Thursday, January 10, 2019




   
ಅನಾಮಿಕನ ಅಂತರಂಗ


ಮಗು ಹುಟ್ಟಿದ ತಕ್ಷಣ ಅತ್ತರೆ ಎಲ್ಲರು ಸಂಭ್ರಮಿಸುತ್ತಾರೆ. ಅದೇ ಅಳಲಿಲ್ಲ ಎಂದರೇ ಎಲ್ಲರಿಗು ದಿಗಿಲಾಗುತ್ತದೆ. ಒಟ್ಟಾರೆ ಮಗು ಗಂಡಾಗಲಿ, ಹೆಣ್ಣಾಗಲಿ ಅಳುವುದು ಪ್ರಕೃತಿ ಧರ್ಮ. ಅದು ಮಗುವಿನ ಸಂವಹನದ ವಿಧ. ನಮ್ಮಲ್ಲಿ ಹೆಣ್ಣುಮಕ್ಕಳು ಅತ್ತರೆ ಎಲ್ಲರು ಕಣ್ಣೊರೆಸಲು ಮುಂದಾಗುತ್ತೇವೆ. ಅದೇ ಒಬ್ಬ ಹುಡುಗ ಅತ್ತರೇ..? ಹೌದು ನಾನೊಬ್ಬ ಹುಡುಗ. ನಾನು ಹುಡುಗ ಆಗಿದ್ದೇ ಎಷ್ಟೋ ಬಾರಿ ನನಗೆ ಶಾಪದಂತೆ ತೋರಿದೆ. ನಾನು ಸೂಕ್ಷ್ಮ ಜೀವಿ, ಎಲ್ಲಾ ರೀತಿಯ ಭಾವನೆಗಳನ್ನು ವ್ಯಕ್ತಪಡಿಸುವುದು ನನ್ನ ಸ್ವಭಾವ. ಆದರೆ ಅಳುವುದಕ್ಕೆ ನಾನು ಪಡುತ್ತಿದ್ದ ಕಷ್ಟ ಅಷ್ಟಿಷ್ಟಲ್ಲ, ನನ್ನ ಭಾವನೆಯನ್ನು ವ್ಯಕ್ತಪಡಿಸಲಾಗದೆ ಅನುಭವಿಸಿದ ಆ ಮೂಕ ವೇದನೆಯನ್ನು ನಾನು ಹಂಚಿಕೊಂಡಿದ್ದೇನೆ.
ನನಗಾಗ 4 ವರ್ಷವಿರಬೇಕು ನಾನು ನನ್ನ ಅಕ್ಕನ ಜೊತೆ ಆಟವಾಡುವಾಗ ರೋಡ್‍ನಲ್ಲಿ ಬಿದ್ದುಬಿಟ್ಟೆ. ನನ್ನ ಮಂಡಿಯಲ್ಲಿ ಗಾಯವಾಗಿ ರಕ್ತಬಂದಿತು. ನನಗೋ ವಿಪರೀತ ಗಾಬರಿ, ನನಗೇನೊ ಆಗೋಗಿದೆ ಎಂದುಕೊಂಡು ಜೋರಾಗಿ ಅಳಲು ಶುರುಮಾಡಿಬಿಟ್ಟೆ. ನನ್ನ ಅಳಲನ್ನು ಕೇಳಿದ ನನ್ನ ತಂದೆ ಗಾಬರಿಯಿಂದ ಓಡಿ ಬಂದರು. ಬಂದವರೇ ಏನಾಯ್ತು ಎಂದು ವಿಚಾರಿಸಿದರು ನಾನು ನನ್ನ ಗಾಯವನ್ನು ತೋರಿಸಿದೆ. ಅವರು ಸಿಟ್ಟಲ್ಲೀ ಇಷ್ಟು ಚಿಕ್ಕ ಗಾಯಕ್ಕೆ ಒಳ್ಳೆ ಹುಡುಗಿ ತರಹ ಅಳೋz?