Saturday, December 29, 2018

ಅನಾಮಿಕಳ ಅಂತರಂಗ





ಆಗರ್ಭ ಶ್ರೀಮಂತನ ಪುತ್ರಿ ನಾನು. ಹಣ, ವಿದ್ಯೆ, ರೂಪ ಎಲ್ಲವೂ ನನಗೆ ವರವಾಗಿತ್ತು. ಚಿಕ್ಕಂದಿನಿಂದಲೂ ಎಲ್ಲರೂ ನನ್ನ ಬದುಕನ್ನು ಕಂಡೂ, ತಮಗೂ ಅಂತಹ ಬದುಕು ಬೇಕೆಂದು ಹಂಬಲಿಸುತ್ತಿದ್ದರು. ಹೀಗಿರುವಾಗ ನನ್ನ ಸಂತೋಷಕ್ಕೆ ಜೊತೆಯಲ್ಲಿ ಅಹಂಕಾರಕ್ಕೆ ಪಾರವೆ ಇರಲಿಲ್ಲ. ನಾನು ಎಂಟನೆ ತರಗತಿಯಲ್ಲಿದ್ದಾಗ ನನ್ನ ಮನೆಯ ಕೆಲಸದಾಕೆಯ ಮಗಳು ಅದ್ಯಾವುದೋ ಭೀಕರ ಕಾಯಿಲೆಗೆ ತುತ್ತಾಗಿ ಹಾಸಿಗೆ ಹಿಡಿದಳು. ಅವಳಿಗು ಹೆಚ್ಚು ಕಮ್ಮಿ ನನ್ನ ವಯಸ್ಸೇ ಇತ್ತು. ಅವಳಮ್ಮ ಅವಳ ಚಿಕಿತ್ಸೆಗಾಗಿ ಅಪ್ಪನ ಬಳಿ ಹಣಕ್ಕಾಗಿ ಗೋಗರಿತಿದ್ದುದ್ದನ್ನು ನಾನು ಕಂಡಿದ್ದೆ. ನನ್ನಪ್ಪ ತನ್ನ ಕೈಲಾದ ಮಟ್ಟಿಗೆ ಸಹಾಯ ಮಾಡಿದ್ದರು ಕೂಡ. ಅವಳು ಸದಾ ಬಡವರಿಗೆ ಕಾಯಿಲೆ ಬರಬಾರದ್ದು ಎಂದು ಅಳುತಿದ್ದಳು. ಹೀಗೆ ಒಂದು ದಿನ ಅವಳ ಮಗಳು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಳು. ನನ್ನ ಜೀವನದಲ್ಲಿ ನಾನು ಕಂಡ ಮೊದಲ ಸಾವು ಅದಾಗಿತ್ತು. ನನ್ನ ತಿಳುವಳಿಕೆಯ ಮಟ್ಟಿಗೆ ಆಕೆ ಹಣವಿಲ್ಲದೇ ಸತ್ತು ಹೋದಳೆ ಹೊರೆತು ಕಾಯಿಲೆಯಿಂದಲ್ಲಾ. ಹಣವಿರುವ ನನಗೆ ಅಂತಹ ದುಃಸ್ಥಿತಿ ಬಾರದೆಂಬ ಯೋಚನೆ ಬಂದಿತ್ತು. ಹಣವಿರುವ ನಾನು ಅದೃಷ್ಟವಂತಳೂ ಮತ್ತು ಶ್ರೇಷ್ಠಳೂ ಎಂಬ ಭಾವನೆ ಅಚಲವಾಗಿ ಮನೆಮಾಡಿತ್ತು. ಇದರಿಂದ ನಾನು ಎಲ್ಲರನ್ನು ನಿಕೃಷ್ಟವಾಗೆ ಕಾಣುತಿದ್ದೆ.
