ಕನಸು, ಗುರಿ ಈ ಎರಡು ಪದಗಳು ನನ್ನ ಜೀವನದಲ್ಲಿ ಸಾಕಷ್ಟು ಪ್ರಭಾವ ಬೀರಿದೆ. ಕನಸು ಕಾಣುತ್ತ ಗುರಿ ನಿರ್ಧರಿಸಿದೆ, ಗುರಿಯನ್ನು ತಲುಪುವ ಕನಸನ್ನು ಕಾಣತೊಡಗಿದೆ. ಒಂದಿಲ್ಲದೆ ಮತ್ತೊಂದಿಲ್ಲ. ನಿದ್ದೆ ಮಾಡಲು ಬಿಡದ ಕನಸು ಅದಾಗಿತ್ತು, ಅದರ ನನಸಿನೆಡೆಗೆ ನನ್ನ ಸಕಲ ಪ್ರಯತ್ನ, ತಯಾರಿಗಳು ಸಾಗಿತ್ತು. ನಾನು ಬದುಕಿದ್ದೆ ಆ ಕನಸಿನ ನನಸಿಗಾಗಿ, ನಾನು ಉಸಿರಾಡಿದ್ದೇ ಆ ಗುರಿ ಸಾಧನೆಗಾಗಿ, ಹಾಗಾದರೇ ಹಾಗೇಕೆ ನಡೆಯಿತು? ಈ ನನ್ನ ಅಂತರಂಗ ಇಂದು ತೆರೆದಿಟ್ಟಿರುವೆ.
ಸಾಮಾನ್ಯ ಮದ್ಯಮವರ್ಗದ ಕುಟುಂಬದವನು ನಾನು. ಅಮ್ಮ, ಅಪ್ಪ, ಅಕ್ಕ ಸ್ನೇಹಿತರುಗಳೇ ನನ್ನ ಪ್ರಪಂಚ. ಅಪ್ಪ ಎಂದರೇ ಭಯ, ಅಮ್ಮ ಎಂದರೇ ಮುದ್ದು ಜಾಸ್ತಿ. ಅಪ್ಪ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಪಾಠಗಳಲ್ಲಿ ಅಷ್ಟಾಗಿ ಆಸಕ್ತಿ ತೋರದಿದ್ದರು, ಆಟಗಳಲ್ಲಿ ಸದಾ ಮುಂದಿರುತ್ತಿದ್ದೆ. 10ನೇ ತರಗತಿಯ ನಂತರ, ಕಲಾ ವಿಷಯವನ್ನು ಆಯ್ದುಕೊಂಡು ಕಾಲೇಜು ಮೆಟ್ಟಿಲೇರಿದ್ದೆ. ಆ ವಯಸ್ಸಿನ ಕರಾಮತ್ತೆ ಹಾಗೆ, ಚಿಗುರು ಮೀಸೆಯ ಎತ್ತರದ ಹುಡುಗನಾಗಿದ್ದ ನನ್ನನ್ನು ಕಂಡು ಹುಡುಗಿಯರೆಲ್ಲರು ನನ್ನ ಸ್ನೇಹ ಬಳಸಲು ಇಚ್ಚಿಸುತ್ತಿದ್ದರು. ನಾನು ಎಲ್ಲರೊಂದಿಗೆ ಸ್ನೇಹದಿಂದಲೇ ಇರುತ್ತಿದ್ದೆ. ಹೀಗಿರುವಾಗ ಅಷ್ಟು ಹುಡುಗಿಯರಲ್ಲಿ ಒಬ್ಬಳು ಮಾತ್ರ ಸ್ನೇಹಕ್ಕು ಮೀರಿ ಒಂದು ಹೆಜ್ಜೆ ಮುಂದೆ ನನ್ನ ಜೊತೆ ಸಲುಗೆಯಿಂದಿದ್ದಳು. ಅವಳೆಂದರೇ ನನಗೆ ಇಷ್ಟ, ನಾನೆಂದರೇ ಅವಳಿಗೂ ತುಂಬ ಇಷ್ಟ. ಸರೀ, ಇಬ್ಬರು ಮುಂದೆ ಮದುವೆ ಆಗುವ ಎಂದು ನಿರ್ಧರಿಸಿಕೊಂಡೆವು. ನನ್ನ ಬದುಕು ಓದು, ಆಟ, ನನ್ನ ಗೆಳತಿ, ಕುಟುಂಬ ಎಂದು ಹಾಯಾಗಿ ಸಾಗುತಿತ್ತು. ನಾಳಿನ ಚಿಂತೆ, ಮುಂದಿನ ಭವಿಷ್ಯದ ಭಯ ನನ್ನನ್ನು ಸೋಕಿರಲಿಲ್ಲ.
