CAN YOU SAY NO?
‘ಇಲ್ಲಾ’, ಎರಡಕ್ಷರದ ಈ ಪದ ನನ್ನ ಜೀವನದ ದಿಕ್ಕನ್ನೆ ಬದಲಿಸುತ್ತೆ ಎಂದು ನಾನು ಎಂದಿಗು ಎಣಿಸಿರಲಿಲ್ಲ. ಈ ಪದವನ್ನು ಬಳಸುವಷ್ಟರಲ್ಲಿ ಸಮಯ ಬಹಳ ಮುಂದುವರೆದಿತ್ತು. ಈ ಪದವನ್ನ ಬಳಸೋದು ಎಷ್ಟು ಕಷ್ಟವಾಯ್ತು ಗೊತ್ತ?, ಇದೇನು ಇಲ್ಲಾ ಅನ್ನೋಕೆ ಅಷ್ಟು ಕಷ್ಟನಾ ಎಂದು ಆಶ್ಚರ್ಯವಾಗಬಹುದು, ಆದರೆ ಇಲ್ಲಾ ಎಂಬ ಈ ಪದ ನಾನು ಬಳಸಬಹುದು ಎಂದು ನಾ ಅರಿಯೋಕೆ ಸಾಕಷ್ಟು ವರ್ಷಗಳು ಹಿಡಿದವು. ಈ ನನ್ನ ಅಂತರಾಳವನ್ನ ಇಂದು ಬಿಚ್ಚಿಡುತ್ತಿದ್ದೇನೆ.
ಮಧ್ಯಮವರ್ಗದ ಕುಟುಂಬದ ಹೆಣ್ಣುಮಗಳು ನಾನು. ನಮ್ಮದು ಕೂಡು ಕುಟುಂಬ. ಅಪ್ಪ, ಅಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಅಜ್ಜಿ, ತಾತ, ಚಿಕ್ಕಪ್ಪನ ಮಕ್ಕಳು ಎಲ್ಲರು ಒಟ್ಟಿಗೆ ಇದ್ದೆವು. ನಮ್ಮ ಮನೆಯ ಪೂರ್ತಿ ನಿರ್ಧಾರಗಳನ್ನ ನನ್ನ ಅಪ್ಪನೇ ತೆಗೆದುಕೊಳ್ಳುತಿದ್ದರು. ಅವರ ವಿರುದ್ಧ ಯಾರು ಚಕಾರ ಎತ್ತುತಿರಲಿಲ್ಲ. ಎಲ್ಲರು ಅವರು ಹೇಳಿದಂತೆಯೆ ನಡೆದು ಕೊಳ್ಳುತ್ತಿದ್ದರು. ನನಗಾಗ 7 ವರ್ಷ, ನಾನು ನಮ್ಮ ಮನೆಯವರೆಲ್ಲರು ಯುಗಾದಿ ಹಬ್ಬಕ್ಕಾಗಿ ಬಟ್ಟೆಕೊಳ್ಳಲು ಹೋಗಿದ್ದೆವು. ನನಗೆ ಮತ್ತು ನನ್ನ ಚಿಕ್ಕಪ್ಪನ ಮಗಳಿಗೆ ಬಟ್ಟೆ ಆರಿಸುತಿದ್ದಾಗ, ನಾನು ಒಂದು ಕಂದು ಬಣ್ಣದ ನಿಕ್ಕರ್ ಮತ್ತೆ ಚರ್ಮದ ಬಣ್ಣದ ಒಂದು ಶರ್ಟ್‍ನ್ನು ಆಯ್ದು ಇದೇ ಬೇಕು ಎಂದು ಅಮ್ಮನ ಬಳಿ ಕೊಂಡೊಯ್ಯುವಾಗ ನನ್ನ ಚಿಕ್ಕಪ್ಪನ ಮಗಳು ಅದನ್ನು ಕಂಡು ನಕ್ಕು, ನನ್ನ ಕೈಯಿಂದ ಕಸಿದು ಎಲ್ಲರ ಬಳಿ ಹೋಗಿ, ‘ನೋಡಿ ಅಕ್ಕ ಎಂತ ಬಟ್ಟೆ ಆರಿಸಿದ್ದಾ¼’É ಎಂದು ತೋರಿಸಿ ನನ್ನ ಮೇಲೆ ಹಾಸ್ಯ ಮಾಡಿದಳು. ಹಬ್ಬಕ್ಕೆ ಯಾರಾದರು ಈತರಹ ಬಟ್ಟೆ ಹಾಕ್ತಾರ? ಎಂದು