Tuesday, February 5, 2019

Expected Love..




ಗಾಳಿಗಾಳಿ ತಂಪೂ ಗಾಳಿ ಊರ ತುಂಬ ಇದೆಯೋ,                                                           
ನಿನ್ನ ಹೆಸರೂ ಗಾಳಿಯೊಂದೇ ನನ್ನ ಉಸಿರಲ್ಲಿದೆಯೋ,                                                     
ನಮ್ಮ ಪ್ರೀತಿ ಬೆಳಗಿದ ಇತಿಹಾಸವೋ, ನಿನ್ನ ವಿರಹಾನೆ ಕಡಿವಾಣ                                          
ನಿನ್ನ ದಾರೀನ ಕಾಯುವೆನಾ...ತುಂತುರೂ ಅಲ್ಲೀ ನೀರಾ ಹಾಡು..’
ಇವತ್ತಿಗೆ ಈ ಹಾಡಿನ ಸಾಲುಗಳ ಬೆನ್ನಹಿಂದೆ ಇರುವಾ ನೆನಪುಗಳಷ್ಟೇ ನನ್ನ ಪಾಲಿಗೆ ಉಳಿದಿದೆ. ಈ ಸಾಲುಗಳಂತೆ ಸುಂದರವಾದ ದಾಂಪತ್ಯ ನಮ್ಮದಾಗಿತ್ತು. ಹೌದು ನಿಜಕ್ಕೂ ಸುಂದರ ದಾಂಪತ್ಯ ಅದು, ಆದರೇ ನನಗೆ ಮಾತ್ರ ಆ ಸೌಂದರ್ಯ ನೋಡೋಕ್ಕೆ ಆಗಲೇ ಇಲ್ಲ. ಆ ಸೌಂದರ್ಯ ಕಾಣೋಕ್ಕೆ ನಿರ್ಮಲ ಮನಸ್ಸು ಬೇಕು. ನನಗೂ ಈಗ ಬಂದಿದೇ ಆ ನಿರ್ಮಲತೇ, ಆದರೇನು ಪ್ರಯೋಜನ? ನನ್ನ ಅಂತರಾಳ ಕೇಳಿ
ನಾನೊಬ್ಬಳು ಅನಾಥೆ. ಅಜ್ಜಿಯೇ ನನ್ನ ಪ್ರಪಂಚ. ಬಾಲ್ಯವೆಲ್ಲಾ ಅಜ್ಜಿ ಕಥೆಗಳನ್ನೇ ಕೇಳಿ ಬೆಳೆದೆ. ನನ್ನ ಅಪ್ಪ ಅಮ್ಮನ ಬಗ್ಗೆ ಕೇಳಿದಾಗಲೆಲ್ಲ ಅಜ್ಜಿ ರಾಜಕುಮಾರನ ಕಥೆ ಹೇಳುತ್ತಿದ್ದಳು, ಎಲ್ಲಾ ಕಥೆಗಳ ಅಂತ್ಯದಲ್ಲೂ ‘ಅಂತೂ ರಾಜ ರಾಣಿ ಒಂದಾಗುತ್ತಾರೆ ಮತ್ತೆ ಅವರ ಜೀವನವೆಲ್ಲಾ ಸಂತೋಷದಿಂದ ಕೂಡಿರುತ್ತೆ’ ಎಂದಿರುತ್ತಿತ್ತು. ಕಥೆ ಮುಗಿದ ಮೇಲೆ ಅಮ್ಮಮ್ಮ ‘ನಿನಗಾಗಿ ಎಲ್ಲೋ ನಿನ್ನ ರಾಜಕುಮಾರ ಹುಟ್ಟಿದ್ದಾನೆ. ಅವನು ನಿನ್ನ ಮದುವೆ ಆದಮೇಲೆ, ಅವನೇ ನಿನ್ನ ಅಪ್ಪ, ಅಮ್ಮ ಎಲ್ಲಾ. ಆಮೇಲೆ ನಿನ್ನ ಜೀವನದಲ್ಲಿ ಬರೀ ಆನಂದ ಇರುತ್ತೇ, ಈಗ ಮಲಗು ನಿನ್ನ ರಾಜ ಕನಸಲ್ಲೀ ಬರುತ್ತಾನೆ’ ಎಂದು ಹೇಳಿ ಮಲಗಿಸುತ್ತಿದ್ದರು. ನಾನು ಆಗ ನಿರ್ಭೀತ, ನಿಶ್ಚಿಂತೆಯಿಂದ ರಾಜನಿಗಾಗಿ ಎದುರು ನೋಡುತ್ತಾ ಮಲಗುತ್ತಿದ್ದೆ.
ಇಂತಿಪ್ಪ ನನಗೆ ಅಂತು ಮದುವೆ ಆಯಿತು. ನನ್ನ ರಾಜಕುಮಾರ ನನಗೆ ಸಿಕ್ಕೇಬಿಟ್ಟರು, ಅವರು ನನ್ನಂಥೆ ಅನಾಥರು. ನನಗಾದರು ಅಜ್ಜಿ ಇದ್ದರು. ಅವರು ಸುತಾರಾಂ ಒಬ್ಬರೇ. ಚಿಕ್ಕ ವಯಸ್ಸಿನಿಂದಲೇ ಬೇಕರಿ ಕೆಲಸ, ಪೇಪರ್ ಹಾಕುವುದು, ಮೆಕ್ಯಾನಿಕ್ ಕೆಲಸಗಳನ್ನು ಮಾಡಿಕೊಂಡು ಹಾಗೋ ಹೀಗೋ ಓದಿ ಡಬಲ್ ಗ್ರಾಜುಯೇಟ್ ಆಗಿ ಒಳ್ಳೆ ಕೆಲಸದಲ್ಲಿದ್ದರು. ಅವರು ಬಹಳ ವಾಸ್ತವ ಮನುಷ್ಯ. ಜೀವನ ಬಂದಂತೆ ಸ್ವೀಕರಿಸೋದು, ನಮ್ಮ ಸುಖಕ್ಕೆ, ದುಃಖಕ್ಕೆ ನಾವೇ ಹೊಣೆ, ಈಗ ಏನು ನಡೆಯುತ್ತಿದೆಯೋ ಅದಕ್ಕೆ ಚತುರತೆಯಿಂದ ಸ್ಪಂದಿಸಿದರೇ, ನಾಳೆಗಳು ಅದ್ಭುತವಾಗಿರುತ್ತೆ ಎಂದು ನಂಬಿದ್ದರು. ಸದಾ ಲವಲವಿಕೆ ಇಂದಾ ಇರಲು ಬಯಸುತ್ತಿದ್ದರು. ಚಿಕ್ಕಂದಿನಿಂದಲೂ ತಮ್ಮ ತೋಳ್ಬಲದಿಂದ ಬಂದಿದ್ದರಿಂದ, ಯಾವುದಕ್ಕು ಅಂಜುತ್ತಿರಲಿಲ್ಲ ಹಾಗೆ ಯಾರಿಂದಲೂ ಏನು ನಿರೀಕ್ಷಿಸುತ್ತಿರಲಿಲ್ಲ. ಎಲ್ಲಿದ್ದರು ಜನ ಇವರನ್ನು ಹೆಚ್ಚು ಪ್ರೀತಿಸುತಿದ್ದರು. ಇವರ ಜನಗಳಿಕೆಯೆ ನನಗೆ ಇವರೊಡನೆ ಮನಸೋಲುವಂತೆ ಮಾಡಿತು.