ಇದೇ ನಂಬಿಕೆಯಲ್ಲಿ ಕಾಲೇಜು ಮೆಟ್ಟಿಲೇರಿದ್ದ ನನಗೆ, ಒಮ್ಮೆಲೆ ನನ್ನ ತಂದೆಯ ಸಾವು ನನ್ನ ಮನಸ್ಸಲ್ಲಿ ಒಂದು ಸಂಘರ್ಷವನ್ನೆ ಏರ್ಪಡಿಸಿತ್ತು. ಅಂದು ಯಾವುದೋ ಕಾರ್ಯಕ್ರಮಕ್ಕೆ ತೆರಳಿದ್ದ ನನ್ನ ತಂದೆ, ಕಾರ್ಯಕ್ರಮದ ಮಧ್ಯದಲ್ಲೇ ಕುಸಿದು ಬಿದ್ದರೆಂದು ನನಗೆ ಕರೆ ಬಂದಾಗ ಅದರ ಭೀಕರತೆ ನನಗೆ ಅರಿವಾಗಿರಲಿಲ್ಲ. ನಮ್ಮ ಮ್ಯಾನೆಜರ್ ಹಣ ತಲುಪಿಸುವವರು, ತಂದೆಯನ್ನು ಆಸ್ಪತ್ರೆಗೆ ದಾಖಲಿಸಿ ಎಂದು ಸಲೀಸಾಗಿ ಹೇಳಿದ್ದೆ. ಶ್ರೀಮಂತರಾದ ನಮ್ಮ ಬಳಿ ಹಣವಿರುವ ಕಾರಣ ನನ್ನ ತಂದೆಗೆ ಏನು ಅಪಾಯವಾಗದೆಂಬ ನಂಬಿಕೆ ನನ್ನದಾಗಿತ್ತು. ಆದರೆ ಮರುಕ್ಷಣವೇ ಅಲ್ಲಿಂದ ಬಂದ ಉತ್ತರ ನನ್ನ ಮೇಲೆ ಸಿಡಿಲೆರಗಿದಂತಾಯ್ತು. ಆಸ್ಪತ್ರೆಗೆ ಸೇರಿಸುವ ಅವಶ್ಯಕತೆ ಇಲ್ಲದಿರುವುದಾಗಿಯು ನನ್ನ ತಂದೆಯ ಪ್ರಾಣಪಕ್ಷಿ ಹಾರಿಹೋಗಿದೆ ಎಂದು ತಿಳಿಸಿದಾಗ ನನ್ನ ತಂದೆಯ ಸಾವಿನ ದುಃಖಕ್ಕಿಂತ ನನ್ನ ನಂಬಿಕೆ ಛಿದ್ರವಾದ ಶಾಕ್‍ನಿಂದ ಹೊರಬಾರದಾದೆ.
ಅದ್ಹೇಗೆ ಸಾಧ್ಯ ನನ್ನ ತಂದೆಗೆ ಸಾವು ಬರಲು ಹೇಗೆ ಸಾಧ್ಯ? ನಮ್ಮ ಬಳಿ ಹಣವಿತ್ತಲ್ಲಾ ಅವರಿಗೆ ಚಿಕಿತ್ಸೆ ಕೊಡಿಸಬಹುದಿತ್ತಲ್ಲಾ ಎಂದು ಹುಚ್ಚಿಯಂತೆ ಎಲ್ಲರ ಮೇಲೆ ಕೂಗಲಾರಂಭಿಸಿದೆ. ಈ ಘಟನೆ ನಂತರ ನಾನು ಖುಷಿಯಾಗಿ, ನೆಮ್ಮದಿಯಾಗಿ ಇದ್ದ ದಿನವೇ ನನಗೆ ನೆನಪಿಲ್ಲಾ. ನನ್ನ ತಂದೆ ತೀರಿಹೋದಾಗ ನನಗೆ 20 ವರ್ಷ. ನನ್ನ ಅಚಲವಾದ ಶ್ರೀಮಂತಿಕೆಯ ನಂಬಿಕೆ ಛಿದ್ರವಾಗಿ ನನಗೆ ನನ್ನ ಮೇಲಿದ್ದ ಆತ್ಮವಿಶ್ವಾಸ ಕುಂದಿತ್ತು. ಅದರೊಂದಿಗೆ ‘ನಾನು ಹೀಗೆ ಸತ್ತುಹೋದರೆ?’ ಎಂಬ ಭಯ ಸದ್ದಿಲ್ಲದೇ ನನ್ನ ಮನಸ್ಸಿಗೆ ಹೊಕ್ಕಿತ್ತು. ಈ ವಿಷಯ ನನ್ನನ್ನು ಸೇರಿದಂತೆ ಯಾರಿಗು ತಿಳಿಯದಾಯಿತು.
ನನ್ನ ತಂದೆಯ ಡೆತ್ ಸರ್ಟಿಫಿಕೇಟ್ ಮೇಲೆ ಡೆತ್ ಫ್ರಮ್ ಕಾರ್ಡಿಯಾಕ್ ಅರೆಸ್ಟ್ ಎಂದು ಬರೆದಿತ್ತು. ನಾನು ಅದನ್ನೆ ಮರಳಿ ಮರಳಿ ಓದಿದೆ. ನಂತರ ಕಾರ್ಡಿಯಾಕ್ ಅರೆಸ್ಟ್ ತಡೆಯಲು ಏನೆಲ್ಲಾ ಮಾಡಬೇಕು ಎಂದು ತಿಳಿದುಕೊಂಡೆ. ನಾನು ಅವನ್ನೆಲ್ಲಾ ಮಾಡಲಾರಂಭಿಸಿದೆ. ನನ್ನ ವಯೋಮಾನಕ್ಕೆ ನನ್ನ ತೂಕ, ಆರೋಗ್ಯ ಎಲ್ಲಾ ಸುಸ್ಥಿತಿಯಲ್ಲೇ ಇತ್ತು. ಅದನ್ನು ನಿರ್ವಹಿಸಿಕೊಂಡು ಹೋಗಾಬೇಕಾದುದಷ್ಟೇ ನಾನು ಮಾಡಬೇಕಾದದ್ದು. ಆದರೆ ನಾನು ನನಗೇ ಯಾವತ್ತು ಕಾರ್ಡಿಯಾಕ್ ಅರೆಷ್ಟ್ ಬಾರದ ಹಾಗೆ ಏನಾದರೂ ಆಪರೇಷನ್ ಪೂಜೆ ಇತ್ಯಾದಿ ದಾರಿಗಳಿವೆಯೇ ಎಂದು ಹುಡುಕಲಾರಂಭಿಸಿದೆ.
ಏನು ಕಾಯಿಲೆ ಇಲ್ಲದ ನಾನು ಏನಿಲ್ಲವೆಂದರೂ 3-4 ಮಾತ್ರೆಗಳು, 5-6 ರೀತಿಯ ಕಷಾಯಗಳು, ವಾರಕ್ಕೆ ಒಮ್ಮೆಯಾದರು ಆಯುಷ್ಯಹೋಮ ಮೃತ್ಯುಂಜಯ ಜಪಗಳನ್ನು ಮಾಡಿಸುತ್ತಿದ್ದೆ. ನನ್ನ ಸುತ್ತ ಇರುವವರಿಗೆ ನನ್ನದೊಂದು ಶಸ್ತಿನ ಜೀವನ, ನಾನೊಬ್ಬ ದೈವಿ ಭಕ್ತೆಯಾಗಿ ಕಾಣುತಿದ್ದೆ. ಆದರೆ ನನಗೆ ಮಾತ್ರ ತಿಳಿದಿತ್ತು ನಾನು ಎದುರಿಸುತ್ತಿದ್ದ ಸಂಕಟ. ಒಂದು ಕರಿದ ತಿಂಡಿ ತಿನ್ನಲು ಭಯ, ಒಂದು ಸಿಹಿ ತಿನ್ನಲು ಯೋಚನೆ. ರಾತ್ರಿ ಮಲಗಿದ್ದಾಗ ಹೃದಯಘಾತವಾದರೆ? ಎಂಬ ಆತಂಕದಿಂದಲೇ ಎಷ್ಟೋ ರಾತ್ರಿ ನಾನು ನಿದ್ದೇ ಇಲ್ಲದೇ ಮಲಗಿದ್ದೇನೆ.