ಹುಚ್ಚಾಪಟ್ಟೆ ನಕ್ಕಿದಲ್ಲದೆ ನನಗೆ ಒಳ್ಳೆ ಟೇಸ್ಟ್ ಇಲ್ಲ ಎಂದು ಛೇಡಿಸಿದಳು. ಅವಳೊಡನೆ ಅಮ್ಮ, ಚಿಕ್ಕಮ್ಮ ಎಲ್ಲರು ನಕ್ಕು, ಸಾಲದಕ್ಕೆ ಅಪ್ಪ, ‘ನಾವು ದೊಡ್ಡವರು ಏನಕ್ಕೆ ಇರುವುದು ನಮಗೆ ಗೊತ್ತು ನಿಮಗ್ಯಾವುದು ಇಷ್ಟ ಯಾವುದು ಇಷ್ಟವಿಲ್ಲ’ ಎಂದು ಹೇಳಿ ನಾನು ಹಾಕಬೇಕೆಂದಿರುವ ಬಟ್ಟೆಯನ್ನ ಅವರೇ ಆಯ್ದರು. ಅವರು ಆಯ್ದ ಫ್ರಾಕ್ ನನಗೆ ಸ್ವಲ್ಪವು ಹಿಡಿಸಿರಲಿಲ್ಲ. ಆದರೆ ನನಗೆ ಟೇಸ್ಟ್ ಇಲ್ಲದ ಕಾರಣ ಅವರ ಆಯ್ಕೆಯೆ ನನಗೆ ಸರಿ ಎಂದು ನಂಬಿದೆ. ಅವರು ಆಯ್ದ ಬಟ್ಟೆಯೆ ನನಗೆ ಇಷ್ಟವೇನೊ ಎಂದು ನಂಬಿದೆ. ಆದರು ಮನಸ್ಸಲ್ಲಿ ಏನೊ ಒಂದು ರೀತಿಯ ಹಿಂಸೆ. ಹಾ! ನಾನು ನಿಕ್ಕರ್ ಆಯ್ಧ ಹಾಸ್ಯ ಅಲ್ಲಿಯೇ ನಿಲ್ಲಲಿಲ್ಲ, ಮನೆಗೆ ಬಂದು ಗೆಳೆಯರ ಬಳಿ ತಾತನ ಬಳಿ ಎಲ್ಲಾ ಹೇಳಿ, ಸಾಲದಕ್ಕೆ ನಮ್ಮ ಅಮ್ಮ, ಚಿಕ್ಕಮ್ಮ ನನಗೆ ಇನ್ನು ಬುದ್ದಿ ಸಾಲದು, ನನ್ನ ತಂಗಿಗೆ ಇರುವ ಟೇಸ್ಟ್ ನನಗಿಲ್ಲವೆಂದು ಮಾತಾಡಿಕೊಂಡದ್ದು ಆಯ್ತು. ಅಲ್ಲಿಗೆ ನಾನು ನನ್ನ ಆಯ್ಕೆಗಳು ಟೇಸ್ಟ್‍ಲೆಸ್ ಇರಬಹುದು ಎಂದು ನಂಬಲು ಶುರುಮಾಡಿದೆ. ಹಾಗೆ ಸದ್ದಿಲ್ಲದೆ ನನ್ನ ಇಷ್ಟಗಳನ್ನು ಬಹಿರಂಗ ಪಡಿಸಲು ಒಂದು ತೆರನಾದ ಭಯ ನನ್ನನ್ನು ಆವರಿಸಿತು. ಮನೆಯಲ್ಲಿ ಎಲ್ಲರು ಸರಿ ಎಂದಿದಕ್ಕೆ ಇಷ್ಟವೋ ಕಷ್ಟವೋ ತಲೆತೂಗಿಸುತಿದ್ದೆ.
ಹೀಗೊಮ್ಮೆ ಮನೆಯಲ್ಲಿ ನೆಂಟರಿಷ್ಟರು ಯಾರೊ ಬಂದಿದ್ದರು, ಅವರು ನನಗು ನನ್ನ ಚಿಕ್ಕಪ್ಪನ ಮಗಳಿಗು ದೊಡ್ಡವರಾದ ಮೇಲೆ ಏನಾಗಬೇಕೆಂದು ಯೋಚಿಸಿದ್ದೀರಿ ಎಂದರು, ನನ್ನ ತಂಗಿ ನಾನು ಡಾಕ್ಟರ್ ಆಗಬೇಕೆಂದಿರುವೆ ಎಂದು ಚುಟುಕಾಗಿ ಹೇಳಿ ಎಲ್ಲರ ಮೆಚ್ಚುಗೆಗೆ ಪಾತ್ರಳಾದಳು. ನನಗೋ ಗಾಬರಿ ನಾನೇನಾದರು ಎಲ್ಲರಿಗು