ಇಬ್ಬರು ಏಕಾಂತದಲ್ಲಿದ್ದಾಗ ನಾನು ‘ತುಂತುರು ಅಲ್ಲೀ ನೀರಾ ಹಾಡು ..’ಎಂದು ಹಾಡಲು ಶುರುಮಾಡುತ್ತಿದ್ದೆ. ಅವರು ಸಣ್ಣಕಿರುನಗೆಯೊಂದಿಗೆ ತಲೆ ಸವರಿ ‘ಮೇಡಂ ಖುಷಿಯಾಗಿದ್ದಾರೆ’ ಎಂದು ಹಣೆಗೆ ಮುತ್ತಿಡುತಿದ್ದರು. ಅಜ್ಜಿ ಹೇಳಿದಂಗೆ ನನಗೆ ರಾಜಕುಮಾರನೆ ಸಿಕ್ಕಿದನೆಂದು ಖುಷಿಪಡುತ್ತಿದ್ದೆ. ಮದುವೆ ಗೊತ್ತಾದಿನಿಂದಲೂ, ಮದುವೆ ಮುಗಿದು ಒಂದಷ್ಟು ತಿಂಗಳಿನ ವರೆಗು ನನ್ನ ಜೀವನ, ನನ್ನ ಕಲ್ಪನೆಯಂತೆಯೇ ಇತ್ತು. ‘ಅಮೃತವರ್ಷಿಣಿ’ ಚಿತ್ರದಲ್ಲಿರುವ ಗಂಡ, ಹೆಂಡತಿಯಂತೆ ಅನ್ಯೋನ್ಯವಾಗಿದ್ದೆವು. ನನ್ನೊಟ್ಟಿಗೆ ಬಹಳ ಸಮಯ ಕಳಿತಿದ್ದರು. ಹಾಗೆ ನನ್ನನ್ನ ಮಗುವಿನಂತೆ ನೋಡಿಕೊಳ್ಳುತಿದ್ದರು ನನ್ನವರು. ನನ್ನನ್ನು ಹೀಗಿರು, ಹಾಗಿರು ಎಂದು ಆಕ್ಷೇಪಿಸಿದೆ, ನಾನಿರೋ ಹಾಗೆ ಸ್ವೀಕರಿಸಿದ್ದರು. ಅವರ ರಜಗಳೆಲ್ಲಾ ಮುಗಿದು ಅವರಿಗೆ ಮತ್ತೆ ಕೆಲಸ ಶುರುವಾಯಿತು.
ನನ್ನವರಿಗೆ ಸಾಕಷ್ಟು ಹವ್ಯಾಸಗಳಿದ್ದವು, ಒಳ್ಳೆಯ ನಟರಾಗಿದ್ದರು, ಹಲವಾರು ನಾಟಕಗಳಲ್ಲಿ ನಟಿಸಲು ಪಾಲ್ಗೊಳ್ಳುತ್ತಿದ್ದರು. ಅವರಿಗೆ ಡೈರಿ ಬರೆಯುವ ಹವ್ಯಾಸವಿತ್ತು. ಜೊತೆಗೆ ಸಾಕಷ್ಟು ವಿಚಾರ ಸಂಕೀರ್ಣಗಳು, ಗೋಷ್ಠಿಗಳಲ್ಲಿ ಪಾಲ್ಗೊಂಡು ವಿಷಯಗಳ ಬಗ್ಗೆ ಜ್ಞಾನ ಪಡೆದುಕೊಳ್ಳಲು ಬಯಸುತ್ತಿದ್ದರು. ಹಾಗೆ ಆಗಾಗ ಅವರ ಸ್ನೇಹಿತರೊಟ್ಟಿಗೆ ಏಕಾಂತ ಸಮಯ ಕಳೆಯಲು ಇಚ್ಚಿಸುತ್ತಿದ್ದರು. ಇವೆಲ್ಲವು ನನಗೆ ಮದುವೆಗೆ ಮುಂಚೆ ಅವರಲ್ಲೀ ಹಿಡಿಸಿದ್ದ ಪ್ರಮುಖ ಗುಣಗಳಾಗಿದ್ದವು. ಆದರೆ ನಂತರದಲ್ಲಿ ಈ ಹವ್ಯಾಸಗಳಿಂದ ಅವರು ನನಗೆ ಸಮಯ ಕೊಡುತ್ತಿಲ್ಲಾ ಎನಿಸುತಿತ್ತು. ನನ್ನನ್ನು ಎಲ್ಲಾ ಕಡೆ ಕರೆದುಕೊಂಡು ಹೋಗುತ್ತಿದ್ದರು, ಆದರೆ ಅವರೊಟ್ಟಿಗೆ ಹೋದಾಗ ಅವರಗೆಳೆಯರ ಜೊತೆ ನಗುನಗುತ ಮಾತಾಡುತ್ತಿದ್ದರೇ ಏನೊ ಕಸಿವಿಸಿಯಾಗೋದು. ನನಗೆ ಅವರು ಪ್ರಾಮುಖ್ಯತೆ ಕೊಡುತ್ತಿಲ್ಲವೇನೊ ಎನಿಸುತ್ತಿತ್ತು. ಅವರು ಯಾವಾಗಲು ನನ್ನ ಧ್ಯಾನದಲ್ಲೇ ಇರಬೇಕು ಎನಿಸುತಿತ್ತು. ನಾನೆ ಅವರಿಗೆ ಮೊದಲಾಗಿರಬೇಕು ಆಮೇಲೆ ಮತ್ತೆಲ್ಲಾ ಅನಿಸುತಿತ್ತು. ಅದಕ್ಕೆ ನಾನು ಅವರನ್ನು ಹೆಚ್ಚೆಚ್ಚು ಕಾಳಜಿವಹಿಸಲು ಶುರುಮಾಡಿದೆ. ಪ್ರೀತಿ ಹೆಸರಲ್ಲಿ ಕಟ್ಟಾಕಲು ನೋಡಿದೆ, ಏನೇನೊ ಸಪ್ರೈಸ್ ಗಳನ್ನು ಮಾಡಿ ಅವರಿಗೆ ಬೆರಗು ಮೂಡಿಸಿ, ಈ ಹವ್ಯಾಸಗಳನ್ನು ಬಿಟ್ಟು ನನ್ನ ನಿರೀಕ್ಷೆಯಲ್ಲೇ ಇರುವ ಹಾಗೆ ಮಾಡಲು ಯತ್ನಿಸಿದೆ.
