಲಗಳು. ನಮ್ಮ ಮನೆಯ ಎದುರು ಮನೆಗೆ ನವ ವಿವಾಹಿತ ಜೋಡಿ ಬಾಡಿಗೆಗೆ ಬಂದರು. ನನ್ನ ಕೋಣೆಯ ಎದುರಿಗೆ ಅವರ ಕೋಣೆ ಇತ್ತು. ಅವರೆಂದಿಗು ಕಿಟಕಿ ಮುಚ್ಚದ ಕಾರಣ, ನನಗೆ ಅವರ ಕೋಣೆಯಲ್ಲಿನ ಸರಸ ಸಲ್ಲಾಪಗಳು ಕಾಣುತಿತ್ತು. ಅದಾಗಲೇ ಸಾಕಷ್ಟು ಕುತೂಹಲಗಳಲ್ಲಿ ಮಿಂದಿದ್ದ ನನ್ನ ಮನಸ್ಸಿಗೆ ಇದು ಮತ್ತಷ್ಟು ಕೋಲಾಹಲ ಎಬ್ಬಿಸಿತು. ಈ ಅನುಭವ ನನಗಾದಲ್ಲಿ ಹೇಗಿರುತ್ತದೆ ಎಂಬ ಆಲೋಚನೆಗಳೊಡನೆ ಕಲ್ಪನೆಗಳು ವಿಹರಿಸ ತೊಡಗಿದವು. ಸಂಪ್ರದಾಯಸ್ತ ಕುಟುಂಬದವಳಾದ ನಾನು ಅಮ್ಮನ ಹತ್ತಿರ ನನ್ನ ಕುತೂಹಲಗಳನ್ನೂ ನನ್ನ ಆಲೋಚನೆಗಳನ್ನು ಹಂಚಿಕೊಳ್ಳುವ ಧೈರ್ಯಮಾಡಲಿಲ್ಲ.
ಹೀಗಿರುವಾಗಲೆ ಎದುರು ಮನೆಯವರು ನಮ್ಮ ಮನೆಗೆ ಚಿರಪರಿಚಿತರಾದರು. ಹಾಗೆ ಎದುರು ಮನೆಯವ ನನ್ನೊಟ್ಟಿಗೆ ಬಹಳ ಸಲಿಗೆಯಿಂದ ನಡೆದುಕೊಳ್ಳುತಿದ್ದ. ಅದು ನನಗು ಹಿಡಿಸಿತ್ತು. ಆ ದಿನ ನಮ್ಮ ಮನೆಯಲ್ಲಿ ಅಪ್ಪ ಅಮ್ಮ ಯಾರು ಇರಲಿಲ್ಲ. ಎದುರು ಮನೆಯವ ಅಪ್ಪನೊಂದಿಗೆ ಏನೋ ಮಾತನಾಡಬೇಕೆಂದು ಮನೆಗೆ ಬಂದ. ಅಪ್ಪ ಮನೆಯಲ್ಲಿ ಇಲ್ಲವೆಂದರೂ ಒಳಗೆ ಬಂದ. ನನಗೆ ಏನು ಹೇಳಬೇಕು ತಿಳಿಯದಾದೆ. ಬಂದವನೇ ನಮ್ಮ ಮನೆಯ ಬಾಗಿಲು ಹಾಕಿ ನನ್ನನ್ನು ಅವನೆಡೆಗೆ ಬರಮಾಡಿಕೊಂಡ. ಒಂದೆಡೆ ಅವನನ್ನು ತಡೆಯಬೇಕೆಂದೆನಿಸಿದರು ಅದ್ಯಾಕೊ ಗೊತ್ತಿಲ್ಲ ನಾನು ಅವನನ್ನು ತಡೆಯಲಿಲ್ಲ. ಈ ಘಟನೆಯಾಗಿ ಸ್ವಲ್ಪ ದಿನದಲ್ಲೇ ಅವನು ಮನೆ ಕಾಲಿಮಾಡಿಕೊಂಡು