ಹೀಗಿದ್ದ ನಾನು ಪಿಯುಸಿ ಮುಗಿಸಿ ಬಿಎ ಓದಲು ಕಾಲೇಜಿಗೆ ಸೇರಿದೆ. ಪಿಯುಸಿಯಿಂದ ಹೊರ ಬಂದ ನಮಗೆಲ್ಲರಿಗು ಏನೋ ಒಂದು ರೀತಿ ಜಗತ್ತನ್ನೇ ಗೆಲ್ಲೋ ಹುಮ್ಮಸ್ಸು, ಬಂಡೆಯನ್ನು ಗುದ್ದಿ ಪುಡಿಪುಡಿಮಾಡಿ ಬಿಡುವಷ್ಟು ಶಕ್ತಿ ಇರುವ ಭಾವನೆ, ನಾವು ಅಂದುಕೊಂಡದ್ದೇ ಸರಿ, ನಾವು ಮಾಡುವುದೆಲ್ಲಾ ಸರಿ ಎಂಬ ನಂಬಿಕೆ. ನಮ್ಮ ಈ ಶಕ್ತಿಗೆ ಸರಿಯಾದ ಮಾರ್ಗದರ್ಶನ ದೊರೆತರೆ ಖಂಡಿತ ಮನುಷ್ಯ ಕುಲವೇ ಬೆರಗಾಗುವ ಸಾಧನೆ ಮಾಡುವುದರಲ್ಲೀ ಎರಡು ಮಾತಿಲ್ಲ. ಅದೇ ಹುಮ್ಮಸ್ಸು ನನ್ನಲ್ಲೂ ಇತ್ತು. ನನ್ನ ಸ್ನೇಹಿತರಲ್ಲು ಇತ್ತು. ಆದರೇ ಎಲ್ಲರೂ ಹೀಗಿರಲಿಲ್ಲ, ಮೋಜು, ಮಸ್ತಿ, ಸಂತೋಷದ ಹೆಸರಲ್ಲಿ ಬೇರೆಯವರನ್ನು ರ್ಯಾಗ್ ಮಾಡೋದು, ಹಿಂಸಿಸೋದು, ನೋವು ಕೊಡುವ ಕೆಲಸಮಾಡುತ್ತಿದ್ದರು.
ಆದಿನ ನಡೆದ ಆ ಘಟನೇ ನನ್ನ ಜೀವನದ ದಿಕ್ಕನ್ನೇ ಬದಲಿಸುತ್ತೆ ಎಂದು ನಾನು ಅಂದು ಎಣಿಸಿರಲಿಲ್ಲ. ಆ ದಿನ ನಾನು ಕಾಲೇಜಿನಲ್ಲಿ, ತರಗತಿಗಳ ನಡುವೆ ಬಿಡುವಿದ್ದಾಗ ನನ್ನ ಸ್ನೇಹಿತರ ಜೊತೆ ಕೂಡಿ ಹರಟುತಿದ್ದಾಗ, ದೂರದಲ್ಲಿ ನಾಲ್ಕಾರು ಹುಡುಗರ ಗುಂಪು ಕಾಣಿಸಿತು. ನಾವು ಅಲ್ಲೇನು ನಡೆಯುತ್ತಿದೆ ಎಂದು ತಿಳಿಯಲು ಹೋದೆವು. ಹೋಗಿ ನೋಡಿದರೇ ಅಲ್ಲಿ ಒಬ್ಬ ಜ್ಯೂನಿಯರ್ ಹುಡುಗಿಯನ್ನು ಆ ಹುಡುಗರು ರ್ಯಾಗ್ ಮಾಡುತ್ತಿದ್ದರು. ಅವಳು ಅಸಹಾಯಕಳಾಗಿ ಅಳುತ್ತಿದ್ದಳು. ಅವಳು ಅತ್ತಷ್ಟು ಇವರುಗಳು ಅದನ್ನು ಮನೋರಂಜನೆ ಎಂಬಂತೆ ಕೇಕೆ ಹಾಕಿ ನಗುತ್ತಿದ್ದರು. ಇದನ್ನು ಕಂಡು ನನಗೇ ರೋಷ, ಆ ಹುಡುಗಿಯ ಅಳು ನನ್ನನ್ನು ಕೆರಳಿಸುತ್ತಿತ್ತು. ಸರೀ ಎಂದು ಅವರುಗಳನ್ನು ತಡೆಯಲು ಹೋದೆ. ಆದರೇ ಅವರೆಲ್ಲರು ಸೇರಿ ನನ್ನನ್ನು ತಡೆದು, ಹೊಡೆದು, ಅವಾಚ್ಯ ಶಬ್ಧದಲ್ಲಿ ನಿಂದಿಸಿ ನನ್ನನ್ನು ದಬಾಯಿಸಿಬಿಟ್ಟರು. ಅಷ್ಟರಲ್ಲಿ ರೌಂಡ್ಸ್‍ನಲ್ಲಿದ್ದ ಆ ಏರಿಯಾ ಎಸ್.ಐ ಅಲ್ಲಿಗೆ ಧಾವಿಸಿದರು. ಅವರನ್ನು ಕಂಡೊಡನೇ ಇಷ್ಟೊತ್ತು ಎಗರುತ್ತಿದ್ದ ಹುಡುಗರೆಲ್ಲರು ನಡುಗಲಾರಂಭಿಸಿದರು. ಅದನ್ನು ನಾನು ಗಮನಿಸಿದೆ. ಅವರು ಬಂದು ಎಲ್ಲವನ್ನು ವಿಚಾರಿಸಿ ಆ ಹುಡುಗರಿಗೆ ನಾಲ್ಕು ತಟ್ಟಿ ಎಚ್ಚರಿಕೆ ನೀಡಿ ತೆರಳಿದರು.