ಆದರೆ ನನ್ನವರು ಇದಕ್ಕೆಲ್ಲ ಬಗ್ಗಲಿಲ್ಲ. ನನ್ನ ಪ್ರಯತ್ನಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದರು, ಖುಷಿಯು ಪಡುತಿದ್ದರು ಆದರೆ ಅವರ ಕೆಲಸಗಳನ್ನು ಯಾವತ್ತು ಬಿಡುತ್ತಿರಲಿಲ್ಲ. ಹೆಂಡತಿ, ಕೆಲಸ, ಹವ್ಯಾಸಗಳು, ಸ್ನೇಹಿತರು ಎಲ್ಲರನ್ನು ಒಳಗೊಂಡಿದ್ದೆ ಅವರ ಜೀವನ. ಬರೀ ಹೆಂಡತಿಯೆಂದು ಅವರಿಗೆ ಇರಲು ಸಾಧ್ಯವಾಗುತ್ತಿರಲಿಲ್ಲ. ಇತ್ತಕಡೆ ನನಗೆ ಅವರ ವ್ಯಕ್ತಿತ್ವವನ್ನು ಒಪ್ಪಿಕೊಳ್ಳಲು ನನ್ನ ನಿರೀಕ್ಷೆಗಳು ಅಡ್ಡಿಯಾಗುತಿದ್ದವು. ನಾನು ಅವರಿಗಾಗಿ ಮಾಡಿದರು, ಅದಕ್ಕೆ ಅವರು ಒಂದು ನಿರ್ದಿಷ್ಟ ಬಗೆಯಲ್ಲೇ ಖುಷಿ ವ್ಯಕ್ತಪಡಿಸುತ್ತಾರೆ ಮೊದಲೇ ಅಂದುಕೊಂಡು ಬಿಡುತಿದ್ದೆ. ಅವರು ಅದಕ್ಕೆ ಭಿನ್ನವಾಗಿ ಪ್ರತಿಕ್ರಿಯೆ ನೀಡಿದರೇ, ನಾನು ಬಹಳ ನೊಂದುಕೊಂಡು, ರೇಗಾಡಿ, ಜಗಳವಾಡಿ, ‘ನಿಮಗಾಗಿ ಇಷ್ಟಲ್ಲಾ ಮಾಡುತ್ತೇನೆ ಆದರೆ ನಿಮಗೆ ಏನು ಅನ್ನಿಸಲ್ಲಾ, ನೀವು ನನಗೆ ಖುಷಿ ಪಡಿಸೋದೆ ಇಲ್ಲಾ’ ಎನ್ನುತ್ತಿದ್ದೆ. ಸಿಟ್ಟಿನಲ್ಲಿ ‘ನಿಮ್ಮನ್ನು ಮದುವೆಯಾಗಿ ತಪ್ಪು ಮಾಡಿದೆ, ನನ್ನಕನಸ್ಸಿನ ರಾಜಕುಮಾರ ನೀವಲ್ಲ’ ಎಂದೆಲ್ಲಾ ಅಂದದ್ದು ಇದೆ. ಅವರು ಹೆಚ್ಚಿಗೆ ಮಾತುಬೆಳೆಸುತ್ತಿರಲಿಲ್ಲ, ಆಗ ನನಗೆ ಇನ್ನಷ್ಟು ಸಿಟ್ಟು ಬರೋದು, ನಾನು ಇನ್ನು ಬಾಯಿಗೆ ಬಂದಹಾಗೆ ಮಾತಾಡುತಿದ್ದೆ. ಅವರು ನಂತರ ಮೂರ್ನಾಲ್ಕು ದಿನಗಳ ಕಾಲ ನನ್ನೊಟ್ಟಿಗೆ ಮಾತಾಡುತ್ತಲೇ ಇರಲಿಲ್ಲ, ಆ ದಿನಗಳಲ್ಲಿ ನನಗೇ ಹುಚ್ಚೇ ಹಿಡಿದ ಹಾಗಾಗುತಿತ್ತು. ಆಮೇಲೆ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿ, ‘ನನ್ನ ಮೇಲೆ ಕರುಣೆ ಇಲ್ಲವಾ, ನಾನು ಅನಾಥೆ ನಿಮ್ಮನ್ನು ಬಿಟ್ಟರೇ ನನಗ್ಯಾರು ಗತಿ’ ಎಂದು ಗೋಗರಿದು ಮಾತಾಡಿಸುತ್ತಿದ್ದೆ. ಇದು ನನಗೂ ಅವರಿಗು ಖುಷಿ ಕೊಡುತ್ತಿರಲಿಲ್ಲ, ‘ನಿನ್ನ ಬಗ್ಗೆ ನನಗೆ ಇರಬೇಕಾದದ್ದು ಕರುಣೆ ಅಲ್ಲಾ ಪ್ರೀತಿ’ ಎಂದು ಯಾವಾಗಲು ಹೇಳುತ್ತಿದ್ದರು.