ಕ್ರಮೇಣ ನಿದ್ದೇ ಭಾರದಾಗಿ ನಿದ್ದೇ ಗುಳಿಗೆಗಳಿಂದ ನಾನು ನಿದ್ರೆಗೆ ಜಾರುವಂತಾದೆ. ಆದರೆ ನನ್ನಲ್ಲೀ ಏನೊ ತೊಂದರೆ ಇದೆ ಎಂಬುದು ನನಗಾಗಲಿ, ನನ್ನ ಕುಟುಂಬಸ್ಥರಿಗಾಗಲೀ ನನ್ನ ಸ್ನೇಹಿತರಿಗಾಗಲಿ ತಿಳಿಯಲೇ ಇಲ್ಲ. ನನ್ನ ಜೀವನ ಶೈಲಿ, ಚಿಕ್ಕವಯಸ್ಸಿಗೆ ನನಗಿದ್ದ ಶಿಸ್ತು, ದೈವ ಭಕ್ತಿ ಇವೆಲ್ಲವನ್ನು ಕಂಡು ನನ್ನನ್ನು ಮೆಚ್ಚಿ ನನ್ನ ತಂದೆಯ ಸ್ನೇಹಿತರ ಮಗ ನನ್ನನ್ನು ವರಿಸಿದರು.
ನನಗೆ ಸದಾ ನನ್ನ ಮೇಲೆಯೆ ಗಮನ. ಹೇಗಾದರು ಮಾಡಿ ನಾನು ನನ್ನ ಚಿಕ್ಕವಯಸ್ಸಿನಲ್ಲೀ ನಂಬಿದ್ದನ್ನು ಉಳಿಸಿಕೊಳ್ಳಬೇಕಿತ್ತು, ಅದನ್ನು ಸತ್ಯ ಮಾಡಬೇಕಿತ್ತು. ಅದಕ್ಕಾಗಿ ನಾನು ಶತ ಪ್ರಯತ್ನ ಮಾಡಿತ್ತಿದ್ದೆ. ಸಾವಿಗೆ ಸವಾಲಾಕಿ ನಿಂತಿದ್ದೆ. ನನ್ನನ್ನು ಬಯಸಿ ಬಯಸಿ ವರಿಸಿದ ನನ್ನವರಿಗೆ ನಾನು ಪ್ರೀತಿ ಹಂಚಲೇ ಇಲ್ಲ. ಅವರೊಂದಿಗೆ ರಮಿಸಲಿಲ್ಲ, ಬೆರೆಯಲಿಲ್ಲ, ಹೊರಗಡೆ ಸುತ್ತಲಿಲ್ಲ. ನನಗೆ ಅವರು ಬೇಕಾಗೆ ಇರಲಿಲ್ಲ. ನನ್ನ ಗಮನವೆಲ್ಲವೂ ನಾನು ಸಾಯದ ಹಾಗೆ ತಪ್ಪಿಸುವಲ್ಲೇ ಇತ್ತು. ನನ್ನೊಂದಿಗೆ ಅವರಿಗೆ ಬದುಕಲು ತ್ರಾಸಾಗ ತೊಡಗಿತು. 1ವರ್ಷದಲ್ಲೇ ನನಗೆ ವಿಚ್ಚೇದನವಿತ್ತರು ಅವರು ನನಗೆ ವಿಚ್ಚೇದನ ವಿತ್ತಾಗ ನನಗೆ 26 ವರ್ಷ.