À ಎಂದು ರೇಗಿಬಿಟ್ಟರು. ಆದರೆ ನನಗೆ ಹುಡುಗರು ಹೇಗೆ ಅಳಬೇಕು ಎಂದು ಹೇಳಿಕೊಡಲಿಲ್ಲ. ಮನೆಯಲ್ಲಿ ಅಕ್ಕ ತನಗೇನೆ ಕೆಲಸವಾಗಬೇಕಿದ್ದರು ಬಳಸುತ್ತಿದ್ದ ಏಕೈಕ ಬ್ರಹ್ಮಾಸ್ತ್ರ ಅದು ತನ್ನ ಅಳು. ಆದರೆ ನಾನು ಯಾವುದೇ ವಿಚಾರಕ್ಕೆ ಅತ್ತರು ಬೈಗುಳ ತಪ್ಪಿದಲ್ಲ. ‘ಹುಡುಗ ಆಗಿ ಅಳ್ತಿಯಲ್ಲಾ ಚೀ’ ಎಂಬ ಮಾತುಗಳು ಸರ್ವೆಸಾಮಾನ್ಯವಾಗಿದ್ದವು. ಹೀಗೆ ಬರುಬರುತ್ತಾ ನಾನು ಎಲ್ಲರ ಮಾತಿಗೆ ಅಂಜಿ ಎಲ್ಲರ ಮುಂದೆ ಅಳುವುದನ್ನೆ ನಿಲ್ಲಿಸಿಬಿಟ್ಟೆ. ಹುಡುಗ ಆದವನು ಎಲ್ಲಾ ಪರಿಸ್ಥಿತಿಗಳನ್ನು ಮನಗುಂದದೇ ಎದುರಿಸುತ್ತಾನೆ ಹೊರೆತು, ಹೆದರಿ ಅಳುತ್ತಾ ಕೂರುವುದಿಲ್ಲಾ ಎಂದು ಅಪ್ಪಾ ಯಾವಾಗಲು ಬೋದಿಸುತ್ತಿದ್ದರು. ನನ್ನ ಮನದಲ್ಲಿ ಅಳುವ ಹಕ್ಕು ಹೆಂಗಸರದ್ದೇ ಹೊರೆತು ಗಂಡಸರದಲ್ಲಾ ಎಂದು ಅಚ್ಚಾಗಿ ಉಳಿದುಬಿಟ್ಟಿತು. ಒಂದು ವೇಳೆ ನಾನು ಅತ್ತರೆ ನನ್ನನ್ನು ಹೆದರು ಪುಕ್ಕಲ, ಕೈಲಾಗದವನೆಂದು ಅಳೆದುಬಿಡುತ್ತಾರೆ ಎಂಬ ಅಳುಕು ಶುರುವಾಗಿತ್ತು. ನನ್ನ ಸಾಮಥ್ರ್ಯಕ್ಕೂ ಅಳುವಿಗು ಎತ್ತಣ ಸಂಬಂಧ ಎಂಬ ಪ್ರಶ್ನೆಗಳು ಬಂದರೂ ನಾನು ಎಂದಿಗು ಉತ್ತರ ಹುಡುಕುವ ಗೋಜಿಗೆ ಹೋಗಲಿಲ್ಲ.