ಒಂದು ದಿನ, ನಾನು ಮನೆಯಲ್ಲಿ ಸುಮ್ಮನಿರುವ ಬದಲು ಏನಾದರೂ ಮಾಡುವುದರ ಬಗ್ಗೆ ಸಲಹೆ ಇತ್ತರು. ಆಗ ನಾನು ಬ್ಯುಸಿಯಾಗಿರುತ್ತೇನೆ, ಗಮನ ಬೇರೆಡೆ ಇದ್ದಾಗ ಜಗಳಗಳು ಕಡಿಮೆಯಾಗಬಹುದು ಎಂದರು. ನನಗೋ ವಿಪರೀತ ಸಿಟ್ಟು ಬಂದಿತು. ‘ಹಾಗೋ ಹೀಗೋ ನನ್ನನ್ನ ಕೆಲಸಕ್ಕೆ ಸೇರಿಸಿ ನಿಮಗಿಷ್ಟ ಬಂದ್ಹಾಗೆ ಇದ್ದು ಬಿಡುವುದು ಎಂದು ತೀರ್ಮಾನಿಸಿದ್ದೀರಾ, ನಿಮ್ಮ ಜೊತೆ ಹೆಚ್ಚೆಚ್ಚು ಸಮಯ ಕಳೀಬೇಕು ಎಂದು ನಾನು ಬಯಸಿದರೇ ನೀವು ನನ್ನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ನಾನು ಇಷ್ಟವಿಲ್ಲವೆಂದರೇ ನನ್ನನ್ನು ಮದುವೆ ಯಾಕಾಗಬೇಕಿತ್ತು? ನನ್ನ ಜೀವನ ಯಾಕೆ ಹಾಳು ಮಾಡಬೇಕಿತ್ತು? ನಾನು ನನ್ನ ಮದುವೆ ನಂತರ ಜೀವನ ಹೇಗೆಲ್ಲ ಇರುತ್ತದೆ ಎಂದುಕೊಂಡಿದ್ದೆ. ಆದರೆ ಮೋಸ, ಎಲ್ಲರು ಮೋಸ ಮಾಡಿಬಿಟ್ಟಿರಿ. ನನ್ನ ಅಪ್ಪ ಅಮ್ಮನನ್ನು ಕಿತ್ತುಕೊಂಡು ದೇವರು ಮೋಸ ಮಾಡಿದ, ಈಗ ಹೆಂಡತಿಯ ಬಗೆಗೆ ಭಾವನೆಗಳೇ ಇಲ್ಲದ ಒಬ್ಬನನ್ನು ಗಂಡನಾಗಿ ಕೊಟ್ಟಿ ಮತ್ತೆ ಮೋಸ ಮಾಡಿಬಿಟ್ಟೆ’ ಎಂದು ಕೂಗಲಾರಂಭಿಸಿದೆ. ಕಡೆಗೆ ಅವರು ಏನು ಮಾತಾಡದೇ ಮೌನವಾಗಿದ್ದದ್ದು ನನ್ನನ್ನು ಕೆರಳಿಸಿ, ‘ನನ್ನನ್ನು ಬರೀ ದೇಹ ಸುಖಕ್ಕಾಗಿ ಮದುವೆಯಾದಿರಿ, ಯಾರಿಗ್ಹೊತ್ತು ಹೊರಗಡೆ ಇನ್ನು ಎಷ್ಟು ಹೆಂಗಸರ ಜೀವನ ಹಾಳುಮಾಡಿದ್ದೀರೋ, ಆ ಡೈರಿಯಲ್ಲಿ ನಿಮ್ಮ ಬಂಡವಾಳಗಳೆಲ್ಲ ಬರೆದಿರುವಿರೇನೊ ಅದಕ್ಕೆ ನನಗೂ ಓದಲು ಬಿಡದೇ ಲಾಕ್ ಮಾಡಿದ್ದೀರ’ ಎಂದೆ. ಅವರ ಕಣ್ಣಲ್ಲಿ ಕೆಂಡದಂತ ಕೋಪ. ರೂಮಿಗೆ ಹೋದವರೇ ಡೈರಿ ತಂದು ನನ್ನ ಮುಖದ ಮೇಲೆ ಎಸೆದು ದಡದಡ ಎಂದು ಮನೆಯಿಂದ ಹೊರನಡೆದರು. ಆಚೆ ಗಾಡಿ ಶುರು ಮಾಡಿದ ಸದ್ದು ಕೇಳಿಸಿತು. ನಾನು, ‘ಇನ್ನೇನು ಹೆಂಡತಿ ಮಾತುಗಳಿಗೆ ಉತ್ತರ ಕೊಡಲಾರದೆ ಮನೆಯಿಂದ ಹೊರನಡೆಯುವುದಷ್ಟೆ ಇವರ ಕೆಲಸ’ ಎಂದುಕೊಂಡು ಅಳಲಾರಂಭಿಸಿದೆ. ‘ನನ್ನ ಜೀವನ ಏನೇನಲ್ಲ ಆಗೋಯ್ತು. ನಾನು ಯಾವ ಕರ್ಮ ಅಂತ ಈ ಶಿಕ್ಷೆ’ ಎಂದು ನೊಂದುಕೊಳ್ಳತೊಡಗಿದೆ.
ಒಂದಷ್ಟೊತ್ತು ಸುಮ್ಮನೆ ಕೂತೆ, ಕೋಪವೆಲ್ಲಾ ತಣ್ಣಗಾಯಿತು. ಬುದ್ದಿ ಸ್ವಲ್ಪ ಯೋಚನೆ ಮಾಡಿತು ಯಾಕ್ಹಾಗಿ ಸಮಸ್ಯೆಗಳಾಗುತ್ತಿವೆ? ಎಂದು. ನಾನು ಅವರ ಡೈರಿಯನ್ನು ತೆಗೆದೆ. ಅವರಿಗೆ, ಅವರ ಡೈರಿಯನ್ನು ಯಾರು ಓದಬಾರದಿತ್ತು. ಅಂತದ್ದೇನಿದೆ ಹೆಂಡತಿಗು ಓದಲು ಕೊಡದಿರುವಂತದ್ದು ಎಂದು ಅದಕ್ಕು ಎಷ್ಟೋ ಭಾರಿ ಜಗಳ ಮಾಡಿದ್ದಿದೆ. ಈಗ ಅದನ್ನು ಓದಲು ತೆಗೆದೆ. ಅವರ ಬಾಲ್ಯದ ಘಟನೆಗಳು, ಅವರು ಪಟ್ಟ ಕಷ್ಟಗಳ ಬಗ್ಗೆಬರೆದಿದ್ದರು. ಓದಿ ಎಂತಹ ಗ್ರೇಟ್ ವ್ಯಕ್ತಿ ಎನಿಸಿತು. ಇವೆಲ್ಲಾ ಯಾಕೆ ನನ್ನ ಬಳಿ ಹೇಳಿಕೊಂಡಿಲ್ಲ ಎನಿಸಿತು. ಮರುಕ್ಷಣವೆ ಹೇಳಿಕೊಳ್ಳಲು ನಾನು ಅವಕಾಶ ಮಾಡೆಕೊಟ್ಟಿಲ್ಲ ಎನಿಸಿತು. ಹೌದು ಅವರು ಅವರ ಬಗ್ಗೆ ಏನೆ ಹೇಳಿಕೊಳ್ಳಲು ಬಂದರೂ, ನಾನು ‘ನಿಮ್ಮದು ಇದ್ದದ್ದೇ, ಮೊದಲು ನನ್ನದು ಕೇಳಿ’ ಎನ್ನುತಿದ್ದೆ. ಆದರೆ ಅವರು  ಎಂದಿಗು ‘ಬರೀ, ನಿನ್ನದೇ ಆಯಿತು ನನ್ನ ವಿಚಾರಗಳನ್ನ ಯಾಕೆ ನೀ ಕೇಳಲ್ಲ’ ಎಂದು ಕೇಳಿರಲಿಲ್ಲ. ತಾಳ್ಮೆಯಿಂದ ನನ್ನ ಮಾತನ್ನು ಆಲಿಸುತ್ತಿದ್ದರು.