ಈ ಘಟನೆಯಾದ ಬಳಿಕ ನನ್ನ ಗೆಳೆಯರು ಅಷ್ಟು ಜನರ ನಡುವೆ ಅನ್ಯಾಯವನ್ನು ತಡೆಯಲು ಮುಂದಾದ ನನ್ನ ಧೈರ್ಯವನ್ನು ಕೊಂಡಾಡಿದರು. ನನ್ನ ಹುಡುಗಿಯಂತೂ ಆನಂದದಿಂದ ನನ್ನನ್ನು ಅಪ್ಪಿ ‘ಮತ್ತೊಬ್ಬ ಹುಡುಗಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಲು ಪ್ರಯತ್ನಿಸಿದೆಯಲ್ಲಾ, ನಿನ್ನಂತಹ ಹುಡುಗನನ್ನು ಪಡೆಯಲು ನಾನು ಪುಣ್ಯಮಾಡಿದ್ದೆ’ ಎಂದು ಕೊಂಡಾಡಿದಳು. ಎಲ್ಲರು ನನ್ನ ಧೈರ್ಯ, ಗುಣವನ್ನು ಕೊಂಡಾಡುತ್ತಿದ್ದರೇ, ನನ್ನ ಮನಸ್ಸು ಮಾತ್ರ ಬೇರೆಯೆ ಆಲೋಚನೆಯಲ್ಲಿ ಮುಳುಗಿತ್ತು.
ಆ ಹುಡುಗರ ಗುಂಪನ್ನು ಚದುರಿಸಲು ನಾನು ಒಬ್ಬನೇ ಹೋದಾಗ ನನ್ನನ್ನು ದಬಾಯಿಸಿ, ನಿಂದಿಸಿದರು. ಆದರೇ ಅದೇ ಎಸ್.ಐ ಒಬ್ಬರೇ ಬಂದಾಗ ಅಷ್ಟೂ ಜನ ಹುಡುಗರು ನಿಂತಲ್ಲಿಯೇ ನಡುಗಲಾರಂಭಿಸಿದ್ದರು. ನಾನು ಒಬ್ಬನೇ, ಅವರೂ ಒಬ್ಬರೇ, ಆದರೇ ಅವರ ಕೈಯಲ್ಲಿ ಅನ್ಯಾಯ ತಡೆಯಲು ಸಾಧ್ಯವಾಯಿತೇ ಹೊರೆತು ನನ್ನ ಕೈಯಲ್ಲಿ ಸಾಧ್ಯವಾಗಲಿಲ್ಲ. ಯಾಕೆ? ಎಂದು ಪ್ರಶ್ನೆ ಕಾಡಲಾರಂಭಿಸಿತು. ಅದಕ್ಕೆ ಉತ್ತರ ಅವರು ಒಬ್ಬ ಪೊಲೀಸ್ ಅಧಿಕಾರಿ (ಎಸ್.ಐ). ಅವರು ಎಸ್.ಐ ಆಗದೇ ಇದ್ದಿದ್ದರೇ ನನಗಾದ ಗತಿಯೇ ಅವರಿಗು ಆಗುತಿತ್ತು. ನಾನು ಅನ್ಯಾಯ ತಡೆಯುವ ಪ್ರಯತ್ನ ಮಾಡಿದಕ್ಕೆ ಒಂದು ತೆರನಾದ ಆನಂದ, ಏನೋ ಸಾಧಿಸಿದ ಭಾವನೆ ಜೊತೆಗೆ ಎಲ್ಲರಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಒಂದುವೇಳೆ ನಾನು ನಿಜವಾಗಲು ಅನ್ಯಾಯಗಳನ್ನು ಮಟ್ಟ ಹಾಕಿದರೇ, ತಡೆಯಲು ಯಶಸ್ವಿಯಾದರೇ, ಅದು ಹೇಗಿರುತ್ತೆ? ಎಂದೆನಿಸಿತು. ಹಾಗಾದರೇ ಅದನ್ನು ಮಾಡುವುದಾದರು ಹೇಗೆ ಎಂದು ಯೋಚಿಸಿದಾಗ ನಾನ್ಯಾಕೆ ಎಸ್.ಐ ಆಗಬಾರದು ಎಂದು ಹೊಳೆಯಿತು. ಹೀಗೆ ಆ ಘಟನೆಯಿಂದ ನನ್ನೊಳಗೆ ಒಂದು ಗುರಿ ಮೊಳೊಕೆಯೊಡಿಯಿತು. ಅದನ್ನ ಹೆಮ್ಮರವಾಗಲು ಬಿಟ್ಟೆ. ಅದರ ಸಾಧನೆಯೆಡೆಗೆ ಕನಸುಕಾಣಲು ಶುರುಮಾಡಿದೆ.