ಆದರೆ ನನ್ನ ಗುಣ ಬದಲಾಯಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಹಾಗಂತ ಎಲ್ಲರ ಮುಂದೆ ಅಳುವ ಧೈರ್ಯವು ನನಗಿರಲಿಲ್ಲಾ. ನಾನು ಅದಕ್ಕಾಗಿ ಕಂಡುಕೊಂಡ ಮಾರ್ಗೊಪಾಯ ಮಾತ್ರ ಕಠಿಣವಾದದ್ದು. ಒಂದು ವೇಳೆ ಯಾವುದಾದರು ಘಟನೆಯಿಂದ ನನಗೆ ಅಳು ಬಂದರೇ ನಾನು ತಕ್ಷಣವೇ ಯಾರು ಇಲ್ಲದ ಸ್ಥಳವನ್ನು ಹುಡುಕುತ್ತಿದ್ದೆ. ಅದರಲ್ಲೂ ಕತ್ತಲಿರಬೇಕಿತ್ತು. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲುಕುಡಿಯುವ ಹಾಗೆ, ನಾನು ಯಾರು ಇಲ್ಲದ ಕತ್ತಲ ಕೋಣೆಯನ್ನು ಹುಡುಕಿ, ಕಣ್ಣುಮುಚ್ಚಿಕೊಂಡು ಮನಸ್ಸೋ ಇಚ್ಚೆ ಅತ್ತು ಮನಸ್ಸು ಹಗುರ ಮಾಡಿಕೊಂಡು ಬರುತಿದ್ದೆ. ಆದರೆ ಎಲ್ಲಾ ಸಂದರ್ಭದಲ್ಲೂ ಯಾರು ಇಲ್ಲದ ಕೋಣೆ ಸಿಗುತ್ತಿರಲಿಲ್ಲ, ಅಂತಹ ಪರಿಸ್ಥಿತಿಗಳಲ್ಲಿ ನನ್ನ ಸಂಕಟ ಹೇಳತೀರದು. ಎಷ್ಟೋ ಸಂದರ್ಭದಲ್ಲಿ ನನಗೆ ನಾನೆ ಕಚ್ಚಿಕೊಂಡು, ಚುಚ್ಚಿಕೊಂಡಿ ಇನ್ಯಾವುದೋ ಬಗೆಯಲ್ಲಿ ನನ್ನ ದೇಹಕ್ಕೆ ಹಿಂಸಿಸಿಕೊಂಡು ಅಳುವನ್ನು ಬಿಗಿಹಿಡಿದದ್ದು ಇದೆ. ನಂತರ ಒಂದು ಕೋಣೆ ಸಿಗುವವರೆಗು ನಾನು ಪಡುತ್ತಿದ್ದ ಹಿಂಸೆ ಮಾತ್ರ ಆ ದೇವರಿಗೆ ಪ್ರೀತಿ. ಮುಂದೆ ನನ್ನ ಈ ಅಳುವ ವಿಧ ನನಗೇ ಹವ್ಯಾಸವಾಗಿ ಬಿಟ್ಟಿತ್ತು. ನನಗೇನಾದರು ಅಳು ಬಂದರೇ ಒಂದು ಕತ್ತಲ ಕೋಣೆಯಲ್ಲಿ ಅಳುವವರೆಗು ಬೇರೆ ಯಾವ ವಿಷಯದಲ್ಲೂ ಗಮನಹರಿಸಲಾಗದಷ್ಟರ ಮಟ್ಟಿಗೆ ಹೋಗಿತ್ತು. ಅಳುಬಂದಾಗ ಅತ್ತುಬಿಟ್ಟರೇ ನನಗೆ ಅಷ್ಟು ಹಿಂಸೆ ಆಗುತ್ತಿರಲಿಲ್ಲ. ಆದರೆ ಅಳುವುದಕ್ಕೆ ನನಗೆ ಭಯ. ಹೊರಗಿನವರಿಗೆ ನಾನೊಬ್ಬ ಬಹಳ ಸುಖಿ, ಚೂಟಿ ಎಲ್ಲದರಲ್ಲೂ ಮುಂದು ಆದರೆ ನನಗೆ ಈ ಒಂದು ಹಿಂಸೆ ನನ್ನ ನೆಮ್ಮದಿಯನ್ನು ಕಸಿದಿತ್ತು.