ಪುಟಗಳನ್ನು ತಿರುಗಿಸುತ್ತಿದ್ದಂತೆ, ಒಂದು ಫೋಟೊ ಸಿಕ್ಕಿತು, ಅದು ನನ್ನ ಬಾಲ್ಯದ ಫೋಟೊ, ಅದನ್ನು ಅವರು ಸಂಗ್ರಹಿಸಿದ್ದರು. ಹೌದು, ಒಮ್ಮೆ ನನ್ನ ಬಳಿ ಬಂದು ‘ನನ್ನ ಹತ್ತಿರ ಒಂದು ಸುಂದರ ಬಾಲೆಯ ಫೋಟೊವಿದೆ ನೋಡುವೆಯ?’, ಎಂದು ಛೇಡಿಸಿದ್ದರು. ಅಷ್ಟೇ ಸಾಕು ಎಂಬಂತೆ ಫೋಟೊವನ್ನು ನೋಡದೆ ಬಿಸಾಡಿ, ರಂಪಾಟ ಮಾಡಿದ್ದೆ. ಅದು ನನ್ನದೇ ಪೋಟೊ ಎಂದು ತಿಳಿದಿರಲಿಲ್ಲ. ಮುಂದೆ ಓದಿದಾಗ, ‘ನನ್ನ ತಾಯಿ ಸಿಕ್ಕರು’ ಎಂದು ಬರೆದಿದ್ದರು. ನಾನು ಕುತೂಹಲದಿಂದ ಓದಿದೆ, ಅವರು ತಾಯಿ ಎಂದು ಬರೆದಿದ್ದು ನನ್ನ ಬಗ್ಗೆಯೇ, ನಾನು ಪ್ರತಿದಿನಾಲು ಅವರ ಬಗ್ಗೆ ತಪ್ಪುಗಳನ್ನು ಕಂಡುಹಿಡಿದು ಅವರ ಕೆಲಸಗಳನ್ನು ಆಕ್ಷೇಪಿಸುತ್ತಿದ್ದರೇ, ಅವರು ನಾನು ಮಾಡುವ ಕಾಫಿ, ತಿಂಡಿ, ಇನ್ನಿತರ ಕೆಲಸಗಳನ್ನೆ ಸಾದನೆಯೆಂಬಂತೆ ಹೊಗಳಿ ಬರೆದಿದ್ದಾರೆ. ನನಗೇ ಮನಸ್ಸು ಭಾರವಾಗ ತೊಡಗಿತು. ಮುಂದೇ ಒಂದು ಪುಟದಲ್ಲಿ, ‘ಮನೆಯಲ್ಲಿ ಏನೋ ನೆಮದಿಯಿಲ್ಲ, ನನ್ನ ಹೆಂಡತಿಗೆ ಏನೇನೊ ಕನಸ್ಸುಗಳಿವೆ, ಅವನ್ನು ನಾನು ತೀರಿಸ ಬೇಕು, ಆದರೆ ಏನು ಪ್ರಯತ್ನ ಪಟ್ಟರು ಆಕೆಗೆ ಹಿಡಿಸುತ್ತಿಲ’್ಲ ಎಂದು ಬರೆದಿದ್ದಾರೆ. ‘ನಾನು ನಮ್ಮ ಒಳ್ಳೆ ಜೀವನಕ್ಕಾಗಿ ಒಂದಷ್ಟು ಬದಲಾವಣೆಗಳನ್ನು ತಂದುಕೊಳ್ಳಬೇಕು. ಆಕೆಯನ್ನು ಅರ್ಥಮಾಡಿಕೊಳ್ಳಬೇಕು, ಇನ್ಮುಂದೆ ನಾಟಕಗಳು, ಸ್ನೇಹಿತರು ಇವೆಲ್ಲಾ ಸ್ವಲ್ಪ ಕಡಿಮೆ ಮಾಡಿ ಅವಳೊಟ್ಟಿಗೆ ಇರಬೇಕು. ಹೌದು ಇದು ಸ್ವಲ್ಪ ಕಷ್ಟವಾದೀತು, ಆದರೆ ಇದು ನನಗಾಗಿ, ನಮ್ಮ ಜೀವನಕ್ಕಾಗಿ, ನನ್ನ ಹೆಂಡತಿ ಖುಷಿಯಲ್ಲಿ ನನ್ನ ಖುಷಿಯು ಅಡಿಗಿದೆ’ ಎಂದು ಬರೆದಿದ್ದರು.