ಸಮಾಜ ನನ್ನನ್ನು ಗಂಡ ಬಿಟ್ಟವಳೆಂದು ಗುರುತಿಸುವವರೆಗು ನನಗೆ ವಿಚ್ಛೇದನದ ಬಿಸಿ ತಟ್ಟಿರಲಿಲ್ಲ. ಆದರು ನನಗೆ ಅದರ ಬಗ್ಗೆ ಚಿಂತೆಯಾಗಲಿಲ್ಲ. ನನಗೆ ನಮ್ಮ ತಂದೆಯ ವ್ಯವಹಾರ, ಆಸ್ತಿ ಯಾವುದರ ಬಗ್ಗೆಯೂ ಗಮನವಿರಲಿಲ್ಲ. ಆಸಕ್ತಿಯೂ ಇರಲಿಲ್ಲ. ನನ್ನ ತಂದೆಯಗಳಿಕೆಯನ್ನು ಕಾಪಾಡಿಕೊಳ್ಳುವುದರಲ್ಲೀ ನನ್ನ ಅಮ್ಮ ಸಂಪೂರ್ಣ ಮಗ್ನರಾಗಿದ್ದರು. ನನ್ನ ಬಗ್ಗೆ ಗಮನಕೊಡಲು ಅವರಿಗೆ ಸಮಯವಿರಲಿಲ್ಲ. ನಾನು ಅದನ್ನು ಬಯಸುತ್ತಲು ಇರಲಿಲ್ಲ. ಆದರೆ ದೇಗುಲಗಳ ದರ್ಶನ, ಹೋಮಗಳು ಫಾರಿನ್ ಔಷಧಿಗಳಿಗೆ ನಾನು ಸುರಿಯುತ್ತಿದ್ದ ಹಣದಿಂದ ನನಗೂ ನನ್ನ ಅಮ್ಮನಿಗೂ ಆಗಾಗ್ಗೆ ಮನಸ್ತಾಪಗಳಾಗುತ್ತಿದ್ದವು. ಅಮ್ಮನ ಹತ್ತಿರ ಏಕೆ ಕೈಚಾಚ ಬೇಕು ಎಂದು ನನ್ನ ಒಡವೆಗಳನ್ನೆಲ್ಲಾ ಮಾರಿ ನಾನು ನನ್ನ ಸಾವನ್ನು ತಪ್ಪಿಸುವ ಕಾರ್ಯಕ್ಕೆ ಹಣ ಸುರಇಯುತ್ತಿದ್ದೆ.
ಹೀಗಿರುವಾಗ ನನಗೆ ಒಮ್ಮೆಲೆ ನಿಶ್ಶಕ್ತಿ, ಸುಸ್ತು ಆಗ್ಗಾಗೆ ತಲೆಸುತ್ತು ಕಾಡಲಾರಂಭಿಸಿತು. ತಪಾಸಣೆ ಮಾಡಿಸಿದಾಗ ನನಗೆ ಬಿ.ಪಿ ಇದೆ ಎಂದು ತಿಳಿದು ಬಂತು. ಅಲ್ಲಿಗೆ ನಾನು ಕುಸಿದು ಹೋದೆ. ನನಗಾಗ 28 ವರ್ಷ. ಕಟ್ಟುನಿಟ್ಟಿನ ಆಹಾರಕ್ರಮ, ಔಷಧಗಳು ವ್ಯಾಯಾಮ ಎಲ್ಲಾ ಮಾಡುತ್ತಿದ್ದೆ. ಆದರೆ ಬಿ.ಪಿ ಕಂಟ್ರೋಲ್ಗೆ ಬರಲೇ ಇಲ್ಲ. ಬದಲಿಗೆ ಏರ ತೊಡಗಿತು. ಹೀಗೆ ಒಂದು ದಿವಸ ಬೆಳಗ್ಗಿನಿಂದಲೇ ನನಗೆ ವಿಪರೀತ ತಲೆನೋವು ಕಾಡಲಾರಂಭಿಸಿತು. ಒಂದೆರಡು ಭಾರಿ ವಾಂತಿಯು ಆಗಿತ್ತು. ನಾನು ವಿಪರೀತ ಗಾಬರಿಗೊಂಡೆ ಬಳಿಕ ಏನಾಗುತ್ತಿದ್ದೆ ಎಂದು ಅರಿವಾಗುವ ಮೊದಲೇ ನಾನು ತಲೆ ಹಿಡಿದುಕೊಂಡು ನೆಲಕಚ್ಚಿದೆ. ನನ್ನ ನಾಲಿಗೆ ಹೊರಬಂದು ನನಗೆ ಮಾತನಾಡದ ಹಾಗೆ ಆಗಿತ್ತು. ತಕ್ಷಣವೇ ನನ್ನನ್ನು ಆಸ್ಪತ್ರೆಗೆ ಸೇರಿಸಿದರು. ಐ.ಸಿ.ಯುನಲ್ಲಿ ನನಗೆ ಎಲ್ಲಾ ಅಸ್ಪಷ್ಟವಾಗಿ ಗೋಚರಿಸುತಿತ್ತು ಹಾಗೆ ಕಣ್ಣುಮುಚ್ಚಿದೆ.