ಎರಡು ವರ್ಷದ ಹಿಂದೆ ನಾನು ನನ್ನ ಊರಿಂದ ಪದವಿ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದಿದ್ದೆ, ಆಗ ಗಣೇಶ ಹಬ್ಬದ ಸಮಯ ನಾನು ನನ್ನ ಸಹಪಾಠಿಗಳೊಡನೇ ಸೇರಿ ಗಣಪತಿಯನ್ನು ಕೂಡಿಸಿ ವಿಜೃಂಬಣೆಯಿಂದ ಹಬ್ಬ ಆಚರಿಸಿದ್ದೆ. ಸಂಜೆ ಗಣೇಶನನ್ನು ವಿಸರ್ಜಿಸುವ ಸಮಯ, ಎಲ್ಲರು ತಯಾರಾಗುತ್ತಿದ್ದರು, ಆಗ ನನಗೆ ಒಂದು ಕರೆಬಂತು. ಫೋನಲ್ಲಿ ಮಾತಾಡುತಿದ್ದಂತೆ ಕಣ್ಣಲ್ಲಿ ನೀರು ತುಂಬಿಕೊಂಡಿತು ಆದರೆ ಕಣ್ಣೀರು ಕಣ್ಣಿಂದ ಹರಿಯುವ ಧೈರ್ಯ ಮಾಡಲಿಲ್ಲ. ಸುತ್ತ ನನ್ನಸ್ನೇಹಿತರಿದ್ದಾರೆ ನನಗೆ ತಡಿಯಲಾಗದಷ್ಟು ಅಳು ಬರುತ್ತಿದೆ, ಆದರೆ ನನಗೆ ಎಲ್ಲರ ಮುಂದೆ ಅಳೋದಕ್ಕೆ ಆಗುತ್ತಿಲ್ಲ. ಹುಡುಕಿದೆ, ಹುಡುಕಿದೆ ಒಂದು ಕತ್ತಲೆ ಕೋಣೆಗಾಗಿ ಅಲೆದು ಅಲೆದು ಸಾಕಾಯ್ತೆ ಹೊರೆತು ಒಂದು ಕೋಣೆ ಸಿಗಲಿಲ್ಲ. ಕಡೆಗೆ ನಾನು ಗಣೇಶನ ವಿಸರ್ಜನಕ್ಕೆ ಹಾಡಿ ಕುಣಿದಾಡಲು ತಂದಿಟ್ಟಿದ್ದ ಸೌಂಡ್ ಬಾಕ್ಸ್ ನಲ್ಲಿ ವಾಲ್ಯೂಮ್ ಜಾಸ್ತಿ ಮಾಡಿದೆ, ಎಲ್ಲಾ ಸ್ನೇಹಿತರನ್ನು ಒಗ್ಗೂಡಿಸಿ ನನ್ನ ಬಾಯಿಗೆ ಒಂದು ಕರ್ಚಿಫ್ ತುರಕಿಕೊಂಡು ಕುಣಿದೆ, ಕುಣಿದೆ, ಕಣ್ಣೇರನ್ನು ಎಲ್ಲರು ಬೆವರ ಹನಿಯೆಂದು ಭಾವಿಸುವ ಹಾಗೆ ಕುಣಿದೆ, ಕಡೆಗೆ ಉಸಿರಾಡಲು ಕಷ್ಟವಾಗುವ ವರೆಗು ಕುಣಿದೆ. ನಂತರ ಒಂದಿಷ್ಟು ತಡಮಾಡದೇ ಊರಿಗೆ ಹೊರಡುವ ಬಸ್ಸು ಹತ್ತಿದೆ. ನಾನು ಊರಿಗೆ ಹೊರಡುವಷ್ಟರಲ್ಲಿ ಕತ್ತಲಾಗಿತ್ತು, ಬಸ್ಸಿನಲ್ಲಿ ಅಷ್ಟೊಂದು ಜನರಿರಲಿಲ್ಲ. ಆ ಕತ್ತಲಲ್ಲಿ ನನ್ನ ಕಣ್ಣಹನಿಗಳು ಕಣ್ಣಿಂದ ಹೊರ ಜಾರುವ ಧೈರ್ಯ ಮಾಡಿದವು. ಮಧ್ಯರಾತ್ರಿ ವೇಳೆಗೆ ಊರು