ಡೈರಿ ಮುಚ್ಚಿಬಿಟ್ಟೆ. ಮುಂದೆ ಓದಲಾಗಲಿಲ್ಲ. ನಾನು ಎಂದಿಗು ಈ ರೀತಿ ಯೋಚಿಸಲೇ ಇಲ್ಲಾ, ಅವರಿಗೆ ನನ್ನ ಬಗೆಗೆ ಯಾವ ನಿರೀಕ್ಷೆಯು ಇರಲಿಲ್ಲ. ಅದಕ್ಕೆ ನಾನು ಅವರಿಗಾಗಿ ಮಾಡಿತ್ತಿದ್ದ ಒಂದು ಕಾಫಿಯು ಸಹ ಅವರಿಗೆ ಖುಷಿಕೊಡುತಿತ್ತು. ಅದರಿಂದಲೇ ನನ್ನಲ್ಲೀ ಯಾವ ದೋಷವು ಕಂಡಿರಲಿಲ್ಲ. ಆದರೆ ನನಗೆ ಎಲ್ಲಾದರಲ್ಲು ನಿರೀಕ್ಷೆ, ನಾನು ಒಂದು ಅಡುಗೆ ಮಾಡಿದರೂ, ಅದಕ್ಕೆ ಅವರು ಹೀಗೆ ಹೊಗಳ ಬೇಕು ಎಂದು ನಿರೀಕ್ಷಿಸುತ್ತಿದ್ದೆ. ಅವರು ನನ್ನ ಗುರುತಿಸಲಿ ಎಂದೇ ಕೆಲಸಗಳನ್ನು ಮಾಡುತ್ತಿದ್ದೆ. ನನ್ನ ಉದ್ದೇಶವೆಲ್ಲಾ, ಅವರು ನನ್ನ ಶ್ರಮವನ್ನು ಮೆಚ್ಚುವುದರಲ್ಲೇ ಇರುತಿತ್ತು. ಇದರಿಂದ ನಾನು ಮಾಡುವ ಕೆಲಸವನ್ನು ರಸ್ವಾದಿಸಲಾಗುತ್ತಲೇ ಇರಲಿಲ್ಲ, ಹೋಗಲಿ ಅವರು ನನ್ನ ಶ್ರಮವನ್ನು ಗುರುತಿಸಿ ಮೆಚ್ಚಿದ್ದರೂ ನನಗದು ಆನಂದ ಕೊಡುತ್ತಿರಲಿಲ್ಲ, ಯಾಕೆಂದರೇ ನಾನು ಮೊದಲೇ ನನ್ನ ಶ್ರಮಕ್ಕೆ ಹಾಡಿ, ಹೊಗಳಿ, ಮುದ್ದಾಡಿ ನನ್ನನ್ನು ಮೆಚ್ಚುತ್ತಾರೆ ಎಂದು ಒಂದು ಚೌಕಟ್ಟಿನ ನಿರೀಕ್ಷೆ ಇಟ್ಟುಕೊಳ್ಳುತ್ತಿದ್ದೆ. ಆದರೆ ಅವರು ನಾನು ನಿರೀಕ್ಷಿಸಿದಂತೆ ನನ್ನನ್ನು ಹೊಗಳದೆ, ಪ್ರಾಮಾಣಿಕವಾಗಿ ಸಾಧಾರಣವಾಗಿ ಹೊಗಳುತ್ತಿದ್ದರು. ಅಷ್ಟೇ ಸಾಕು ಎಂಬಂತೆ ಅದನ್ನೆ ಇಟ್ಟುಕೊಂಡು ಜಗಳವಾಡುತ್ತಿದ್ದೆ. ನಾನು ಮಾತು ಮಾತಿಗೆ ಯಾವಾಗಲು ನಿಮಗಾಗಿ ಏನೆಲ್ಲಾ ಮಾಡಿದ್ದೇನೆ, ನನಗಾಗಿ ಏನು ಮಾಡಿದ್ದೀರಿ ಎನ್ನುತ್ತಿದ್ದೆ? ವಾಸ್ತವವಾಗಿ ಅವರಿಗಾಗಿ ನಾನೇನು ಮಾಡಿರಲಿಲ್ಲ, ನಾನೆಲ್ಲ ನನ್ನ ಸಂತೋಷಕ್ಕೆ, ನನ್ನ ಮನಸ್ಸಿಗೆ ಖುಷಿ ಆಗಲಿ, ಎಂದೇ ಮಾಡುತ್ತಿದ್ದದ್ದು. ಕಡೆಗೆ ನನ್ನ ನಿರೀಕ್ಷೆಗಳಿಂದ ಬೇಸರ ಅನುಭವಿಸುತ್ತಿದ್ದದ್ದು ನಾನೆ, ಆದರೆ ಅದರ ಹೊಣೆ ಮಾತ್ರ ನನ್ನವರ ಮೇಲೆ ಹಾಕುತ್ತಿದ್ದೆ. ಕಣ್ಣಲ್ಲಿ ಕಂಬನಿಗಳು ಜಾರಿದವು, ಫೋನ್ ರಿಂಗಾಗಿ ಬೆಚ್ಚಿದೆ, ಸಮಯ ನೋಡಿದೆ ರಾತ್ರಿ 11 ಗಂಟೆಯಾಗಿದೆ, ನನ್ನವರು ಇನ್ನು ಬಂದಿರಲಿಲ್ಲ. ಅವರದ್ದೇ ಫೋನ್ ಇರಬಹುದೆಂದು ನೋಡಿದೆ, ಅವರ ಫೋನಿಂದಲೇ ಕರೆಬಂದಿತ್ತು. ಆದರೆ ಮಾತಾಡಿದವರು ಮಾತ್ರ ಬೇರೆ ಯಾರೋ, ನನ್ನವರಿಗೆ ಆಕ್ಸಿಡೆಂಟ್ ಆಗಿದೆಯೆಂದು, ಸಿರಿಯಾಸ್ಸಾಗಿದ್ದಾರೆಂದು ತಿಳಿಸಿದರು.