ತಂದೆ ಪೊಲೀಸ್ ಇಲಾಖೆಯಲ್ಲೇ ಇದ್ದುದರಿಂದ ನನ್ನ ಗುರಿ ಅವರಿಗು ಹಿಡಿಸಿತು. ನನ್ನ ತಯಾರಿಗೆ ಬೇಕಾದ ನೆರವುಗಳನ್ನು ಅವರು ಮಾಡಿದರು. ಬಿಎ ನಂತರ ಮಾಸ್ಟರ್ಸ್ ಇನ್ ಸೋಷಿಯಲ್ ವರ್ಕ್ ಮಾಡಿ ನಂತರ ಎಸ್.ಐ ಪರೀಕ್ಷೆ ಬರಿಯಲು ನಿರ್ಧರಿಸಿದೆ. ಆದರೆ ಪರೀಕ್ಷೆಯ ತಯಾರಿ ಮಾತ್ರ ಗುರಿ ನಿರ್ಧರಿಸಿದ ದಿನದಿಂದಲೇ ಶುರುಮಾಡಿದ್ದೆ. ನನ್ನ ಕನಸು, ನನ್ನ ಮನಸ್ಸು ಎಲ್ಲವೂ ಎಸ್.ಐ ಆಗುವುದರಲ್ಲೇ ಇತ್ತು. ನನ್ನ ಹುಡುಗಿ ನನ್ನ ಗುರಿಗೆ ಬೆಂಬಲಿಸಿದಳು. ನನ್ನ ಮೇಲೆ ಅಪಾರ ನಂಬಿಕೆ ಇರುವುದಾಗಿಯು, ತಾನು ಪೊಲೀಸ್ ಹೆಂಡತಿಯಾಗಲು ಹೆಮ್ಮೆ ಪಡುವುದಾಗಿಯು ಯಾವಾಗಲು ಹೇಳುತಿದ್ದಳು.
ದಿನದ 24 ಗಂಟೆಗಳಲ್ಲಿ, ಸರಿ ಸುಮಾರು 16-20 ಗಂಟೆ ನಾನು ಎಸ್.ಐ ಪರೀಕ್ಷೆ ತಯಾರಾಗುವುದರಲ್ಲೇ ಕಳಿಯುತಿದ್ದೆ.5-6 ದಿನಪತ್ರಿಕೆಗಳನ್ನು ಓದೋದು, ಕೋಚಿಂಗ್ ಕ್ಲಾಸ್‍ಗಳಿಗೆ ತೆರಳಿ ಅಲ್ಲಿ ಹೇಳುತಿದ್ದ ಪುಸ್ತಕಗಳನ್ನ ಓದೋದು ಹೀಗೆ ಎಲ್ಲಾ ರೀತಿಯ ತಯಾರಿಗಳು ಅಚ್ಚುಕಟ್ಟಾಗಿ ಸಾಗಿದ್ದವು. ನಾನು ಮೊದಲೇ ಕ್ರೀಡ ಪಟುವಾಗಿದ್ದ ಕಾರಣ ಫಿಸಿಕಲ್ ಫಿಟ್‍ನೆಸ್ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿರಲಿಲ್ಲ. ನನ್ನ ಕೋಚಿಂಗ್ ತರಗತಿಗಳಲ್ಲಿ ಎಲ್ಲಾ ಪರೀಕ್ಷೆಗಳಲ್ಲು 50ಕ್ಕೆ 45ರ ಮೇಲೆ ಅಂಕ ಪಡೆದುಕೊಳ್ಳುತಿದ್ದೆ. ಇನ್ನುಳಿದ 2-3 ಅಂಕಗಳು ಯಾಕೆ ತಪ್ಪುತಿದ್ದವು ಎಂದು ತಿಳಿದು ಅವುಗಳನ್ನು ಅಭ್ಯಾಸಿಸುತಿದ್ದೆ. ಇಷ್ಟರ ಮಟ್ಟಿಗೆ ನನ್ನ ಎಸ್.ಐ ಕನಸು ಬೇರೂರಿತ್ತು. ನಾನು ಒಂದೇ ಬಾರಿಗೆ ನನ್ನ ಗುರಿಯನ್ನು ತಲುಪಿಬಿಡುವ ಆತ್ಮವಿಶ್ವಾಸ, ಆಸೆ ಹೊಂದಿದ್ದೆ. ನನ್ನ ತಂದೆಯ ಸ್ನೇಹಿತರು, ನನ್ನ ಗೆಳೆಯರೆಲ್ಲರು ನನ್ನ ಪರಿಶ್ರಮ, ನನ್ನ ತಯಾರಿಕಂಡು ನಾನು ಎಸ್.ಐ ಆಗೆ ತೀರುವೆ ಎಂದು ಅಪ್ಪನಿಗೆ ಹೇಳಿ ಪೊಲೀಸ್ ಸಮವಸ್ತ್ರ ಹೊಲಿಸಲು ಹೇಳಿದ್ದರು. ನನ್ನ ಸುತ್ತಮುತ್ತ, ನನ್ನ ಬಳಗದಲ್ಲೆಲ್ಲಾ ನಾನು ಮಾದರಿ ಯುವಕನಾಗಿದ್ದೆ. ಎಲ್ಲರು ನನ್ನನ್ನೆ ತೋರಿಸಿ ಅವನ ಹಾಗಿರ ಬೇಕು ಎನ್ನುತ್ತಿದ್ದರು.