ತಲುಪಿದೆ, ಮನೆಯ ಹತ್ತಿರ ನೆಂಟರು, ಇಷ್ಟರು ನೆರೆ ಹೊರೆಯವರು ಎಲ್ಲರು ತುಂಬಿಕೊಂಡಿದ್ದಾರೆ. ಅಲ್ಲಿ ನನ್ನ ತಾಯಿಯ ಸಾವಾಗಿದೆ. ನನ್ನನ್ನು ಈ ಭೂಮಿಗೆ ಪರಿಚಯಿಸಿದ ನನ್ನವ್ವ ಇನ್ನಿಲ್ಲ. ನನ್ನಪ್ಪ ನನ್ನನ್ನು ಬೈದಾಗಲೆಲ್ಲಾ ನನ್ನ ಪರವಹಿಸಿ ನನ್ನ ಸಮಾಧಾನ ಪಡಿಸುತ್ತಿದ್ದ ನನ್ನವ್ವ ಇನ್ನಿಲ್ಲ. ನಾನು ಊರಿಂದ ಬರುವ ದಾರಿಯನ್ನೆ ಕಾದು ನನ್ನ ಖುಷಿಯಲ್ಲಿ ತನ್ನ ಖುಷಿಕಾಣುತ್ತಿದ್ದ ನನ್ನವ್ವ ಇವತ್ತು ಶಾಶ್ವತ ನಿದ್ರೆಗೆ ಜಾರಿದ್ದಾಳೆ. ನಾನು ಅಳಬೇಕು, ಜೋರಾಗಿ ಅಳಬೇಕು, ನನ್ನವ್ವನನ್ನು ತಬ್ಬಿ ಅಳಬೇಕು ಆದರೆ ಈ ಜನರು ಅವರ ಮಧ್ಯೆ ನಾನೇಗೆ ಅಳಲಿ, ಯೋಚನೆಯಲ್ಲೇ ಮುಳುಗಿದ್ದ ನನಗೆ ಮನೆಗೆ ಬಂದದ್ದು ತಿಳಿಯಲೇ ಇಲ್ಲ. ಮನೆಗೆ ಬಂದಾಕ್ಷಣ ಅಕ್ಕ ನನ್ನನ್ನು ತಬ್ಬಿ ಜೋರಾಗಿ ಅಳಲು ಶುರುಮಾಡಿದಳು, ನನ್ನ ಕಣ್ಣಲ್ಲು ನೀರು ಬಂತು ಆದರೆ ಅಷ್ಟರಲ್ಲಿ ನನ್ನ ಯಾವನೋ ಸಂಬಂಧಿಕನೊಬ್ಬ ‘ನೀನೆ ಧೈರ್ಯ ಗೆಟ್ಟರೇ ಹೇಗೆ? ಅಪ್ಪನಿಗೆ ಅಕ್ಕನಿಗೆ ಇನ್ನುಮುಂದೆ ನೀನೆ ಎಲ್ಲಾ, ಎದ್ದು ಮುಂದೆ ಏನಾಗಬೇಕೊ ಅದರ ಕಡೆ ಗಮನ ಕೊಡು’ ಎಂದು ಬಿಟ್ಟ. ನನಗೆ ರಕ್ತ ಕುದಿಯಲಾರಂಭಿಸಿತು, ಕತ್ತಲೆ ಕೋಣೆಗೆ ಹೋಗುವ ಪರಿಸ್ಥಿತಿಯಲ್ಲಿ ನಾನಿರಲಿಲ್ಲ. ಹೀಗೆ ಆ ರಾತ್ರಿ ರೋಷ, ದುಃಖ ಮಿಶ್ರಿತ ಭಾವದಲ್ಲಿ ಕಳೆದೆ. ಬೆಳಗ್ಗೆ ಅಮ್ಮನ ಶವ ಸಂಸ್ಕಾರದ ಕಡೇಗಳಿಗೆವರೆಗು ತಡೆದೆ, ತಡೆದೆ ನನ್ನ ಶಕ್ತಿ ಮೀರಿ ತಡೆದೆ. ಇನ್ನೇನು ಅಮ್ಮನ ದೇಹಕ್ಕೆ ಅಗ್ನಿಸ್ಪರ್ಷ ಮಾಡಬೇಕು ಆಗ ನನ್ನಿಂದ ಆಗಲಿಲ್ಲ, ಯಾರು ಏನೆ ಹೇಳಲಿ, ನನ್ನನ್ನು ಕೈಲಾಗದವ ಅಂದುಕೊಳ್ಳಲಿ, ನನ್ನ ಹೇಡಿ ಅಂದುಕೊಳ್ಳಲಿ ನನಗದರ ಚಿಂತೆ ಆಗಲಿಲ್ಲ, ನನ್ನ ಹೆತ್ತು ಸಾಕಿದ ನನ್ನವ್ವನ ದೇಹ ಮಾತ್ರ ಕಾಣಿಸುತ್ತಿದೆ. ಅತ್ತೆ, ಜೋರಾಗಿ ಕಿರುಚಿ, ಗೋಡೆಗೆ ಗುದ್ದಿ ಗುದ್ದಿ ಅತ್ತೆ, ಸಮಾಧಾನ ಪಡಿಸಲು ಬಂದವರನ್ನ ತಳ್ಳಿ ಅತ್ತೆ, ನನ್ನನ್ನು ಅಳಬೇಡ ಎಂದು ಹೇಳಲು ಬಂದವರನ್ನ ನೂಕಿ ಅತ್ತೆ, ವರ್ಷಾನುಗಟ್ಟಲೆಯಿಂದ ಅಳುವ ಸ್ವಾತಂತ್ರವನ್ನು ಕಳೆದುಕೊಂಡಿದ್ದವನಿಗೆ ಸ್ವಾತಂತ್ರ ಸಿಕ್ಕಿತೆಂದು ಅತ್ತೆ, ನನ್ನ ಭಾವನೆ ನನ್ನ ಇಷ್ಟ ಎಂದು ಅತ್ತೆ, ಅತ್ತು ಅತ್ತು ಸುಸ್ತಾಗಿ ಬಿದ್ದೆ. ಕಡೆಗು ನನ್ನವ್ವ ತನ್ನ ಸಾವಿನಲ್ಲಿ ಭಾವನೆಯನ್ನು ಅಂಜಿಕೆಇಲ್ಲದೇ ವ್ಯಕ್ತಪಡಿಸಲು ಹೇಳಿಕೊಟ್ಟಳು. ನನ್ನ ಜೀವನದ ಅತ್ಯಂತ ದೊಡ್ಡ ಹಿಂಸೆಯಾಗಿ ಕಾಡುತ್ತಿದ್ದ ನನ್ನ ಅಳುವನ್ನು ನನಗೆ ಮರಳಿಸಿದ್ದಳು ಅವ್ವ. ಇನ್ನೆಂದು ನಾನು ಸಾರ್ವಜನಿಕವಾಗಿ ಅಳೋದಕ್ಕೆ ಹೆದರಿಕೆಯಾಗಲಿಲ್ಲ.
ಈ ನನ್ನ ದುರಂತದ ಘಟನೆ ನನಗೆ ಮುಕ್ತವಾಗಿ ಭಾವನೆಯನ್ನು ವ್ಯಕ್ತಪಡಿಸಲು ಕಲಿಸಿತು, ಭಾವನೆಗೆ ಲಿಂಗ ಭೇದವಿಲ್ಲ ಎಂಬುದನ್ನು ಕಲಿಸಿತು, ನಾನು ಏನೆಂಬುದರ ಅರಿವು ನನಗಿದ್ದಲ್ಲೀ ಬರೀ ನನ್ನ ಅಳುವ ಭಾವನೆಯಿಂದ ನನ್ನನ್ನು ಹೇಡಿ, ಕೈಲಾಗದವನೆಂದು ನನ್ನನ್ನು ಜಡ್ಜ್ ಮಾಡುವವರ ಬಗ್ಗೆ ನಾನು ಗಮನ ಹರಿಸುವ ಅವಶ್ಯಕತೆಯಿಲ್ಲ ಎಂಬುದನ್ನು ಕಲೆತೆ. ಎಷ್ಟೇ ಆಗಲಿ ಈ ಜೀವನ ನನ್ನದು, ಭಾವನೆಗಳನ್ನು ಅದುಮಿ ಹಿಂಸೆ ಅನುಭವಿಸುತ್ತಿದ್ದುದು ನಾನೆ ಹೊರೆತು ನನ್ನನ್ನು ಠೀಕಿಸುತ್ತಿದ್ದ ಜನರಲ್ಲ ಅಲ್ಲವೇ..?
ಭಾವನೆಗಳನ್ನು ವ್ಯಕ್ತಪಡಿಸಲು ಅಂಜದಿರಿ. 


No comments:

Post a Comment