ಹಿಡಿಸದಿದ್ದನ್ನು ಉತ್ತರಿಸಿ ಬಿಟ್ಟರೇ ಎಂಬ ಭಯ, ನಕ್ಕು ಬಿಟ್ಟರೆ ಎಂಬ ಅಳುಕು. ನಾನೇಗಾಬೇಕೆಂದಿರುವೆ ಎಂದು ಆಲೋಚಿಸುವುದಕ್ಕಿಂತ ಇವರೆಲ್ಲರು ಮೆಚ್ಚುವುದೇನು ಎಂದು ಯೋಚಿಸಿ ಪ್ರತಿದಿನ ಅಪ್ಪ, ಚಿಕ್ಕಪ್ಪ ಎಲ್ಲರು ನೋಡುವ ಕೃಷಿ ಕಾರ್ಯಕ್ರಮ ತಲೆಗೆ ಬಂತು ಪಟ್ಟಂತ ನಾನು ರೈತ ಆಗುತ್ತೇನೆ ಎಂದೆ. ಎಲ್ಲರು ಜೋರಾಗಿ ನಗಲು ಆರಂಭಿಸಿಬಿಟ್ಟರು. ನನ್ನ ಅಪ್ಪ ಕಣ್ಣು ಕೆಂಪಾಗಿಸಿ, ‘ನನ್ನ ಮಗಳಿಗೆ ಇನ್ನೂ ಏನು ತಿಳಿಯದು ಅವಳನ್ನ ಇಂಜಿನಿಯರೆ ಮಾಡೋದು ಎಂದು ನಿರ್ಧರಿಸಿಬಿಟ್ಟರು’. ನಾನೊಂತು ನಾನೇನೊ ಮಾಡಬಾರದ್ದು ಮಾಡಿಬಿಟ್ಟೆ ನನಗ್ಯಾಕೆ ಸರಿಯಾಗಿ ಮಾತಾಡೋಕೆ ಬರಲ್ಲ ಎಂದು ನನ್ನನ್ನೆ ಶಪಿಸಲಾರಂಭಿಸಿದೆ. ನನ್ನ ತಂಗಿಯಂತು ಇದನ್ನೇ ಹಿಡಿದು ಒಂದು ವಾರ ನನ್ನನ್ನು ಛೇಡಿಸಿದಳು. ಯಾಕೆ ಹೀಗೆ ನಾನೇನು ತಪ್ಪು ಹೇಳಿದೆ ಅರ್ಥವೇ ಆಗಲಿಲ್ಲ. ಅವತ್ತು ರಾತ್ರಿ ಅಪ್ಪ, ಅಮ್ಮನ ಬಳಿ ಬಂದು ‘ನಿನ್ನ ಮಗಳಿಗೆ ಮಾತಾಡದಿದ್ದರು ಪರ್ವಾಗಿಲ್ಲಾ, ಎಲ್ಲರ ಮುಂದೆ ನನ್ನ ಮಾನ ಕಳೀಬೇಡ ಅಂತ ಬುದ್ದಿ ಹೇಳು’ ಎಂದು ಸಿಡುಕಿದರು. ಅಮ್ಮ ಮಾರನೆ ದಿನ ನನ್ನ ಬಳಿ ಬಂದು ‘ಅಪ್ಪ ಮೆಚ್ಚುವ ಹಾಗೆ ನಡೆದು ಕೊಳ್ಳಬೇಕು, ಅವರು ನಮಗಾಗಿ ದುಡೀತಿದ್ದಾರೆ, ಅವರಿಗೆ ಖುಷಿ ಪಡಿಸಬೇಕು, ಅವರೇನೆ ಮಾಡಿದರು ನಮ್ಮ ಒಳ್ಳೇದಕ್ಕೆ, ಮಗಳಾಗಿ ಅವರು ಹೇಳಿದಂತೆ ನಡೆದುಕೊಳ್ಳುವುದು ನಿನ್ನ ಕರ್ತವ್ಯ, ನಿನಗೇನು ಸರಿ ನಿನಗೇನು ಇಷ್ಟ ಹೆತ್ತವರಾದ ನಮಗೆ ಚೆನ್ನಾಗಿ ಗೊತ್ತು’ ಎಂದು ಮಾರುದ್ದ ಭಾಷಣ ಮಾಡಿದರು. ಆ ಭಾಷಣ ಆ ವಯಸ್ಸಿಗೆ ನನಗೆ ಅಚ್ಚಾಗಿ ಉಳಿಯಿತು. ಅಲ್ಲಿಂದ ನಾನು ಮತ್ತು ನನ್ನ ನಿರ್ಧಾರಗಳು ಎರಡರ ನಡುವೆ ಪೈಪೋಟಿ ನಡೆಯುತ್ತಲೆ ಹೋದವು.