ಒಂದುಕ್ಷಣ ಆಕಾಶವೇ ಕಳಚಿದಂತಾಗಿತು. ಎದ್ನೋ ಬಿದ್ನೋ ಎಂದು ಆಸ್ಪತ್ರೆಗೆ ದವಡಾಯಿಸಿದೆ. ನನ್ನ ಗಂಡ ಐ.ಸಿ.ಯು ನಲ್ಲಿದ್ದರು. ಅವರ ಸ್ನೇಹಿತರೆಲ್ಲರು ಬಂದಿದ್ದರು. ಅವರ ಮೆದುಳಿಗೆ ತೀವ್ರ ಪೆಟ್ಟಾಗಿರುವುದರಿಂದ ಉಳಿಯುವುದು ಕಷ್ಟ ಎಂದರು, ನನಗೆ ಗಾಬರಿ, ಜೊತೆಗೆ ಆಸ್ಪತ್ರೆಗೆ ಬರುವ ಅವಸರದೀ, ಬರಿಗೈಯಲ್ಲೀ ಬಂದಿದ್ದೆ. ಆಗ ಆಸ್ಪತ್ತರೆಗೆ ಹಣ ಪಾವತಿಸಲು ಮುಂದಾಗಿದ್ದೆ ಅವರ ಸ್ನೇಹಿತರು. ಪೊಲೀಸ್ ಪ್ರಶ್ನೆಗಳು, ಆಸ್ಪತ್ರೆ ವಿಧಾನಗಳು ಯಾವುದು ನನ್ನ ಬಳಿ ಬಾರದ ಹಾಗೆ ಎಲ್ಲಾ ಅವರೇ ನೋಡಿಕೊಂಡರು. ‘ಅತ್ತಿಗೆ ನಾವಿದ್ದೇವೆ, ಹೆದರಬೇಡಿ’ ಎಂದರು. ನನಗೆ ಅಳು ಉಮ್ಮಳಿಸಿ ಬಂತು. ಇಂತಹವರನ್ನ ನನ್ನವರಿಂದ ದೂರಮಾಡಲು ಯತ್ನಿಸಿದ್ದು ಎಂದು ಬೇಸರವಾಯಿತು. ಡಾಕ್ಟರ್ ಒಳಗೆ ಕರೆದು, ‘ಸಾರಿ ನಿಮ್ಮ ಗಂಡ ಕೋಮದಲ್ಲಿದ್ದಾರೆ’ ಎಂದಾಗ ನನಗೇ ಯಾರೋ ನನ್ನ ಕರುಳು ಹಿಸುಕಿದಂತ ಅನುಭವ. ನಾನು ಇಲ್ಲಾ ಸುಳ್ಳು, ಇದನ್ನು ನಂಬುವುದಿಲ್ಲ, ನನಗೆ ಅವರು ಬೇಕು ಎಂದು ಬೊಬ್ಬೆ ಇಡಲು ಶುರುಮಾಡಿದೆ.
ನಂತರ ಅಲ್ಲಿಂದ ಅವರ ಸ್ನೇಹಿತರು ಹೊರಗೆ ಕರೆದುಕೊಂಡು ಬಂದು, ‘ಅತ್ತಿಗೆ ಈಗ ಧೈರ್ಯವಾಗಿರಬೇಕು ಅವನಿಗೆ ಏನು ಆಗುವುದಿಲ್ಲ. ನಂಬಿಕೆ ಕಳೆದುಕೊಳ್ಳ ಬೇಡಿ’ ಎಂದರು. ನನ್ನ ಕಲ್ಪನೆಯ ರಾಜಕುಮಾರ, ಕಲ್ಪನೆಗು ಮೀರಿ ದೊಡ್ಡ ವ್ಯಕ್ತಿಯಾಗಿದ್ದ. ಆದ್ದರಿಂದಲೇ ಅವನ ಸಂಪಾದನೆ ನನಗೆ ಆಸ್ಪತ್ರೆಯಲ್ಲಿ ತಿಳಿಯಿತು. ಪ್ರಿತಿದಿನ ಏನಿಲ್ಲ ಅಂದರೂ 15 ಜನ ಅವರÀನ್ನು ನೋಡಲು ಬರುತ್ತಿದ್ದರು. ಅವರನ್ನು ನೋಡಿಕೊಳ್ಳುವುದನ್ನು ಬಿಟ್ಟರೇ, ಹಣಕ್ಕಾಗಲಿ, ಆಸ್ಪತ್ರೆಯ ತಾಪತ್ರಯಗಳಾಗಲೀ ನನ್ನ ವರೆಗು ಬಾರದಂತೆ ಅವರ ಸ್ನೇಹಿತರು ಗಮನಿಸಿಕೊಂಡಿದ್ದರು. ನಿರೀಕ್ಷೆಯ ಕಲ್ಪನೆಗಳಲಿದ್ದ ನನಗೆ, ವಾಸ್ತವವಾಗಿ ನನ್ನ ಗಂಡನ ಬಗ್ಗೆ ಏನು ಗೊತ್ತಿರಲಿಲ್ಲ. ಅವರ ಬ್ಯಾಂಕ್ ವಿವರಗಳು, ಶೇರ್ ವಹಿವಾಟುಗಳು ಏನು ತಿಳಿದಿರಲಿಲ್ಲ. ಅವರು ಇವೆಲ್ಲದರ ಬಗ್ಗೆ ಹೇಳಲು ಬಂದಾಗ, ‘ನನ್ನ ಪ್ರಪಂಚ ದುಡ್ಡಿಗೆ ಸೀಮಿತವಾಗಿಲ’್ಲ ಎಂದು ಹಂಗಿಸುತ್ತಿದ್ದೆ. ಅವರ ಸ್ನೇಹಿತರಿಲ್ಲದಿದ್ದರೇ ನಾನು ಏನಾಗಿತ್ತಿದ್ದೆನೋ ನಾ ಅರಿಯೇ. 