ನಾನು ಎದುರು ನೋಡುತ್ತಿದ್ದ ಗಳಿಗೆ ಬಂದೇಬಿಟ್ಟಿತು. ನಾನು ಫಿಸಿಕಲ್ ಎಕ್ಸಾಮಿನಿಷೇನ್ ಅದ್ಭತವಾಗಿ ಮಾಡಿದೆ. ನಂತರ ರೈಟಿಂಗ್ ಎಕ್ಸಾಮ್ ಕೂಡ ಅತ್ಯತ್ತಮವಾಗೆ ಮಾಡಿದೆ. ಇನ್ನು ಬಾಕಿ ಉಳಿದಿದ್ದು ಫೈನಲ್ ಇಂಟವ್ರ್ಯೂ ಮಾತ್ರ. ನನ್ನ ಕೋಚಿಂಗ್ ತರಗತಿಗಳಲ್ಲಿ ಮತ್ತೆ ನನ್ನ ತಂದೆಯ ಪೊಲೀಸ್ ಗೆಳೆಯರೆಲ್ಲರು, ಸಂದರ್ಶನ ಹೇಗಿರುತ್ತದೆ ಎಂಬುದರ ಕುರಿತಾಗಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು. ಸಂದರ್ಶನದಲ್ಲಿ ಹಿರಿಯ ಅಧಿಕಾರಿಗಳು ನಮ್ಮ ಆತ್ಮವಿಶ್ವಾಸ ಪರೀಕ್ಷಿಸಲು ಬೇಕೆಂದೆ ನಮಗೆ ಒಂದೇ ಪ್ರಶ್ನೆಯನ್ನು ಪದೇ ಪದೇ ಕೇಳುವುದು, ಹಾಗೆ ಸರಿಯಿರುವ ಉತ್ತರವನ್ನು ಬೇಕೆಂದಲೇ ತಪ್ಪು ಇರಬಹುದೇನೋ ಎಂದು ಸಂಶಯ ಕಾಡುವ ಹಾಗೆ ನಡೆದುಕೊಳ್ಳುತ್ತಾರೆ, ನಮ್ಮ ಉತ್ತರವನ್ನು ನಾವು ಬದಲಿಸಬಾರದು ಬದಲಿಗೆ ಮತ್ತಷ್ಟು ಆತ್ಮವಿಶ್ವಾಸದಿಂದ ಉತ್ತರ ಬದಲಿಸದೇ, ಒಂದೇ ಉತ್ತರವನ್ನೆ ಹೇಳಬೇಕು ಎಂದು ಹೇಳಿದ್ದರು.
ಮಾರನೆಯ ದಿವಸ ಸಂದರ್ಶನದ ಸಮಯ ಬಂದೇ ಬಿಟ್ಟಿತು. ಅಂದು ನಾಲ್ಕು ಜನರ ನಡುವೆ ಪೈಪೋಟಿ ಇತ್ತು. ಸಮಾನಾಂಕ ಬಂದ ನಾವು ನಾಲ್ವರ ಪೈಕಿ ಇಬ್ಬರಿಗೆ ಎಸ್.ಐ ಅವಕಾಶ. ನಾಲ್ವರಲ್ಲಿ ಇಬ್ಬರು ಕ್ಯಾಟಗರಿಯಲ್ಲಿ ಬರುವುದರಿಂದ ಹಾಗು ನಾನು ಜೆನೆರಲ್ ಕ್ಯಾಟಗರಿಯಾದ್ದರಿಂದ ನಾನು ಸಂದರ್ಶನದಲ್ಲಿ ಅವರೆಲ್ಲರಿಗಿಂತಲೂ ಹೆಚ್ಚು ಅಂಕ ಪಡೆಯಬೇಕಿತ್ತು. ಇವೆಲ್ಲಾ ಅಂಶ ತಲೆಯಲ್ಲಿತ್ತು. ಜೊತೆಗೆ ನನ್ನ ತಂದೆಯ ಸ್ನೇಹಿತರು ಮತ್ತಿತ್ತರು ಹೇಳಿದಹಾಗೆ ಹೆಚ್ಚು ಆತ್ಮವಿಶ್ವಾಸ ತೋರಬೇಕು ಹಾಗೆ ನಾನು ಹೇಳಿದ ಉತ್ತರದ ಮೇಲೆ ನಿಲ್ಲಬೇಕು ಸಂದರ್ಶನಕಾರರು ಏನೆ ಮಾಡಿದರು ನಾನು ಅವರ ಟ್ರಾಪ್‍ಗೆ ಬೀಳಬಾರದೆಂದು ಮನಸಲ್ಲೇ ನಿರ್ಧರಿಸಿದ್ದೆ. ಅಂತೆಯೇ ಸಂದರ್ಶನಕಾರರು ನನಗೆ ಪ್ರಶ್ನೆಗಳನ್ನು ಕೇಳಲು ಶುರುಮಾಡಿದರು. ಮೊದಲು 2-3 ಪ್ರಶ್ನೆಗಳ ನಂತರ ಸಂದರ್ಶನಕಾರರಲ್ಲಿ ಒಬ್ಬರಾಗಿದ್ದ ಐ.