ಹೊರಟು ಹೋದ. ಆದರೆ ನನ್ನ ಮನಸಿನಲ್ಲಿ ಎಂದೂ ಮಾಂiÀiದ ಶಾಶ್ವತಗಾಯವಾಗಿ ಉಳಿದುಬಿಟ್ಟ. ನನ್ನ ನಿಷ್ಕಲ್ಮಶ ಮನಸ್ಸಿನಲ್ಲಿ ದೊಡ್ಡ ಅಲೆಯೊಂದನ್ನು ಎಬ್ಬಿಸಿ ಬಿಟ್ಟ. ನನಗೆ ನನ್ನ ದೇಹದ ಮೇಲೆ ಅಸಹ್ಯ ಶುರುವಾಯಿತು. ಅಪ್ಪ ಅಮ್ಮನಿಗೆ ಮೋಸ ಮಾಡಿದ ಅಪರಾಧಿ ಪ್ರಜ್ಞೆ ನನ್ನನ್ನು ಕಾಡಲಾರಂಭಿಸಿತು. ಆದರೆ ಎಲ್ಲರ ಮುಂದೆ ನಗು ಮೊಗದಿಂದ ಇರುತಿದ್ದೆ. ಆಟ ಪಾಠಗಳಲ್ಲಿನ ನನ್ನ ಮೊದಲಿನ ಆಸಕ್ತಿ ಕ್ರಮೇಣವಾಗಿ ಕ್ಷೀಣಿಸುತ್ತ ಬಂದಿತು. ಕಾಲೇಜು ಮೆಟ್ಟಿಲೇರುವಷ್ಟರಲ್ಲಿ ಕೀಳರಿಮೆ ಅಪನಂಬಿಕೆಗಳು ನನ್ನ ಮನೆಮಾಡಿತ್ತು. ನನ್ನ ಬಗ್ಗೆಯೇ ಸ್ಪಷ್ಟತೆ ಇಲ್ಲದಾಗ ಸ್ನೇಹಿತರ ಸಹವಾಸ ನನ್ನ ಮನಸ್ಸಿಗೆ ಮುದ ನೀಡಿತ್ತು. ನನ್ನ ಜಗತ್ತೆಲ್ಲಾ ಅವರೇ ಆವರಿಸಿಕೊಂಡಿದ್ದರು. ಮನೆಗೆ ಹೋದರೆ ಹಳೇ ನೆನಪುಗಳು ಪಾಪಪ್ರಜೆÐಯಾಗಿ ಕಾಡುತಿದ್ದವು. ಅವುಗಳನ್ನು ಹತ್ತಿಕ್ಕಲು ಸ್ನೇಹಿತರೊಂದಿಗೆ ಹೆಚ್ಚೆಚ್ಚು ಸಮಯ ಕಳೆಯಲಾರಂಭಿಸಿದೆ. ನನ್ನ ಸ್ನೇಹಿತರು ಹೇಳಿದ ಹಾಗೆ ಕೇಳದಲ್ಲಿ ಅವರನ್ನು ಕಳೆದುಕೊಂಡು ಒಂಟಿಯಾಗಿಬಿಡುವ ಭಯದಿಂದ ಅವರು ಏನು ಹೇಳಿದರು ಮಾಡಲಾರಂಭಿಸಿದೆ. ಸ್ನೇಹದ  ಹೆಸರಲ್ಲಿ ನನ್ನನ್ನು ಅಡ್ಡದಾರಿಗೆ ಎಳೆಯುತ್ತಿದ್ದಾರೆ ಎಂಬುದರ ಅರಿವಿದ್ದರೂ ನಾನು ಸುಮ್ಮನಿರುತ್ತಿದ್ದೆ. ಹೀಗೆ ಪಾಪಪ್ರಜ್ಞೆ, ಒಂಟಿತನಕ್ಕೆ ಅಂಜಿ ನನ್ನ ಮೇಲಿನ ಪೂರ್ತಿ ನಿಯಂತ್ರಣ ಕಳೆದುಕೊಂಡು ನಮ್ಮ ಮನೆಯವರೆಲ್ಲರ ಮೇಲೆ ಅಸಹನೆಯಿಂದ ವರ್ತಿಸುತಿದ್ದೆ. ಅವರು ಏನೆಂದರೂ ಕೋಪಗೊಳ್ಳುತಿದ್ದೆ. ಹೀಗಿರುವಾಗಲೆ ಇಂಜಿನಿಯರಿಂಗ್ ಕೂಡ ಮುಗಿಸಿಕೊಂಡೆ. ಆದರೆ ಕೆಲಸ ಮಾಡಲು ಧೈರ್ಯ ಸಾಲಲಿಲ್ಲ. ಸುಮ್ಮನೆ ಮನೆಯಲ್ಲೇ ಕುಳಿತು ಬಿಟ್ಟೆ. ಸ್ನೇಹಿತರೊಂದಿಗೆ ಇಷ್ಟವಿಲ್ಲದ ದಾರಿಗೆ ಹೋಗಲು ಮನಸ್ಸಾಗಲಿಲ್ಲಾ. ಮೊಬೈಲ್ ಆಫ್ ಮಾಡಿ ಹೊರಿಗಿನವರ ನೆರಳೆ ಬೀರದಂತೆ ಉಳಿದು ಬಿಟ್ಟೆ.
ಸದಾ ಲವಲವಿಕೆಯಿಂದ ಇದ್ದ ಮಗಳು ಮನೆಯಲ್ಲೇ ಉಳಿದು ಬಿಟ್ಟಾಗ ಸಹಜವಾಗಿಯೆ ನನ್ನ ಪೋಷಕರಿಗೆ ಆತಂಕ ಶುರುವಾಯಿತು. ನನ್ನ ಸಮಸ್ಯೆಗೆ ಅವರು ಕಂಡುಕೊಂಡ ಉತ್ತರ ನನ್ನ ಮದುವೆ. ನನಗೊಂದು ಮದುವೆ ಮಾಡಿಬಿಟ್ಟರೆ ಎಲ್ಲಾ ಸರಿ ಹೋಗಿಬಿಡುತ್ತದೆ ಎಂದು ಅವರು ಬಲವಾಗಿ ನಂಬಿದ್ದರು. ಅಂತೆಯೆ ನನಗೆ ಸೂಕ್ತವಾದ ವರಾನ್ವೇಷಣೆಗೆ ಸಜ್ಜಾದರು. ಈ ವಿಷ್ಯ ನನ್ನ ಗಮನಕ್ಕೆ ಬಂದೊಡನೆಯೇ ನನ್ನ ಮೈ ಕಂಪಿಸಿತು. ಭಯದಿಂದ ಬೆವೆತು ಹೋದೆ, ಭಯ ಹೋಗಿ ವಿಪರೀತ ಸಿಟ್ಟು ಬಂತು ಮನೆಯ ಸಾಮನ್ನೆಲ್ಲ ಒಡೆದು ಹಾಕಿ ರಂಪಾಟ ಮಾಡಿಬಿಟ್ಟೆ. ಎದುರು ಮನೆಯವನ ನಡವಳಿಕೆ, ನನ್ನ ಗೆಳೆತನದ ದುರುಪಯೋಗ ಪಡಿಸಿಕೊಂಡ ನನ್ನ ಗೆಳೆಯರನ್ನು ಕಂಡ ನಾನು, ಗಂಡಸರ ನೆರಳನ್ನು ಕಂಡರೂ ದ್ವೇಷಿಸುತಿದ್ದೆ. ಇದು ಸಾಲದಕ್ಕೆ ನನ್ನ ದೇಹದ ಮೇಲಿದ್ದ ಅಸಹ್ಯ, ಮುಂದೆ ಬರುವ ಗಂಡನೆದುರು ಕೀಳಾಗಿ ಬಿಡುವ ಭಯದಿಂದ ನನಗೆ ಮದುವೆಯ ಮೇಲೆ ನಂಬಿಕೆ ಇರಲಿಲ್ಲಾ.