ನನಗೆ ಮೂತ್ರವಿಸರ್ಜನೆಗೆ ಅವಸರವಾಗಿ ನಾನು ಎಚ್ಚರಗೊಂಡೆ. ಏಳಲು ಆಗುತ್ತಿಲ್ಲ, ಹತ್ತಿರದಲ್ಲಿದ್ದ ನರ್ಸ್ ಕರೆಯಲು ಯತ್ನಿಸಿದಾಗ ನನ್ನ ಮಾತು ತೊದಲಿಸಿತು. ನನಗೆ ಬಹಳ ದುಃಖವಾಯಿತು. ನಾನು ನರ್ಸ್ ಕರೆದು ಬಾತ್ರೂಂಗೆ ಹೋಗ ಬೇಕೆಂದು ವಿವರಿಸಿದೆ. ಅವರು ನನಗೆ ಬೆಡ್‍ಪ್ಯಾನ್ ಕೊಟ್ಟರು. ನನಗೆ ಬಹಳವೆ ಅಸಹ್ಯವಾಯಿತು. ಇಷ್ಟೆಲ್ಲಾ ಎಚ್ಚರ ವಹಿಸಿದರು ನನಗೆ ಹೀಗಾಗಲು ಹೇಗೆ ಸಾಧ್ಯವೆಂದು ಬಹಳವಾಗೆ ಕುಗ್ಗಿದೆ.
ಮಾರನೆಯ ದಿನ ನನ್ನ ಗಂಡ ಹತ್ತಿರ ಬಂದು, ನನ್ನ ತಲೆಯ ಮೇಲೆ ಕೈಯ್ಯಾಡಿಸಿ ಹೇಗಿರುವೆ ಎಂದರು. ನನಗೆ ರೋಮಾಂಚನ ಏನೋ ಹೊಸ ಅನುಭವ, ಇಷ್ಟು ದಿನ ಈ ಪ್ರೀತಿ ಅನುಭವವೇ ನನಗಿದ್ದಿರಲಿಲ್ಲ. ಆ ನೋವಿನಲ್ಲೂ ನನ್ನವರ ಮಾತು ನನಗೆಹಿತವೆನಿಸಿತ್ತು. ಅಂದು ನಾನು ಮನಸ್ಸೋ ಇಚ್ಛೇ ಅತ್ತು ಅವರೊಡನೆ ಮಾತನಾಡಿದೆ. ಏನೋ ಒಂದು ಬಗೆ ಹಿತವೆನಿಸಿತು. ಅವರು ಮತ್ತೆ ನಾಳೆ ಬರುವುದಾಗಿ ಹೇಳಿ ಹೊರಟುಹೋದರು. ಅವತ್ತು ರಾತ್ರಿ ನನಗೆ ನಾನು ಸತ್ತು ಹೋದರೆ ಎಂಬ ಭಯ ಕಾಡಲಿಲ್ಲ. ಈ ರೀತಿ ಕೈಲಾಗದವಳಾಗಿ ಮತ್ತೊಬ್ಬರಿಗೆ ಹೊರೆಯಾಗುವುದಕ್ಕಿಂತ ಸಾಯುವುದೇ ಲೇಸು ಎಂದೆನಿಸಿತು. ನನ್ನ ಮನಸ್ಸು ನನ್ನ ಮಾತುಗಳಿಗೆ ಕಿವಿಗಳನ್ನು ಬಯಸುತಿತ್ತು. ವಿಚ್ಛೇದನ ಹೊಂದಿದ ಬಳಿಕವು ನನ್ನನ್ನು ಕಾಣಲು ಬಂದ ಅವರನ್ನು ಬಯಸುತಿತ್ತು. ಈ ಬಯಕೆಗಳ ನಡುವೆ ನನ್ನ ಸಾವಿನಭಯ ಮರೆಯಾಗಿತ್ತು.