ಇವತ್ತಿಗೆ ನನ್ನ ಮನಸ್ಸು ನನ್ನ ಜೀವನ ಹೀಗಾಯಿತಲ್ಲ ಎಂದು ಕೊರಗಲಾರಂಭಿಸಿದರೇ, ನಾನು ಆ ಹೊಣೆಯನ್ನ ನನ್ನ ಮೇಲೆ ಹಾಕಿಕೊಳ್ಳುವೆ. ಅವತ್ತು ಸ್ವಲ್ಪ ಶಾಂತಿ ಇಂದ ಇದ್ದಿದ್ದರೇ, ಅವರು ಮನೆಯಿಂದ ಹೊರನಡೆಯುತ್ತಿರಲಿಲ್ಲ, ಈ ಪರಸ್ಥಿತಿ ಬರುತ್ತಲೂ ಇರಲಿಲ್ಲ. ಮದುವೆ ಮುಗಿದರೇ ಎಲ್ಲಾ ಮುಗಿಯಿತು. ಗಂಡ ಎಲ್ಲವನ್ನು ನೋಡಿಕೊಳ್ಳುತ್ತಾನೆ ಎಂಬ ನನ್ನ ಕಲ್ಪನೆಯನ್ನು ಈ ಘಟನೆ ನುಚ್ಚು ನೂರಾಗಿಸಿದೆ. ಮದುವೆ ಹೊಸ ಆರಂಭ. ಇಬ್ಬರು ವಿವಿಧ ಆಲೋಚನೆಯ, ವಿವಿಧ ವ್ಯಕ್ತಿತ್ವಗಳ ಮನುಷ್ಯರ ಸಮ್ಮಿಲನ ಮದುವೆ. ಒಬ್ಬ ವ್ಯಕ್ತಿಯನ್ನು, ಅವನ ಒಳ್ಳೆಗುಣಗಳು ಹಾಗೆ ನ್ಯೂನತೆಗಳ ಸಮೇತ ಒಪ್ಪಿಕೊಳ್ಳುವುದೇ ನಿಜವಾದ ಪ್ರೀತಿ ಅಂತ ನನ್ನ ಗಂಡನಿಂದ ಕಲಿತಿದ್ದೇನೆ. ನನ್ನ ಚೌಕಟ್ಟಿನ ನಿರೀಕ್ಷೆಗಳಿಗೆ ಸ್ಪಂದಿಸಿದರೇ ಮಾತ್ರ ಅವರು ನನ್ನನ್ನು ಪ್ರೀತಿಸುತ್ತಾರೆ ಎಂದರ್ಥವಲ್ಲ ಎಂದು ನನಗೆ ಚೆನ್ನಾಗಿ ಅರ್ಥವಾಗಿದೆ. ಮಾತು ಮನೆಕೆಡಿಸಿತು ಎಂದು ನನ್ನಂತಹವರನ್ನು ಕಂಡೇ ಹಿರಿಯರು ಹೇಳಿದ್ದಾರೆ ಅನಿಸುತ್ತೆ. ಸಿಟ್ಟಲೀ ಕೂಯ್ದುಕೊಂಡ ಮೂಗು, ಸಿಟ್ಟಲೀ ಆಡಿದ ಮಾತು ಎರಡು ಅಪಾಯಕಾರಿ.
ಈಗ ಗಂಡ ಸದಾ ನನ್ನ ಜೊತೆಯಲ್ಲೇ ಇರುತ್ತಾರೆ, ಹೆಚ್ಚು ಸಮಯ ನನ್ನೊಟ್ಟಿಗೆ ಕಳೆಯುತ್ತಾರೆ. ಆದರೆ ಅವರಿಗೆ ಸರಿಯಾಗಿ ಪ್ರಜ್ಞೆ ಇಲ್ಲಾ. ಒಮ್ಮೊಮ್ಮೆ ಬರುತ್ತೆ ಹಾಗೆ ಮತ್ತೆ ಕಣ್ಣುಮುಚ್ಚುತ್ತಾರೆ. ಡಾಕ್ಟರ್ ಒಂದಷ್ಟು ಒಳ್ಳೆಯ ಬೆಳವಣಿಗೆಗಳಿವೆ ಎಂದಿದ್ದಾರೆ. ಒಂದೇ ಒಂದು ಅವಕಾಶ ಆ ದೇವರು ನನಗೆ ಕಲ್ಪಿಸಿದರೇ, ಮತ್ತೆಂದು ಅವರನ್ನು ನಾನು ಬಿಟ್ಟುಕೊಡಲಾರೆ. ಆದರೆ ಅಲ್ಲಿವರೆಗು ನನ್ನ ಒಂಟಿ ವೇದನೆ ನಾನೆ ಅನುಭವಿಸಬೇಕು. ಅನುಭವಿಸುತ್ತೇನೆ. ಸಮಯ, ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿರುವುದಿಲ್ಲ, ಅವರು ಯಾವಾಗಲು ಹೇಳುತಿದ್ದರು ‘ಸಿಕ್ಕ ಸಮಯವೆಲ್ಲಾ ಜಗಳವಾಡಿ ಸಮಯ ಕೊಡುತ್ತಿಲ್ಲ ಎನ್ನಬೇಡ’ ಎಂದು. ಹೌದು ಎಷ್ಟು ಸಮಯ ನಾನು ಕೈಯ್ಯಾರೆ ಹಾಳುಮಾಡಿಕೊಂಡೆ. ಆದರೆ ಈಗ ಸಮಯವಿದೆ ಆದರು ಏನುಮಾಡಲಾಗುತ್ತಿಲ್ಲ. ಈ ಹಿಂದೆ ನಾನು ‘ತುಂತುರು ಅಲ್ಲಿ ನೀರ ಹಾಡು..’ಎಂದು ಹಡುತ್ತಿದ್ದಾಗ ಅವರು ನನ್ನನ್ನು ನಾನಂದುಕೊಂಡಂತೆ ಹೊಗಳುತ್ತಿಲ್ಲ ಎಂದು ಬೇಸರಿಸಿಕೊಳ್ಳುತ್ತಿದ್ದೆ. ಆದರೆ ಈಗ ಬೇಸರಿಸಿಕೊಳ್ಳಲ, ಸುಮ್ಮನೆ ಕೇಳಿ ಸಾಕು ಎಂದರೂ ಅವರು ಹಾಡು ಕೇಳುತ್ತಿಲ್ಲ. ಇಷ್ಟೇ ಬದುಕು. ಒಂದು ದಾಂಪದ್ಯದಲ್ಲಿ ಸಂವಹನ, ನಂಬಿಕೆ, ಬದ್ದತೆ, ಗೌರವ ತುಂಬ ಮುಖ್ಯ, ಇವೆಲ್ಲಾ ಇದ್ದ ಕಡೆ ಪ್ರೀತಿ ಕಂಡಿತ ಇರುತ್ತದೆ. ಪ್ರೀತಿಯ ಬಗೆಗೆ ನಾವೆ ನಮಗೆ ಬೇಕಾದ Pಲ್ಪನೆಗಳನ್ನು ಇಟ್ಟುಕೊಂಡು ಅದನ್ನೆ ಪ್ರೀತಿ ಎಂದು ನಂಬಿ, ಆ ಪ್ರೀತಿ ನಮ್ಮವರು ಕೊಡುತ್ತಿಲ್ಲ ಎಂದು ನೋವು ಪಟ್ಟರೇ ಏನು ಪ್ರಯೋಜನ? ಈಗ ನನ್ನ ಬದುಕಿಗೆ ಅವರ ಚೇತರಿಸಿಕೊಳ್ಳುತ್ತಾರೆ ಎಂಬ ನಂಬಿಕೆಯೆ ಆಸರೆ. ಆ ನಂಬಿಕೆಯಲ್ಲೇ ನನ್ನದಿನಗಳನ್ನು ಕಳೆಯುತ್ತಿದ್ದೇನೆ.  

No comments:

Post a Comment