ಈ ಘಟನೆಯ ನಂತರ ಮತ್ತಷ್ಟು ಕುಗ್ಗಿಹೋದೆ. ಅಲ್ಲಿಂದ ಅಜ್ಜಿ ಮನೆಗೆ ಹೊರಟು ಹೋದೆ. ದಿನೇ ದಿನೇ ಹೆಚ್ಚುತ್ತಿರುವ ನನ್ನ ಆಕ್ರೋಷವನ್ನು ಕಂಡ ಅಮ್ಮ, ನನ್ನಲ್ಲಿ ಏನೋ ಅಸಹಜವಾಗಿದೆ ಎಂದು ಗುರುತಿಸಿ ನನ್ನನ್ನು ಒಬ್ಬ ಆಪ್ತಸಮಾಲೋಚನೆತಜ್ಞರ ಬಳಿ ಕರೆದುಕೊಂಡು ಹೋದರು. ಇಷ್ಟರಲ್ಲಾಗಲೆ ನನ್ನ ಮನಸ್ಸು ನಾನು ಬದಲಾಗಬೇಕು ಆದರೆ ಹೇಗೆ ಎಂಬ ಬಗೆ ಹುಡುಕುತಿತ್ತು. ನಂತರ ಆಪ್ತ ಸಮಾಲೋಚನೆಗಾರರಿಗೆ ನನ್ನ ವಿಷಯಗಳನೆಲ್ಲಾ ಹಂಚಿಕೊಂಡೆ. ಮನಸ್ಸು ನಿರಾಳವಾಯ್ತು. ನಿಧಾನವಾಗಿ ನಾನು ನನ್ನ ಪಾಪ ಪ್ರಜ್ಞೆಯಿಂದ ಹೊರ ಬರಲಾರಂಭಿಸಿದೆ. ನಡೆದು ಹೋದ ಘಟನೆಗೆ ಚಿಂತಿಸಿ ಫಲವಿಲ್ಲ ಮುಂದೆ ಜೀವನದಲ್ಲಿ ಎಡವದಂತೆ ಎಚ್ಚರ ವಹಿಸುವೆ ಎಂದು ನಿರ್ಧರಿಸಿದೆ. ಇದರಿಂದ ನಿಧಾನವಾಗಿ ನಾನು ನನ್ನನ್ನು ಪ್ರೀತಿಸತೊಡಗಿದೆ.
 ಇವತ್ತಿಗೆ ನನ್ನ ದೇಹದ ಮೇಲೆ ಯಾವುದೆ ರೀತಿಯ ಅಸಹ್ಯ ನನಗಿಲ್ಲ. ಯಾರೆ ನನ್ನ ಸ್ನೇಹಿತರು ಕರೆ ಮಾಡಿದರೂ, ನಾನು ಯಾವುದೆ ಅಳುಕಿಲ್ಲದೆ ನನ್ನ ಅನಿಸಿಕೆಗಳನ್ನು ನೇರವಾಗಿ ಉತ್ತರಿಸುವುದನ್ನು ಕಲೆತೆ. ಮತ್ತೆ ನನ್ನ ಜೀವನದಲ್ಲಿ ಏನಾದರು ಸಾಧಿಸಬೇಕೆಂಬ ಆಸೆ ಮೊಳಕೆಯೊಡೆಯಲಾರಂಭಿಸಿತು. ಈ ಹಂತದಲ್ಲಿ ನನ್ನ ಪೋಷಕರು ನನಗೆ ಯಾವುದೇ ರೀತಿಯ ಒತ್ತಡ ಬಲವಂತಗಳನ್ನು ಹೇರದೆ, ನಾನು ಬದಲಾಗುವುದಕ್ಕೆ ಸಮಯ ಕೊಟ್ಟರು. ಆಚೆ ಸಂಬಂಧಿಕರು, ಸ್ನೇಹಿತರು ನನ್ನ ಮದುವೆಯ ವಿಷ್ಯ ಪ್ರಸ್ತಾಪಿಸಿದಾಗಲೆಲ್ಲಾ ‘ಆಕೆ ಮೊದಲು ತನ್ನ ಕಾಲ ಮೇಲೆ ನಿಂತುಕೊಳ್ಳಲಿ ನಂತರ ಮದುವೆ ಮಾಡೋದು ಇದ್ದೇ ಇದೆ’ ಎಂದು ಉತ್ತರಿಸುತ್ತಿದ್ದರು. ಈ ವಾತಾವರಣದಿಂದ ನನ್ನ ಮನಸ್ಸಿಗೆ ಹಗುರವಾಯ್ತು. ಅದಾಗಲೇ ನನ್ನ ಜೊತೆ ಓದಿದವರೆಲ್ಲಾ ಕೆಲಸ ಮಾಡಿ ಮುಂದುವರೆದಿದ್ದರೇ, ನಾನು ಒಂದು ವರುಷ ಹಾಗೆ ಕಾಲಿ ಇದ್ದೇ. ಎಷ್ಟೋ ಜನ ನನ್ನನ್ನು ನೋಡಿ ನಕ್ಕದ್ದು ಇದೆ. ಕೈಲಾಗದವಳೆಂದು ಹೀಯಾಳಿಸಿದ್ದೂ ಇದೆ. ಆದರೆ ಅದು ನನಗೆ ಈ ಬಾರಿ ಧೃತಿಗೆಡುವ ಹಾಗೆ ಮಾಡಲಿಲ್ಲ, ಬದಲಿಗೆ ನಿಧಾನವಾಗಿಯಾದರೂ ನನ್ನ ಜೀವನದಲ್ಲಿ ಏನಾದರು ಸಾಧಿಸಬೇಕೆಂಬ ನನ್ನ ಬಯಕೆಗೆ ಮತ್ತಷ್ಟು ಪುಷ್ಠಿ ನೀಡಿತು.
ಮಾನಸಿಕ ನರಕ ಯಾತನೆ ಅನುಭವಿಸಿದ್ದ ನನಗೆ, ಮನಸ್ಸನ್ನು ಮೊದಲು ಹತೋಟಿಗೆ ತೆಗೆದುಕೊಳ್ಳುವುದೇ ನಿಜವಾದ ಸಾಧನೆಯಾಗಿದೆ. ನಮ್ಮ ಮನಸ್ಸು ನಮಗೆ ಬೆಂಬಲಿಸಿದರೆ ಎಲ್ಲವು ಸಾಧಿಸಬಹುದೆಂಬ ಅರಿವು ನನಗಾಗಿದೆ. ನಾನು ದಿನೇ ದಿನೇ ನನ್ನ ಬಗ್ಗೆ ಹೆಚ್ಚು ಅರಿಯುತ್ತಿದ್ದೇನೆ. ಇವತ್ತಿಗೆ ಕೆಲಸಕ್ಕೆ ಸಂದರ್ಶನ ಕೊಡುವಷ್ಟು ಸುಧಾರಿಸಿದ್ದೇನೆ. ಈ ಅನುಭವದಲ್ಲಿ ನಾನು ಯಾರನ್ನು ಜಡ್ಜ್ ಮಾಡಬಾರದೆಂದು ಅರಿತಿದ್ದೇನೆ. ನಮ್ಮನ್ನು ನಾವು ಪ್ರೀತಿಸಬೇಕೆಂದು ಕಲಿತಿದ್ದೇನೆ. ಆದ್ದರಿಂದಲೇ ನನ್ನ ಘಟನೆಗಳಿಂದ ಜನ ನನ್ನ ಬಗ್ಗೆ ಏನಂದುಕೊಂಡುಬಿಡುತ್ತಾರೋ ಎಂಬ ಯಾವುದೇ ಅಳುಕಿಲ್ಲದೇ ನನ್ನ ಜೀವನದ ಅನುಭವವನ್ನು ಹಂಚಿಕೊಂಡಿದ್ದೇನೆ.



No comments:

Post a Comment