ಪಿ.ಎಸ್ ಅಧಿಕಾರಿಯೊಬ್ಬರು. ‘ಕರ್ನಾಟಕದ ಮೊದಲ ಮಹಿಳಾ ಐ.ಪಿ.ಎಸ್ ಅಧಿಕಾರಿ ಯಾರೆಂದರು?’, ನಾನು ಪಟ್ಟನೇ ನಕ್ಕುಬಿಟ್ಟೆ. ಇಷ್ಟೊಂದು ಸರಳ ಪ್ರಶ್ನೆಗಳನ್ನ ಕೇಳುತ್ತಾರ ಎಂಬ ಭಾವನೆ ನನ್ನದಾಗಿತ್ತು. ಪಟ್ಟೆಂದು ‘ಕಿರಣ್‍ಬೇಡಿ’ ಎಂದು ಉತ್ತರಿಸಿದೆ. ಅವರು ನಿಮ್ಮ ಉತ್ತರ ಬಗ್ಗೆ ವಿಶ್ವಾಸ ಇದೆಯಾ, ಯೋಚಿಸಿ ಉತ್ತರ ನೀಡಿ ಎಂದರು. ಪಟ್ಟಂತ ನನ್ನ ಅಪ್ಪನ ಸ್ನೇಹಿತರು ಹೇಳಿದ ಮಾತುಗಳು ನೆನಪಾದವು. ಬೇಕೆಂದಲೇ ನಮ್ಮ ಆತ್ಮವಿಶವಾಸ ಕೆಡಿಸಲು ಮರು ಪ್ರಶ್ನಿಸುತ್ತಾರೆ ಎಂದು ತಿಳಿದೆ. ನಾನು ‘ಹೌದು ಸರ್ ನನಗೆ ಸರಿಯಾಗಿ ಗೊತ್ತದೆ ಅದು ಕಿರಣ್ ಬೇಡಿ’ ಎಂದೆ. ಅವರು ಮತ್ತೊಮ್ಮೆ ‘ನೀನು ಪ್ರಶ್ನೆಯನ್ನು ಸರಿಯಾಗಿ ಕೇಳಿದೆಯ?’ ಎಂದರು. ಆಗ ಯಾಕೊ ನನಗೆ ಒಂದು ತೆರನಾದ ಗಾಬರಿ ಆವರಿಸಿತು, ತಕ್ಷಣವೇ ಅವರು ನಾವು ಕೇಳುತ್ತಿರುವುದು ‘ಕರ್ನಾಟಕದ ಮೊದಲ ಮಹಿಳಾ ಐ.ಪಿ.ಎಸ್ ಅಧಿಕಾರಿ ಯಾರು ಎಂದು’ ಅಂತ ಹೇಳಿದರು. ನನಗೆ ಆ ಸಂದರ್ಶನದ ಕೊಠಡಿಯಲ್ಲೇ ಅಳು ಉಮ್ಮಳಿಸಿತು. ಇದು ಹೇಗೆ ಸಾಧ್ಯ? ನನಗೆ ಮೊದಲ ಭಾರಿ ಅವರು ಪ್ರಶ್ನೆಕೇಳಿದಾಗ ಅದ್ಹೇಗೆ, ಯಾಕೆ ಅಂತ ತಿಳಿಯದು ಅದು ನನಗೆ ‘ಭಾರತದ ಮೊದಲ ಮಹಿಳಾ ಐ.ಪಿ.ಎಸ್ ಅಧಿಕಾರಿ ಯಾರು?’ ಎಂದು ಕೇಳಿದ ಹಾಗೆ ತೋರಿದೆ. ಎಂತಹ ಎಡವಟ್ಟು ಮಾಡಿಕೊಂಡೆ ಎಂದೆನಿಸಿತು. ಪ್ರಶ್ನೆಗೆ ಉತ್ತರ ತಿಳಿಯದೇ ತಪ್ಪು ಉತ್ತರವನ್ನು ಕೊಟ್ಟಿರುವವರನ್ನು ಕಂಡಿದ್ದೆ. ಆದರೆ ಉತ್ತರ ತಿಳಿದಿದ್ದರು ಪ್ರಶ್ನೆಯನ್ನು ಸರಿಯಾಗಿ ಕೇಳದೆ ಎಡವಟ್ಟು ಮಾಡಿಕೊಂಡೆನೆಲ್ಲ ಎಂದು ಒದ್ದಾಡಿದೆ. ಅಲ್ಲಿಂದ ಸಂದರ್ಶನಕಾರರೇ ಸಮಾಧಾನ ಪಡಿಸಿ, ಮತ್ತೊಮ್ಮೆ ಪರೀಕ್ಷೆ ಬರೆಯ ಬಹುದು ಎಂದು ಹೇಳಿಕಳುಹಿಸಿ ಬಿಟ್ಟರು. ಅಲ್ಲಿಗೆ ನನ್ನ ಭವಿಷ್ಯ ನನಗೆ ಗೋಚರಿಸಿತು. ಒಟ್ಟಾರೆ ಅಂಕಗಳಲ್ಲಿ ಕೇವಲ 2 ಅಂಕಗಳ ಕೊರತೆಯಲ್ಲಿ ನಾನು ಎಸ್.ಐ ಆಗಲು ಅನರ್ಹನಾದೆ.