ಮಾರನೆಯ ದಿವಸ ಅವರ ದಾರಿಯನ್ನೆ ಕಾದು ಕುಳಿತಿದ್ದ ನನಗೆ ದೇಹದ ನೋವು ಕಾಣಲಿಲ್ಲ. ನನ್ನ ತೊದಲು ಮಾತಿಗೆ ಕಿವಿಯಾದ ಅವರ ಎದೆಗೆ ಒರಗಿ ನನ್ನ ಮನಸ್ಸಿನ ಭಾವೋದ್ವೇಗನ್ನೆಲ್ಲಾ ಹಂಚಿಕೊಳ್ಳುವ ಉತ್ಸಾಹ ನನಗೆ. ಗಳಿಗೆ ಗಳಿಗೆಯನ್ನು ಲೆಕ್ಕಹಾಕುತ್ತಿದ್ದ ನನಗೆ, ಆ ರಸಗಳಿಗೆ ಎದುರಾದಾಗ ಆನಂದಕ್ಕೆ ಪಾರವೇ ಇರಲಿಲ್ಲ. ನನ್ನ ದುರದೃಷ್ಟಕ್ಕೆ ಈ ಅನುಭವವೆಲ್ಲಾ ಐ.ಸಿ.ಯು ನಲ್ಲಿ ಆಗುತ್ತಿದ್ದುದ್ದೇ ಸೋಜಿಗ.
ನಾನು ಅವರನ್ನು ಕಂಡೊಡನೆಯೆ ಮುಖ ಮಂದಹಾಸ ಬೀರಿತ್ತು. ಅವರು ನನ್ನನ್ನು ಕಂಡು ಮುಗುಳ್ನಕ್ಕರು. ನಾನು ಅವರ ಎದೆಗೆ ಒರಗಿ, ‘ನಾನು ಸತ್ತರೂ ಪರವಾಗಿಲ್ಲ’ ಎಂದೆ. ಅವರು, ‘ನಿನಗೆ ಸಾಯುವಂತಹದ್ದು ಏನು ಆಗಿಲ್ಲಾ’ ಎಂದರು. ನಾನು ಇಷ್ಟು ದಿನ ಸತ್ತುಹೋಗುತ್ತೇನೆ ಎಂದು ಭಯಭೀತಳಾಗಿದ್ದೆ, ಇನ್ನುಮುಂದೆ ಸತ್ತರು ಪರವಾಗಿಲ್ಲ ಎಂದೆನಿಸುತ್ತಿದೆ ಎಂದೆ. ಒಂದೊಂದಾಗಿ ಮನಸ್ಸಲ್ಲಿ ಇದ್ದ ಭಯ, ದುಃಖ ಸಾವನ್ನು ತಡೆಯುವ ನನ್ನ ಹೋರಾಟದ ಬಗ್ಗೆಯಲ್ಲ ಹೇಳಿದೆ. ನನ್ನ ತೊದಲು ಮಾತನ್ನು ತಾಳ್ಮೆಯಿಂದ ಆಲಿಸಿದರು. ಗಂಟೆಗಳುರುಳಿದ್ದೇ ತಿಳಿಯಲಿಲ್ಲಾ. ಆ ದಿನ ರಾತ್ರಿ ನನ್ನ ಮನಸ್ಸು ಏನೋ ಒಂದು ರೀತಿ ಹಕ್ಕಿಯಂತಾಗಿತ್ತು. ಗಾಳಿಯಲ್ಲಿ ತೇಲಾಡಿದ್ದ ಅನುಭವ. ಹಾಯಾಗಿ ನಿದ್ರೆ ಮಾಡಿದೆ.