ಮನೆಯಲ್ಲಿ ನಮಗೆ ಯಾವುದಾದರು ಪಠ್ಯೇತರ ತರಗತಿಗಳಿಗೆ ಸೇರಿಸುವುದರ ಬಗ್ಗೆ ಚರ್ಚೆ ನಡೆಯುತಿತ್ತು. ನಾನು ನೃತ್ಯ ತರಗತಿಗಳಿಗೆ ಸೇರುವ ಬಗ್ಗೆ ಯೋಚನೆ ಮಾಡಿದೆ, ಅಪ್ಪ ಯಾವತರಗತಿಗಳಿಗೆ ಸೇರುವಿರಿ ಎಂದು ಕೇಳಿದ ತಕ್ಷಣ ನೃತ್ಯ ತರಗತಿಗಳಿಗೆ ಸೇರಿಸಿ ಎಂದು ಹೇಳಿಬಿಡೋಣ ಎಂದು ಅವರ ಹಾದಿಯನ್ನೆ ಕಾದು ಕುಳಿತಿದ್ದೆ ಆದರೆ ಅದಾಗಲೇ ಅಪ್ಪ ವೀಣೆತರಗತಿಗಳಿಗೆ ನಮ್ಮನ್ನು ಸೇರಿಸಿ ಬಂದಿದ್ದರು. ನನಗೆ ನಿರಾಸೆ ಆಯ್ತು, ಹಾಗೆ ಸಿಟ್ಟು ಬಂದಿತ್ತು. ‘ಇಲ’್ಲ ನನ್ನ ಇಷ್ಟ ಬೇರೆ ಇದೆ ಎಂದು ಹೇಳಲಾಗಲಿಲ್ಲ, ಹಾಗಂತ ಒಲ್ಲದ ಮನಸ್ಸಲ್ಲಿ ಆ ತರಗತಿಗಳನ್ನ ಏಕಗ್ರತೆಯಿಂದ ಕಲಿಯಲು ಸಾಧ್ಯವಾಗುತ್ತಿರಲಿಲ್ಲ. ಪ್ರತಿ ಭಾರಿ ತರಗತಿಗಳಿಗೆ ತೆರಳುವಾಗ ಮನಸ್ಸಲ್ಲಿ ತೀವ್ರ ಪೈಪೋಟಿ ಶುರುವಾಗುತಿತ್ತು. ಒಂದು ಕಡೆ ನನ್ನ ಮನಸ್ಸು ಇದು ನಿನಗಿಷ್ಟವಿಲ್ಲವೆಂದರೇ, ಮತ್ತೊಂದು ಮನಸ್ಸು ಅಪ್ಪ ಎಲ್ಲಾ ಮಾಡೋದು ನಿನ್ನ ಒಳ್ಳೇದಕ್ಕೆ ಎಂದು ಹೇಳುತಿತ್ತು. ಒಂದು ಕಡೆ ಅಪ್ಪನ ಮೇಲೆ ಸಿಟ್ಟು ಬರುತಿತ್ತು. ಮತ್ತೊಂದು ಕಡೆ ಅಪ್ಪನ ಮೇಲೆ ಕೋಪ ಮಾಡುಕೊಳ್ಳುತಿದ್ದೇನೆ ಎಂದು ನನ್ನ ಮೇಲೆ ಸಿಟ್ಟು ಹಾಗು ಗಿಲ್ಟ್ ಕಾಡುತಿತ್ತು. ಇಷ್ಟಾಗಿ ನನ್ನ ವೀಣೆ ತರಗತಿಗಳಲ್ಲಿ ನನ್ನ ಗಮನ ಬೇರೆ ಎಲ್ಲೋ ಇರುತ್ತೆ ಎಂದು ಬೈಗುಳಗಳನ್ನು ತಿನ್ನುತ್ತಿದ್ದೆ. ಅದು ಅಪ್ಪನ ಕಿವಿ ವರೆಗು ಬಂದು ತಲುಪಲು ಹೆಚ್ಚು ಸಮಯ ಹಿಡಿಯಲಿಲ್ಲ. ‘ಈಗಿನ ಕಾಲದ ಮಕ್ಕಳಿಗೆ ಅದೇನು ಬಂದಿದೆಯೋ, ನಾವು ಸಾಲ ಸೂಲ ಮಾಡಿ ಹೊಟ್ಟೆ ಬಟ್ಟೆ ಕಟ್ಟಿ ಇವರಿಗೆ ಏನೇನೊ ಮಾಡುತ್ತೇವೆ ಆದ್ರೆ ಇವರಿಗೆ ಕಲಿಯೋಕೆ ಮಾತ್ರ ಸೋಮಾರಿತನ’ ಎಂದು ನನ್ನ ಗುಣಗಾನ ಮಾಡಿದರು. ಮನಸ್ಸಲ್ಲೇ ಅಪ್ಪನಿಗೆ ಎಷ್ಟೊಂದು ನೋವು ಕೊಡುತ್ತಿದ್ದೇನೆ ಎಂದು ಕೊರಗಲಾರಂಭಿಸಿದೆ. ನಾನು ಸೋಮಾರಿ ಎಂದು ನಂಬಿದೆ, ಅದಕ್ಕೆ ಅಪ್ಪನನ್ನು ಖುಷಿಪಡಿಸಲು ಹೆಚ್ಚೆಚ್ಚು ಪರಿಶ್ರಮ ಹಾಕತೊಡಗಿದೆ, ಆದರು ನನಗೇನೊ ಹಿಂಸೆ, ನನ್ನನ್ನು ತುಂಬ ಬಲವಂತಪಡಿಸುತ್ತಿರುವ ಅನುಭವ. ಅಪ್ಪನನ್ನು ಖುಷಿ ಪಡಿಸುವದು, ಎಲ್ಲರೂ ಒಪ್ಪುವುದನ್ನು ನಾನು ಸಮ್ಮತಿಸುವುದು, ಹಾಗೆ ಮನೆ ಮಗಳಾಗಿ ಹೀಗೆ ನಡೆದುಕೊಳ್ಳಬೇಕೆಂಬುದರ ಸಾಲು ಸಾಲು ಸವಾಲುಗಳ ನಡುವೆ ನಾನು ಯಾರು ನನ್ನ ವ್ಯಕ್ತಿತ್ವ ಏನು, ನನ್ನ ಆಲೋಚನೆಗಳ ಸ್ಪಷ್ಟತೆಗಳು ನನಗೆ ಸಿಗದಾದವು.
ಮುಂದೆ ನಾನು ಶಾಲೆ ಮುಗಿಸಿ ಕಾಲೇಜು ಮೆಟ್ಟಿಲೇರುವ ಸಮಯ ಬಂದಾಗ ಮನೆಯಲ್ಲಿ ನನಗೆ ಯಾವ ಕಾಲೇಜಿಗೆ ಸೇರಿಸಬೇಕು ಹಾಗೆ ಯಾವ ವಿಷಯ ಕೊಡಿಸಬೇಕು ಎನ್ನುವುದರ ಬಗ್ಗೆ ತೀವ್ರ ಚರ್ಚೆ ಏರ್ಪಾಟಾದವು. ನನ್ನ ಮನಸ್ಸು ಕಲಾ ವಿಷಯ ನನಗೆ ಇಷ್ಟ ಅದು ನನ್ನ ಸ್ಟ್ರೆಂತ್ ಎಂದು ಹೇಳುತಿತ್ತು. ಆದರೆ ಅಪ್ಪ ಬಹಳ ರಿಸರ್ಚ್ ಮಾಡಿ ನನಗೇ ಸೈನ್ಸ್ ವಿಷಯಕ್ಕೆ ಸೇರಿಸಿದರು. ಆದರೆ ಆಗಲು ಇಲ್ಲಾ ಇದು ನನಗಿಷ್ಟ ಇಲ್ಲಾ ಎಂದು ಹೇಳಲಾಗಲಿಲ್ಲ. ಅಪ್ಪ ಏನೆಂದುಕೊಳ್ಳುತ್ತಾರೋ ಎಂಬ ಅಳುಕೋ, ಅಥವಾ ನನ್ನ ಆಯ್ಕೆಗೆ ಎಲ್ಲರು ನಕ್ಕು ಬಿಟ್ಟರೇ ಎಂಬ ಭಯವೋ, ಇಲ್ಲಾ ಒಂದು ವೇಳೆ ನಾನು ಕಲಾ ವಿಷಯ ಆಯ್ದು ನಂತರ ಅದರಲ್ಲೇನಾದರು ಕೊಂಚ ಎಡವಿದರೇ ಆಗ ಇವರುಗಳು ನನ್ನನ್ನು ಸುಮ್ಮನೇ ಬಿಡುವರೋ ಎಂಬ ಆತಂಕವೋ ನಾ ಅರಿಯೇ, ಆದರೆ ಒಂದು ಮಾತ್ರ ಅರಿತಿದ್ದೆ ವಿಜ್ಞಾನ ವಿಷಯ ನನಗೆ ಸಂತಸ ಕೊಡುವುದಿಲ್ಲ ಎಂದು. ಮತ್ತದೆ ಬಲವಂತದ ಅನುಭವ, ಮನಸ್ಸಲ್ಲಿ ಗೊಂದಲಗಳು ಹೀಗೆ ಇಲ್ಲೂ ಪೂರ್ತಿ ಗಮನ ಕೊಡದೆ ಎಲ್ಲರಾ ಕೆಂಗಣ್ಣಿಗೆ ಗುರಿಯಾಗಿ ದಡ್ಡಿ, ಸೋಮಾರಿ ಬಿರುದಾಂಕಿತಗಳಿಂದ ಡಿಗ್ರಿ ಮುಗಿಸಿದೆ.
ನಂತರ ಒಂದು ಕೆಲಸಕ್ಕೆ ಸೇರಿದೆ, ಅಲ್ಲಿ ನಾನು ಎಲ್ಲರಿಗು ಪ್ರಿಯಳಾಗಿದ್ದೆ, ಆದರೆ ನನಗೆ ಮಾತ್ರ ಎಲ್ಲರ ಮೇಲು ದ್ವೇಷ, ಕಾರಣ ಇಷ್ಟೆ, ನಾನು ಎಲ್ಲಾದಕ್ಕು ಸುಮ್ಮನಿರುವ ಕಾರಣ ನಾನು ಎಲ್ಲಾದಕ್ಕು ಸಮ್ಮತಿಸುತ್ತೇನೆ ಎಂದುಕೊಂಡಿದ್ದರು. ಅಂದರೇ ನನಗೇ ಇಲ್ಲಾ ಎನ್ನುವುದು ಕಷ್ಟವಾದ ಕಾರಣ, ಯಾರಾದರು ಅವರ ಕೆಲಸ ನನಗೆ ಮಾಡಿ ಎಂದರೇ, ಬಾಸ್ ಬೇಡದಿರುವ ಹೊರೆ ನನಗೆ ಹಾಕಿದರೇ, ರಜಾ ಕೊಡಲ್ಲ ಎಂದರೆ, ನಾನು ಯಾವುದಕ್ಕು ಇಲ್ಲಾ ಎನ್ನಾಲಾಗುತ್ತಿರಲಿಲ್ಲಾ, ಇದನ್ನೇ ಬಂಡವಾಳ ಮಾಡಿಕೊಂಡು ಎಲ್ಲರೂ ನನಗೆ ಅಧಿಕಾ ಒತ್ತಡ ಕೊಡುತ್ತಿದ್ದರು. ಬರುಬರುತ್ತಾ ನನ್ನ ಬಗೆಗಿನ ನಿರ್ಧಾರಗಳನ್ನ ನನ್ನನ್ನು ಕೇಳದೆ ತೆಗೆದುಕೊಳ್ಳುತ್ತಿದ್ದರು. ನಾನು ಬೇರೆ ದಾರಿ ಕಾಣದೆ ನರಳುತ್ತಾ, ಕೊರಗುತ್ತಾ ಎಲ್ಲಾ ಮಾಡುತ್ತಿದ್ದೆ. ಹೀಗೆ ಸಾಗಿದ್ದ ನನ್ನ ಜೀವನದಲ್ಲಿ ಮದುವೆಯ ವಿಷಯ ಬರಸಿಡಿಲಿನಂತೆ ಎರಗಿತ್ತು.
ಮನೆಯಲ್ಲಿ ಒಂದು ದಿನ ಅಪ್ಪ, ಏಕಾಏಕಿ ಒಂದು ಹುಡುಗನ ಫೋಟೊ ಹಿಡಿದು, ಅವನು ರೂಪವಂತ, ಗುಣವಂತ, ಒಳ್ಳೆ ಕೆಲಸದಲ್ಲಿದ್ದಾನೆ ಎಂದೆಲ್ಲಾ ಹೇಳಿ ಇವನೇ ನಿನ್ನ ಗಂಡ ಎಂದು ನಾವು ಮನೆಯವರೆಲ್ಲಾ ನಿರ್ಧರಿಸಿ ಬಿಟ್ಟಿದ್ದೇವೆ ಎಂದಾಗ ನನಗೇ ನಂಬ¯ಸಾಧ್ಯವಾಯಿತು. ಹುಡುಗ ನಮ್ಮ ಮನೆತನಕ್ಕೆ ಹೇಳಿ ಮಾಡಿಸಿದವನು, ನೀನು ಒಪ್ಪಿ ಬಿಟ್ಟರೇ ನಾವು ಮನೆಯವರೆಲ್ಲರು ನಿಶ್ಛಿಂತೆಯಿಂದ ಇರುತ್ತೇವೆ ಎಂದರು. ಆದರೆ ಮನಸ್ಸು ಇನ್ನು ಮದುವೆಗೆ ತಯಾರಿರಲಿಲ್ಲ, ನನಗೆ ಹುಡುಗ ಇಷ್ಟ ಇರಲಿಲ್ಲ, ಮನಸ್ಸು ‘ಇಲ್ಲಾ’ ನನಗೆ ಯೋಚನೆ ಮಾಡಲು ಸಮಯ ಬೇಕು ಎಂದು ಕೇಳು ಎನ್ನುತ್ತಿದೆ, ಆದರೆ ಮತ್ತೊಂದು ಮನಸ್ಸು ಹೇಗೆ ಹೇಳಲಿ, ಏನಾದರು ಅಂದುಕೊಂಡರೇ ಎಂದು ಯೋಚಿಸುತ್ತಿರುವಾಗಲೇ, ನನ್ನ ಮೌನವನ್ನು ಸಮ್ಮತಿ ಎಂದು ಗ್ರಹಿಸಿ ಮುಂದಿನ ಮಾತುಕತೆ ನಡೆಸೇ ಬಿಟ್ಟರು. ಮದುವೆಯು ನಡೆದೇ ಹೋಯಿತು. ಅಸ್ಪಷ್ಟತೇ, ಗೊಂದಲಗಳ ನಡುವೆಯೇ ನನ್ನ ಜೀವನದ ದೊಡ್ಡ ಗಟ್ಟ ತಲುಪಿದ್ದೆ ನಾನು.
ಮದುವೆಯ ಕನಸು ಕಾಣದ ನಾನು, ಹೆಂಡತಿಯ ಬಗ್ಗೆ ಅತೀವ ಕಲ್ಪನೆಗಳನ್ನು ಕಂಡಿದ್ದವರ ಪತ್ನಿಯಾಗಿದ್ದೆ. ಈ ಗೊತ್ತಿಲ್ಲದಿರುವ ವ್ಯಕ್ತಿ ಮೇಲೆ ನನಗೆ ಅತೀವ ಸಿಟ್ಟು, ಅವರು ಏನು ಮಾಡಿದರು ಹಿಂಸೆ, ಹೀಗಿರುವಾಗ ನನ್ನ ಗಂಡ ನಮಗಾಗಿ ಹನಿಮೂನ್ ಪ್ಯಾಕೇಜ್ ಬುಕ್ ಮಾಡಿದ್ದರು. ಇನ್ನು ಮದುವೆಯನ್ನೇ ಒಪ್ಪದ ನಾನು ಪ್ರೀತಿ, ಪ್ರಣಯಗಳಿಗಂತೂ ನನ್ನ ದೇಹ ಮನಸ್ಸು ಎರಡು ಸಜ್ಜಾಗಿರಲಿಲ್ಲ. ಅವರು ಒಂದು ದಿನ ಬಂದು ನನ್ನನ್ನು ಅವರೆಡೆಗೆ ಬರೆಸೆಳೆದು, ಅಪ್ಪಿ ನಾವು ನಾಳೆ ಹನಿಮೂನ್‍ಗೆ ತೆರಳುತಿದ್ದೇವೆ ಎಂದು ಹೇಳಿ ನನ್ನ ಕೆನ್ನೆಗೆ ಮುತ್ತಿಡಲು ಮುಂದಾದಾಗ, ನನಗೇ ಗೊತ್ತಿಲ್ಲದ ಒಂದು ರೋಷ, ಆಕ್ರೋಷ, ಎಲ್ಲವನ್ನು ಮನಸ್ಸು ಸಹಿಸಿತ್ತು ಯಾರಿಗು ತಿಳಿಯುತ್ತಿರಲಿಲ್ಲ, ಆದರೆ ದೇಹ ಹಾಗಲ್ಲ ತನ್ನ ಅಸಹನೆಯನ್ನ ಹೊರಹಾಕೆಬಿಟ್ಟಿತು. ಅವರನ್ನು ಜೋರಾಗಿ ತಳ್ಳಿ, ಇಲ್ಲಾ ಇದು ನನಗೆ ಇಷ್ಟವಿಲ್ಲ, ನನ್ನನ್ನು ಮುಟ್ಟ ಬೇಡಿ ಎಂದು ಬಿಟ್ಟೆ. ಇದೇ ಮೊದಲ ಭಾರಿ ನನ್ನ ಅಭಿಪ್ರಾಯ ಮಾತಾಗಿ ಹೊರಬರುವ ಧೈರ್ಯ ಮಾಡಿದ್ದು. ಇದೇ ಮೊದಲ ಭಾರಿ ನಾನು ನನ್ನ ಇಷ್ಟ ಕಷ್ಟಗಳನ್ನ ಹೊರಹಾಕಿದ್ದು. ಆದರೇ ಪ್ರತಿ ಹೆಣ್ಣುಮಗಳು ಆನಂದಮಯವಾಗಿ ಅನುಭವಿಸಬೇಕಾದ ರಸಘಳಿಗೆಯಲ್ಲಿ ಇದು ಹೊರಗೆಬಂದಿದ್ದು ದುರಂತ. ಮರುಕ್ಷಣವೇ ಅಯ್ಯೋ ನಾನೇನು ಹೇಳಿಬಿಟ್ಟೆ, ಮುಂದೇನಾದೀತು ಎಂದು ಆತಂಕ ಕಾಡಿತು. ನಾನು ಹೇಳಿದ್ದು ಸರಿಯೋ, ಇಲ್ಲವೋ ಎಂದು ಕಾಡಿತು. ಆದರೆ ಅವರು ನಕ್ಕು, ‘ಅಂತು ಏನಾದರು ಮಾತಾಡಿದೆಯಲ್ಲಾ, ಹೌದು ನಿನ್ನ ಆಲೋಚನೆ ಸರಿಯಿದೆ, ನಾವು ಮದುವೆ ಮುಂಚೆಯು ಸರಿಯಾಗಿ ಮಾತಾಡಿಲ್ಲ, ಮೊದಲು ಅರ್ಥ ಮಾಡಿಕೊಳ್ಳೋಣ ಆಮೇಲೆ ಇವೆಲ್ಲಾ ಇದ್ದದ್ದೇ’ ಎಂದರು. ನನ್ನ ಆಲೋಚನೆ ಸರಿಯಿದೆ ಎಂದು ಮೊದಲು ಕೇಳಿದ್ದು ಅವರ ಬಾಯಲ್ಲೇ, ಒಂದು ತೆರನಾದ ಆನಂದ. ಜೊತೆಯಲ್ಲಿ ಹೌದಲ್ಲಾ, ಇಲ್ಲಾ ಅಂದರೇ ಮುಗಿಯಿತು ನಾನ್ಯಾಕೆ ಇಲ್ಲಾ ಅನ್ನದೇ ಹೆದರುತ್ತೇನೆ ಎಂಬ ಆಲೋಚನೆ ಶುರುವಾಯ್ತು. ನನ್ನ ಮಾತಿಗೆ ಸಿಕ್ಕ ಸಣ್ಣ ಬೆಂಬಲ ನನ್ನ ಬಗ್ಗೆ ನಾನು ಅರಿಯಲು ಒಂದು ದಾರಿಮಾಡಿಕೊಟ್ಟಿತ್ತು.
ನನ್ನ ಬಗ್ಗೆ ನಾನು ಅರಿಯುವ ದಾರಿಯಲ್ಲಿ, ನನ್ನ ಮೇಲೆ ನನಗೆ ನಂಬಿಕೆಯಿರಲಿಲ್ಲ, ಹಾಗೆ ನಾನು ನನ್ನನ್ನು ಮೌಲ್ಯೀಕರಿಸುತ್ತಿರಲಿಲ್ಲ, ನನ್ನ ಆಸಕ್ತಿಗಳು, ನನ್ನ ಆಸೆಗಳು ನನ್ನ ಹಕ್ಕು ಎಂದು ನಂಬಿರಲಿಲ್ಲ. ಆತ್ಮವಿಶ್ವಾಸವಿರದ ಕಾರಣ ನಾನು ಇತರರು ನನ್ನ ನಿರ್ಧಾರಗಳನ್ನು ಮನ್ನಿಸಲಿ ಎಂದು ಆಶಿಸುತಿದ್ದೆ, ಇದರ ಮೂಲ ಎಲ್ಲೋ ಒಂದುಕಡೆ ನನ್ನ ಬಾಲ್ಯದಲ್ಲಿದೆ ಅನಿಸುತ್ತೆ. ನನ್ನ ತಂದೆ ತಾಯಿ ನನಗೆ ಸದಾ ಕುಟುಂಬದ ಮಾತನ್ನು ಮೌಲ್ಯೀಕರಿಸುವುದಕ್ಕೆ ಹೇಳಿಕೊಟ್ಟರೇ ಹೊರೆತು ಒಬ್ಬ ವ್ಯಕ್ತಿಯಾಗಿ ನನ್ನ ಮಾತಿಗೆ ಮನ್ನಣೆ ಸಿಗಲಿಲ್ಲ. ಎಲ್ಲೋ ಬಾಲ್ಯದಲ್ಲಿ ನಡೆದ ಸಣ್ಣ ಅವಮಾನ ನನಗೇ ಗೊತ್ತಿಲ್ಲದೇ ನನ್ನ ವ್ಯಕ್ತಿತ್ವಕ್ಕೆ, ನನ್ನ ಸೆಲ್ಫ್ ಎಸ್ಟೇಮ್‍ಗೆ ದೊಡ್ಡ ಪೆಟ್ಟಾಗಿ ನನ್ನ ಜೀವನದುದಕ್ಕು ಸಾಗಿದೆ. ಇದೀಗ ನನ್ನ ಹಳೇ ನಂಬಿಕೆಗಳಿಂದ ಹೊರ ಬರುವುದಕ್ಕೆ ನನ್ನ ಗಂಡ ಒಳ್ಳೆಯ ಸ್ನೇಹಿತರಾಗಿ ಬೆಂಬಲಿಸುತ್ತಿದ್ದಾರೆ. ನನ್ನ ಅಭಿಪ್ರಾಯಗಳು ನಾನು ಯಾರು, ನನ್ನ ಅನಿಸಿಕೆಗಳೇನು, ನನ್ನ ನಿಲುವುಗಳೇನು, ಎಂಬಿದೆಲ್ಲವೂ ನನ್ನ ಸ್ವಂತಿಕೆಯ ಕುರುಹುಗಳು. ಇಂದಿಗೇ ‘ಇಲ್ಲಾ’ ಅನ್ನೋದು ಪಾಪವಲ್ಲಾ ಅಂತಾ ಗೊತ್ತಾಗಿದೆ. ನನ್ನ ನಿರ್ಧಾರಗಳು ಮತ್ತೊಬ್ಬರು ಮನ್ನಿಸದಿದ್ದರೂ, ನಾನು ಮನ್ನಿಸುತ್ತೇನೆ. ನನ್ನ ಮನಸ್ಸು ಮೊದಲಿಗಿಂತಲೂ ಈಗ ನೆಮ್ಮದಿಯಾಗಿದೆ. ಆ ಚಡಪಡಿಕೆಗಳು, ಆಂತರಿಕ ಯುದ್ಧಗಳು ಕಡಿಮೆಯಾಗಿವೆ. ಒಂದಷ್ಟು ಸ್ಪಷ್ಟತೆಗಳು ಬಂದಿವೆ. ಜೀವನದಲ್ಲಿ ದೊಡ್ಡ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಹಾತೊರೆಯುವ ನಾವು ಮೊದಲು ಇಂತಹ ಸಣ್ಣ ಸಣ್ಣ ವಿಷಯಗಳನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೇ ಇಡೀ ಜೀವನ ಈ ಗೊಂದಲಗಳು, ಅದರಿಂದ ಕಾಡುವ ಕೊರಗಿನಿಂದಲೇ ಮುಗಿದುಬಿಡುತ್ತದೆ ಎಂದು ಅರಿವಾಗಿದೆ ನನಗೆ. ಹಾ! ನಾನಿನ್ನು ನನ್ನ ಬಗ್ಗೆ ಅರಿಯುತ್ತಿದ್ದೇನೆ ಹಾಗೆಯೇ, ನನ್ನ ಗಂಡನೊಟ್ಟಿಗೆ ಸದ್ಯ ಒಳ್ಳೆಯ ಸ್ನೇಹಿತೆಯಾಗಿದ್ದೇನೆ.
No comments:
Post a Comment