ನಿರಾಸೆ, ಹತಾಶೆ, ನೋವು, ಅವಮಾನ, ಎಲ್ಲವೂ ಆಯಿತು. ನನ್ನ ಕನಸು ನುಚ್ಚು ನೂರಾದ ಅನುಭವ, ಅದನ್ನು ಸಹಿಸದಾದೆ. ಅಪ್ಪ ನನ್ನ ಮೇಲೆ ನಂಬಿಕೆ ಕಳೆದುಕೊಂಡರು. ಯುನಿಫಾರ್ಮ್ ಹೊಲಿಸಿಕೊಳ್ಳಿ ಎಂದವರೆಲ್ಲಾ ನನ್ನನ್ನು ನೋಡಿ ಕೇಕೆ ಹಾಕಿ ನಕ್ಕಿದ ಹಾಗೆ ಆಗುತಿತ್ತು. ಒಂದೇ ಭಾರಿಗೆ ಎಸ್.ಐ ಆಗುವುದಕ್ಕೆ ಅಣಿಯಾಗಿದ್ದ ಮನಸ್ಸಿಗೆ ಮತ್ತೊಮ್ಮೆ ಪ್ರಯತ್ನಿಸಬಹುದಲ್ಲ ಎಂಬ ಮಾತುಗಳು ಅಸಹನೀಯವಾಗಿ ಕಾಡಿತು. ಬುದ್ದಿ ಮಾತು ಹೇಳಲು ಬಂದವರಿಗೆ ಹೊಡೆದು ಬಿಡುವಷ್ಟು ಆಕ್ರೋಷ. ಕಡೆಗೆ ಯಾರ ಕಣ್ಣಿಗು ಬೀಳಬಾರದು, ನಿರಾಸೆಯು ನನ್ನ ಕಾಡಬಾರದೆಂದು ಗೆಳೆಯರೊಡನೆ ಸೇರಿ, ಗಾಂಜ, ಸಿಗರೇಟು, ಹೆಂಡದ ಮೊರೆಹೋದೆ. ಡ್ರಗ್ಸ್ ಸೇವಿಸೋದು ಮಲಗೋದು, ಮತ್ತೆ ಎದೊಳೋದು ನೆನಪಾದಾಗ ಮತ್ತೆ ಅದೇ ಸೇವಿಸೋದು ನನ್ನ ದಿನಚರಿಯಾಗಿ ಹೋಯಿತು. ಮನೆಯನ್ನು ಬಿಟ್ಟು ಗೆಳೆಯರ ಬಳಿಯೇ ತಂಗಲು ಶುರುಮಾಡಿದೆ.
ಹೀಗೆ ತಿಂಗಳಾನುಗಟ್ಟಲೇ ನಿಷೆಯ ಗುಂಗಲ್ಲೇ ಕಾಲಕಳೆದೆ. ಎಸ್.ಐ ಆಗಿ ಅನ್ಯಾಯ ತಡೆಯಬೇಕಾದವನು, ತಾನೆ ಅನ್ಯಾಯವೆಸಗಲು ಶುರುಮಾಡಿದ್ದೆ. ನನ್ನ ಮೇಲಿನ ಹಿಡಿತವನ್ನು ಕಳೆದುಕೊಂಡಿದ್ದೆ. ಹೀಗೆ ಕಾಲ ಕಳೆಯುತ್ತಿದ್ದ ನನ್ನ ಮನಸ್ಸು ಅದೇಕೊ ನನ್ನನ್ನು ಚುಚ್ಚಲು ಶುರುಮಾಡಿತ್ತು. ನಾನು ಇದಲ್ಲ, ನಾನು ಬದಲಾಗಬೇಕೆಂದು ಹೇಳತೊಡಗಿತು. ಅದೇ ಸಮಯಕ್ಕೆ ದೂರದ ಊರಿನಲ್ಲಿದ್ದ ನನ್ನ ಗೆಳೆಯನೊಬ್ಬ ನನಗೆ ಹೊರ ಬರುವ ದಾರಿ ತೋರಿದ. ಸಾಂತ್ವಾನದ ಮಾತುಗಳನ್ನಾಡಿದ. ನನ್ನನ್ನು ದೂಷಿಸದೇ, ಒಪ್ಪಿಕೊಂಡು ನಿಧಾನವಗಿ ಬದಲಾಗು ಎಂದು ಮನವರಿಕೆ ಮಾಡಿದ. ಹಾಗೆ ಸಮಾಜ ಸೇವೆ ಮಾಡಲು ಪೊಲೀಸ್ ಮಾತ್ರ ಆಗಬೇಕೆಂದಿಲ್ಲ, ಪತ್ರಕರ್ತನಾಗಿಯು ಸೇವೆ ಸಲ್ಲಿಸಬಹುದೆಂದ. ನನಗು ಹೌದೆನಿಸಿತು. ಖಾಸಗಿ ಮಾದ್ಯಮವೊಂದರಲ್ಲಿ ಕೆಲಸ ಕೊಡಿಸಿದ. ಹಾಗೊ ಹೀಗೊ ಜೀವನ ಸಾಗುತಿತ್ತು. ಆಗ ನನ್ನ ಹುಡುಗಿ ತನಗೆ ಮನೆಯಲ್ಲಿ ಹುಡುಗ ಹುಡುಕುತ್ತಿರುವುದಾಗಿಯು, ನನಗೆ ಕಡಿಮೆ ಸಂಬಳ ಇರುವುದರಿಂದ ಬೆಂಗಳೂರಲ್ಲಿ ಹೇಗೆ ಸಂಸಾರ ಮಾಡುವುದು? ನಮ್ಮ ವಿಷಯವನ್ನು ಮನೆಯಲ್ಲಿ ಪ್ರಸ್ತಾಪ ಮಾಡಲು ಹಿಂಜರಿದಳು. ಹಾಗು ತನಗೆ ಇನ್ನುಮುಂದೆ ಈ ಸಂಬಂಧ ಮುಂದುವರೆಸುವುದರಲ್ಲಿ ಇಚ್ಚೆಯಿಲ್ಲ ಎಂದು ತಿಳಿಸಿ ಬೇರೆ ಹುಡುಗನನ್ನು ಮದುವೆಯಾಗಿಬಿಟ್ಟಳು. 7 ವರ್ಷದ ಪ್ರೀತಿ ಮುರಿದು ಬಿದ್ದು ಮತ್ತೊಂದು ಬರೆಯಾಯಿತು. ಆದರೆ ಈ ಭಾರಿ ನಾನು ಹತಾಶನಾಗಲಿಲ್ಲ, ಬದಲಿಗೆ ಹಠ ಹುಟ್ಟಿತು, ಈ ಕೆಲಸದಲ್ಲೂ ನಾನು ಬೆಳೆಯಬಲ್ಲೆ, ಬೆಳೆಯ ಬೇಕು. ಚೆನ್ನಾಗಿ ಬದುಕ ಬೇಕು ಎಂದು ತೋರಿತು. ಅಂತೆಯೇ ಚೆನ್ನಾಗಿ ಕೆಲಸ ಕಲೆತೆ, ಕಷ್ಟಪಟ್ಟು ದುಡಿದೆ, ಈಗಲು ದುಡಿಯುತ್ತಿದ್ದೇನೆ. ನನಗೂ ಈಗ ಮದುವೆಯಾಗಿದೆ. ಒಳ್ಳೇ ಮನಸಿನ ನನ್ನನ್ನು ಹೆಚ್ಚು ಪ್ರೀತಿಸುವ ಹೆಂಡತಿ ಹಾಗೆ ಒಂದು ಮದ್ದಾದ ಮಗುವಿನೊಂದಿಗೆ ನನ್ನ ಸಂಸಾರ ಸುಖಮಯವಾಗಿದೆ.
ಈಗ ಹಿಂದೆ ತಿರುಗಿ ನೋಡಿದರೇ, ಒಂದು ರೀತಿ ಆಗಿದ್ದೆಲ್ಲಾ ಒಳ್ಳೆಯದಕ್ಕೆ ಎನಿಸುತ್ತದೆ. ಈ ಘಟನಾವಳಿಗಳಿಂದ ನಾನು ಜೀವನದಲ್ಲಿ ದೊಡ್ಡ ಪಾಠ ಕಲೆತಿದ್ದೇನೆ. ಜೀವನ ನಾವು ಅಂದುಕೊಂಡಂತೆ ಸಾಗದು, ಜೀವನ ಬಂದಂತೆ ಸ್ವೀಕರಿಸುವುದು, ಹಾಗೆ ಅದರಲ್ಲೀ ಆನಂದದಿಂದ ಇರುವುದು ನನಗೆ ಚೆನ್ನಾಗಿ ಮನವರಿಕೆಯಾಗಿದೆ. ಕನಸು ಕಾಣುವುದು, ಗುರಿ ಹೊಂದುವುದು ಅದರ ಸಾಧನೆಗೆ ಶ್ರಮಿಸಬೇಕೆಂಬುದು ಎಷ್ಟು ಮುಖ್ಯವೋ, ಆ ಗುರಿ ನೆರವೇರದಿದ್ದರೇ ಸೋಲಿಗೆ ಮನಸ್ಸು ತಯಾರಾಗಿಸಿಕೊಳ್ಳುವುದು ಅಷ್ಟೇ ಮುಖ್ಯ, ಸೋತ ನಂತರ ಎದ್ದಾಗ ಅದೊಂದು ಹೊಸ ಅನುಭವ, ಹೊಸ ಹುಟ್ಟು, ಹೊಸ ವಿಶ್ವಾಸ.