ಸ್ವಲ್ಪ ದಿನದಲ್ಲೇ ನನ್ನ ಆರೋಗ್ಯ ಚೇತರಿಸಿಕೊಂಡಿತು. ನನ್ನವರು ನನಗೆ ಸಾವು ಎಂಬುದು ಸತ್ಯ. ಅದಕ್ಕೆ ಭೇದ ಭಾವವಿಲ್ಲ ಎಂಬುದನ್ನು ಅರ್ಥಮಾಡಿಸಿದರು. ಅದನ್ನು ನಾನು ಒಪ್ಪಿಕೊಂಡೆ. ಇರುವಷ್ಟು ದಿನ ನೆಮ್ಮದಿಯಾಗಿ ಬದುಕೋಣವೆಂದರು, ಸಮ್ಮತಿಸಿದೆ. ಇವತ್ತಿಗು ನನ್ನ ದೇಹದ ಎಡಭಾಗ ಪೂರ್ಣ ಚೇತರಿಕೆ ಕಂಡಿಲ್ಲ. ಆದರೆ ನಾನು ಮೊದಲಿಗಿಂತಲೂ ಬಹಳ ಸುಖಿಯಾಗಿದ್ದೇನೆ. ನನಗೀಗ 32 ವರ್ಷ.
ಸಾವಿನ ಬಗ್ಗೆ ನನಗೆ ಭಯವಿಲ್ಲ. ಸಾವು ಬಂದರೇ ಅದನ್ನು ಸ್ವೀಕರಿಸುವುದನ್ನು ಬಿಟ್ಟರೇ, ಬೇರೆ ದಾರಿ ಇಲ್ಲ ಎಂಬುದನ್ನು ಒಪ್ಪಿಕೊಂಡಿದ್ದೇನೆ. ಬದುಕನ್ನು ಪ್ರೀತಿಸುತಿದ್ದೇನೆ. ಅದಕ್ಕೂ ಮಿಗಿಲಾಗಿ ನನ್ನವರು ನನ್ನನ್ನು ಹೆಚ್ಚು ಪ್ರೀತಿಸುತ್ತಾರೆ. ಪ್ರೀತಿಯೊಂದೆ ಇಲ್ಲಿ ಶಾಶ್ವತ, ಪ್ರೀತಿ ಇದ್ದ ಕಡೆ ಭಯ, ದ್ವೇಷ ಅಸೂಯೆಗಳಿಗೆ ಜಾಗವಿಲ್ಲ ಎಂಬುದನ್ನು ಅರಿತಿದ್ದೇನೆ. ಪ್ರಕೃತಿಯ ವಿರುದ್ಧ ಹುಚ್ಚು ಹೋರಾಟ ನಡೆಸುವ ಬದಲು ಪ್ರಕೃತಿಯಿತ್ತ ಬದುಕನ್ನು ಇದ್ದ ಹಾಗೆ ಸ್ವೀಕರಿಸೋಣ, ಎಷ್ಟಾದರು ಸಾವಿಲ್ಲದ ಮನೆಯಲ್ಲೀ ಸಾಸಿವೆ ತರಲು ಸಾಧ್ಯವಿಲ್ಲ ಅಲ್ಲವೇ?


3 comments: